ಸೋಮವಾರ, ಡಿಸೆಂಬರ್ 9, 2019
26 °C
ರಸ್ತೆ ಕಾಮಗಾರಿಗೆ ಚಾಲನೆ, ಶಾಸಕ ಕೆ.ಶ್ರೀನಿವಾಸಗೌಡ ತಿರುಗೇಟು

ಮಾಜಿ ಶಾಸಕರಿಗೆ ಸೋಲಿನ ನೋವು ಕಡಿಮೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡುವ ಮಾಜಿ ಶಾಸಕರಿಗೆ ಪ್ರತಿಕ್ರಿಯೆ ನೀಡುವ ಅವಶ್ಯತೆಯಿಲ್ಲ. ಈಗಾಗಲೇ ಜನ ಅವರಿಗೆ ಪಾಠ ಕಲಿಸಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿರುಗೇಟು ನೀಡಿದರು.

ತಾಲ್ಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ₨ 3 ಕೋಟಿ ವೆಚ್ಚದ ೧೭ ಕಿ.ಮೀ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ‘ಮಾಜಿ ಶಾಸಕ ಕೆ.ಶ್ರೀನಿವಾಸಗೌಡ ಸೋಲಿನ ನೋವಿನಲ್ಲಿದ್ದಾರೆ, ಬೇಗ ನೋವು ವಾಸಿಯಾಗಲಿ’ ಎಂದರು.

‘ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿದ್ದರೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಸರ್ಕಾರದ ಅನುದಾನ ಸದ್ಬಳಕೆಯಾಗಬೇಕು, ಯಾವುದೇ ಕಾಮಗಾರಿ ಕಳಪೆಯಾಗಿದ್ದರೆ ಸಹಿಸಲು ಸಾಧ್ಯವಿಲ್ಲ’ ಎಂದರು.

‘ಮತದಾರರ ಋಣ ತೀರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಲಾಗಿದ್ದು, ಪ್ರತಿ ಗ್ರಾಮದಲ್ಲೂ ಸಿಮೆಂಟ್ ರಸ್ತೆ ನಿರ್ಮಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದಲ್ಲಿ ಶ್ರಮದಾನವನ್ನು ಜನ ಮರೆತು ಹೋಗಿದ್ದಾರೆ. ಮನೆ ಮುಂದಿನ ಚರಂಡಿ ಸ್ವಚ್ಛತೆಗೂ ಸರ್ಕಾರ, ಗ್ರಾಮ ಪಂಚಾಯಿತಿ ಕಡೆ ಕೈತೋರಿಸುವ ಪರಿಪಾಠ ಹೆಚ್ಚಾಗಿದೆ. ಸ್ವಚ್ಛತೆಯ ಮಾನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು’ ಎಂದರು.

‘ನನ್ನದು ಸಿ.ಬೈರೇಗೌಡರ ಸಿದ್ದಾಂತ. ಜನ ಅಭಿವೃದ್ದಿಯನ್ನು ನೋಡಿ ಮತ ನೀಡುವ ಕ್ಷೇತ್ರ ಇದಾಗಿತ್ತು. ಇತ್ತೀಚಿನ ದಿನಗಳಲ್ಲಿ ಮತವನ್ನು ಮಾರಿಕೊಳ್ಳುವ ಪರಿಪಾಠ ಕೆಲವು ನಾಯಕರಿಂದಲೇ ಆರಂಭವಾಗಿದೆ’ ಎಂದು ವಿಷಾದಿಸಿದರು.

‘ಚುನಾವಣೆಗಳಲ್ಲಿ ಆಯಾ ಗ್ರಾಮದ ಮುಖಂಡರೇ ಮತಗಟ್ಟೆ ಬಳಿ ಅಡಿಕೆ ಎಲೆ ನೀಡಿ ಮತಯಾಚಿಸುತ್ತಿದ್ದುದು ಸಂಪ್ರದಾಯವಾಗಿತ್ತು, ಈಗಿನ ರಾಜಕಾರಣ ಹಣಮಯವಾಗಿದೆ. ಜನತೆ ಅಭಿವೃದ್ದಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡುತ್ತಾರೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಎಂಜಿನಿಯರ್ ಶ್ರೀನಿವಾಸ್, ಗ್ರಾಮದ ಮುಖಂಡರಾದ ಅಶೋಕ್, ಬೈರೇಗೌಡ, ಶ್ರೀನಿವಾಸ್, ಗೋಪಾಲ್, ಮುನೇಶ್, ಮುನಿರಾಜು, ಆಂಜಿನಪ್ಪ, ಪ್ರದೀಪ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)