ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಂಗಭೂಮಿ ಸೌಂದರ್ಯ ಕಟ್ಟಿ ಬೆಳೆಸೋಣ’

ರಂಗ ನೇಪಥ್ಯ ಶಿಬಿರದ ಸಮಾರೋಪದಲ್ಲಿ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿಕೆ
Last Updated 23 ಫೆಬ್ರುವರಿ 2021, 15:14 IST
ಅಕ್ಷರ ಗಾತ್ರ

ಕೋಲಾರ: ‘ಆದಿಮ ರಂಗ ಗುಡಿಯು ನೆಲಗುಡಿ ಇದ್ದಂತೆ. ಇಲ್ಲಿ ಕಲಿತೆವು ಎಂಬುದನ್ನು ಮರೆಯೋಣ, ನೆಲ ಸಂಸ್ಕೃತಿಯ ನೆನಪುಗಳೊಂದಿಗೆ ನಡೆಯೋಣ, ರಂಗಭೂಮಿ ಸೌಂದರ್ಯ ಕಟ್ಟಿ ಬೆಳೆಸೋಣ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಇಲ್ಲಿನ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ರಂಗ ನೇಪಥ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಹೊಡೆದು ಕಟ್ಟುವುದು ಸೌಂದರ್ಯ ಹೆಚ್ಚಿಸುವುದಕ್ಕೆ ಎನ್ನುವುದು ರಂಗದ ಮೇಲೆ. ರಂಗ ಗುಡಿಯಲ್ಲಿ ನಿಂತು ಮಾತನಾಡಬೇಕಾದರೆ ನೆಲದ ಜತೆ ನಡೆಯಬೇಕು. ನೆಲ ನಮ್ಮನ್ನು ಮಾತನಾಡಿಸುತ್ತೆ’ ಎಂದು ತಿಳಿಸಿದರು.

‘ನೇಪಥ್ಯ ಎಂದರೆ ರಂಗಭೂಮಿಗೆ ಸಂಬಂಧಿಸಿದ ಅಭಿನ್ನವಾಗಿರುವ ನಾಟಕದ ವಿಭಾಗವಲ್ಲ. ಅದು ನಾಟಕದ ವಸ್ತು ವಿನ್ಯಾಸದ ಜತೆಗೆ ಬೆಳಕು, ವಸ್ತ್ರಾಲಂಕಾರ, ಧ್ವನಿ, ಪ್ರಸಾಧನ, ಸಂಗೀತದ ಅಂಶ ಒಳಗೊಂಡಿರುತ್ತದೆ. ಆದಿಮದಲ್ಲಿ ಪ್ರಯೋಗಿಸಿದ ‘ಕಣ್ಣಾಸ್ಪತ್ರೆ ಕ್ಯೂನಲ್ಲಿ ಜಗದಾಂಬೆ’ ನಾಟಕಕ್ಕೆ ಸುಮಾರು ₹ 2 ಲಕ್ಷ ರಂಗ ಸಜ್ಜಿಕೆ, ಪರಿಕರಗಳಿಗೆ ಖರ್ಚಾಗಿತ್ತು. ನೆಲಪಠ್ಯಕ್ಕೆ ಪೂರಕವಾಗಿ ಸಾಧ್ಯತೆ ವಿಸ್ತರಿಸಿಕೊಳ್ಳುವ ಅಗತ್ಯವಿತ್ತು’ ಎಂದರು.

‘ನಾಟಕ ‘ಲೆಟ್ ಪಾಲಿ ತ್ರೊ’ನಲ್ಲಿ ರಂಗಸಜ್ಜಿಕೆ, ಪರಿಕರಗಳಿಗೆ ಹೆಚ್ಚು ಆದ್ಯತೆ ನೀಡದೆ ರಚಿಸಿ ಪ್ರಯೋಗಿಸಲಾಯಿತು. ಮುರಿದು ಕಟ್ಟುವುದು ಎನ್ನುವಾಗ ಬಿದಿರಿನೊಂದಿಗೆ ಸುಮಾರು 2 ಕೃತಿಗಳಾಗುವಷ್ಟು ಅಧ್ಯಯನ ಆದಿಮದಲ್ಲಿ ನಡೆಸಲಾಗಿದೆ. ಬಿದಿರನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯೋಗ ನಡೆಸಲಾಯಿತು’ ಎಂದು ವಿವರಿಸಿದರು.

ನಗರ ಕೇಂದ್ರಿತ: ‘ರಂಗಭೂಮಿ ಹೊಡೆದು ಕಟ್ಟುವುದಾಗಬೇಕು. ರಂಗಭೂಮಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ನಗರ ಕೇಂದ್ರಿತ ಆಗಿದೆ. ನಾಟಕ ಅಕಾಡೆಮಿ ಹಾಗೂ ಆದಿಮ ಸಂಸ್ಥೆಯು ನಗರ ಕೇಂದ್ರಿತವಾಗಿರುವ ರಂಗ ಚಟುವಟಿಕೆಗಳನ್ನು ಮತ್ತೆ ಗ್ರಾಮೀಣ ಭಾಗಕ್ಕೆ ತರುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ರಂಗಭೂಮಿಯು ವಿಶ್ವ ಜ್ಞಾನಶಾಖೆ. ಗ್ರೀಕ್‌ನ ಅನೇಕ ನಾಟಕಾರರು ರಂಗಭೂಮಿಯನ್ನು ಕಟ್ಟುವ ಕೆಲಸ ಮಾಡಿದರು. ಅದೇ ನಿಟ್ಟಿನಲ್ಲಿ ನಮ್ಮ ನಾಡಿನ ಕೈಲಾಸಂ, ಶ್ರೀರಂಗ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗಿರೀಶ್ ಕಾರ್ನಾಡ್‌, ಲಂಕೇಶ್, ತೇಜಸ್ವಿ, ಚಂದ್ರಶೇಖರ ಕಂಬಾರ, ಬಿ.ವಿ.ಕಾರಂತ್, ಸಿಜಿಕೆ, ಪ್ರಸನ್ನ, ಬಸವಲಿಂಗಯ್ಯ ರಂಗಭೂಮಿ ಬೆಳವಣಿಗೆಗೆ ಅವಿರತ ಶ್ರಮಿಸಿದ್ದಾರೆ’ ಎಂದು ಸ್ಮರಿಸಿದರು.

ಗ್ರಹಿಕೆ ಇರಬೇಕು: ‘ರಂಗ ಕಲಾವಿದರು ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಜೀವನಕ್ಕೆ ಬೇಕಾದ ಎಲ್ಲಾ ಮೌಲ್ಯಗಳು ರಂಗಭೂಮಿಯಲ್ಲಿ ಸಿಗುತ್ತವೆ. ರಂಗ ಪರಿಕರ ಬಳಸುವಾಗ ನಟ, ನಟಿಯರಿಗೆ ಸೂಕ್ಷ್ಮ ಗ್ರಹಿಕೆ ಇರಬೇಕು. ರಂಗದ ಮೇಲೆ ಒಂದು ಸಣ್ಣ ಬಟ್ಟೆಯೂ ರಂಗ ಪರಿಕರವೇ’ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಹಾ.ಮಾ.ರಾಮಚಂದ್ರ ಹೇಳಿದರು.

ಶಿಬಿರಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ರಾಜ್ಯ ನಾಟಕ ಅಕಾಡೆಮಿ ಸದಸ್ಯ ಗುಣಶೀಲನ್, ರಂಗ ವಿಜಯ ಸಂಸ್ಥೆ ಮುಖ್ಯಸ್ಥ ಮಾಲೂರು ವಿಜಿ, ಶಿಬಿರದ ನಿರ್ದೇಶಕ ನವೀನ್‌ಶಕ್ತಿ, ಶಿಬಿರದ ಸಂಯೋಜಕ ಮೋಹನ್, ಕಿರುತೆರೆ ನಟ ಸತೀಶ್‌ರೆಡ್ಡಿ, ನಾಟಕಕರ ನಾವೆಂಕಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT