ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಮನಸ್ಸು ಜಾಗೃತಗೊಳ್ಳಲಿ

ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶ್ರೀನಿವಾಸಪ್ರಸಾದ್ ಕಿವಿಮಾತು
Last Updated 1 ನವೆಂಬರ್ 2019, 15:59 IST
ಅಕ್ಷರ ಗಾತ್ರ

ಕೋಲಾರ: ‘ಒಂದು ಭಾಷೆಯ ಮೇಲಿನ ಪ್ರೀತಿಯು ಮತ್ತೊಂದು ಭಾಷೆ ಮೇಲಿನ ದ್ವೇಷವಲ್ಲ. ಬಳಸುವ ಭಾಷೆ ಬಗ್ಗೆ ಜ್ಞಾನ, ಸ್ವಷ್ಟತೆ, ಶುದ್ದತೆ ಇರಬೇಕು’ ಎಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.

ಕಾಲೇಜಿನಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಡಿವಿಜಿ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಮೋಜಿಗೆ ಮಾತನಾಡುವ ಅಸಭ್ಯ ಶೈಲಿ ತೊರೆಯಬೇಕು. ಕನ್ನಡದ ಮನಸ್ಸುಗಳು ಜಾಗೃತವಾಗಿ ಕನ್ನಡದ ವಾತವರಣ ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಆಧುನಿಕ ಯುಗದಲ್ಲಿ ದೇಸಿ ಭಾಷೆಯ ಸೊಗಡು ಮರೆಯಾಗಿ ಕನ್ನಡದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಭಾಷೆ ಒಪ್ಪಿಕೊಳ್ಳುವ ವಿಶಾಲ ಹೃದಯವಂತರಾಗಬೇಕು. ಸ್ಥಳೀಯ ಭಾಷೆಗೆ ಆದ್ಯತೆ ನೀಡದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ’ ಎಂದು ಹೇಳಿದರು.

‘ಮಾತನಾಡುವ ಭಾಷೆ ಬಗ್ಗೆ ಜ್ಞಾನ ಇರಬೇಕು. ಭಾಷೆ ಬಳಕೆಯಲ್ಲಿ ಕ್ರಮಬದ್ಧತೆ, ಸ್ವಷ್ಟತೆ ಇಲ್ಲದಿದ್ದರೆ ಅಪಾರ್ಥವಾಗಿ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ರಾಜ್ಯದ ಗಡಿ ಜಿಲ್ಲೆಯ ಕೋಲಾರದಲ್ಲಿ ಕನ್ನಡ ಭಾಷೆ ಬಳಕೆಯಲ್ಲಿ ತೆಲುಗು, ತಮಿಳು ಪದಗಳ ಮಿಳಿತ ಕಾಣಬಹುದು’ ಎಂದು ವಿವರಿಸಿದರು.

‘ಡಿವಿಜಿ, ಮಾಸ್ತಿ, ಗೋವಿಂದ ಪೈ ಸೇರಿದಂತೆ ಹಲವು ಕವಿಗಳ ಹಾಗೂ ಸಾಹಿತಿಗಳ ಮಾತೃ ಭಾಷೆ ಬೇರೆಯಾಗಿದ್ದರೂ ಅವರು ಕನ್ನಡ ಭಾಷೆ ಬಗ್ಗೆ ಇರಿಸಿಕೊಂಡಿದ್ದ ಪ್ರೀತಿ, ಗೌರವದಿಂದ ಸಾಧನೆ ಮಾಡಲು ಸಾಧ್ಯವಾಯಿತು. ಆದರೆ, ಇಂದು ಭಾಷೆ ಬಳಕೆಯಲ್ಲಿನ ನಿರ್ಲಕ್ಷ್ಯದ ಕಾರಣಕ್ಕೆ ಕನ್ನಡಿಗರಿಂದ ಕನ್ನಡ ಕಾಪಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ನಿತ್ಯೋತ್ಸವವಾಗಲಿ: ‘ಸಮಾಜದಲ್ಲಿ ಸಾಕಷ್ಟು ಮಂದಿ ಆರ್ಥಿಕವಾಗಿ ಸ್ಥಿತಿವಂತರಿದ್ದಾರೆ. ಅವರು ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ನೆರವು ನೀಡಿದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಸಮಾಜ ಸೇವಕ ವೇಣು ತಿಳಿಸಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ನೀಡುವ ಉದ್ದೇಶಕ್ಕೆ ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಆದರೆ, ಸಂಪನ್ಮೂಲ ಕೊರತೆಯಿಂದ ಶಾಲಾ ಕಾಲೇಜುಗಳಲ್ಲಿ ಸಮರ್ಪಕ ಕಲಿಕಾ ವಾತಾವರಣವಿಲ್ಲ. ರಾಜ್ಯೋತ್ಸವದ ಆಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು, ಬದಲಿಗೆ ನಿತ್ಯೋತ್ಸವವಾಗಬೇಕು’ ಎಂದು ಸಲಹೆ ನೀಡಿದರು.

‘ಪೋಷಕರ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಗೆ ಪೆಟ್ಟು ಬೀಳುತ್ತಿದೆ. ಪೋಷಕರು ಮಕ್ಕಳನ್ನು ಯಾವುದೇ ಮಾಧ್ಯಮದ ಶಾಲೆಗೆ ಸೇರಿಸಿದರೂ ಮಾತೃ ಭಾಷೆ ಕನ್ನಡವನ್ನೇ ಬಳಕೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಭಾಷಾ ಜಾಗೃತಿ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಹೋರಾಟದ ಫಲ: ‘ಕನ್ನಡ ಭಾಷೆಯ ಪ್ರಾಂತ್ಯವಾರು ರಚನೆಯಿಂದ ರಾಜ್ಯ ಗುರುತಿಸಲಾಯಿತು. ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕನ್ನಡ ಭಾಷೆಯ ಪ್ರಾಂತ್ಯಗಳು ಹಂಚಿ ಹೋಗಿದ್ದವು. ಅ.ನ.ಕೃಷ್ಣರಾಯರ ಹೋರಾಟದ ಫಲವಾಗಿ ಆ ಪ್ರಾಂತ್ಯಗಳನ್ನು ಒಗ್ಗೂಡಿಸಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯವೆಂದು ನಾಮಕರಣ ಮಾಡಲಾಯಿತು. ಆ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತಿದ್ದೇವೆ’ ಎಂದು ಕಾಲೇಜಿನ ಉಪ ಪ್ರಾಂಶುಪಾಲ ಶ್ರೀರಾಮರೆಡ್ಡಿ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ, ಉಪನ್ಯಾಸಕ ಅಶ್ವತ್ಥ್‌ಗೌಡ, ಶಿಕ್ಷಕ ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT