ಶುಕ್ರವಾರ, ನವೆಂಬರ್ 22, 2019
26 °C

ಎಲ್‌ಐಸಿ 64ನೇ ವರ್ಷಕ್ಕೆ ಪಾದಾರ್ಪಣೆ

Published:
Updated:

ಕೋಲಾರ: ‘ನಿಗಮವು 64ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಸಂಸ್ಥೆಗೆ ಬಂದಿರುವ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಭಾರತೀಯ ಜೀವ ವಿಮಾ ನಿಗಮದ ಬೆಂಗಳೂರು ವಿಭಾಗ–2ರ ಹಿರಿಯ ವಿಭಾಗಾಧಿಕಾರಿ ಜೆ.ಜಗದೀಶ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಿಗಮವು ವಿಮಾ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಿ ದಾಖಲೆ ನಿರ್ಮಿಸಿದೆ. ಉದಾರೀಕರಣದ ಯುಗದಲ್ಲೂ ವರ್ಷದಿಂದ ವರ್ಷಕ್ಕೆ ಪಾಲಿಸಿದಾರರ ಸೇವೆ, ಪ್ರತಿನಿಧಿಗಳ ಜಾಲ, ಶಾಖೆಗಳ ಆರಂಭ ಹಾಗೂ ವಿಮಾ ಕಂತಿನ ಸಂಗ್ರಹಣೆಯಲ್ಲಿ ಮುಂದಿದೆ’ ಎಂದರು.

‘1956ರಲ್ಲಿ ₹ 5 ಕೋಟಿ ಬಂಡವಾಳದೊಂದಿಗೆ ಆರಂಭವಾದ ನಿಗಮವು ಸದ್ಯ ₹ 31 ಲಕ್ಷ ಕೋಟಿ ಆಸ್ತಿ ಹೊಂದಿದೆ. ಜತೆಗೆ 4,851 ಕಚೇರಿಗಳು ಹಾಗೂ 12 ಲಕ್ಷಕ್ಕೂ ಹೆಚ್ಚು ಮಂದಿ ವಿಮಾ ಪ್ರತಿನಿಧಿಗಳನ್ನು ಹೊಂದಿದೆ. 2018–19ರಲ್ಲಿ 259 ಲಕ್ಷ ಧಾವೆ ಮೂಲಕ ₹ 1.63 ಲಕ್ಷ ಕೋಟಿ ಮೊತ್ತ ಪಾವತಿಸಿದೆ. ಅವಧಿ ಪೂರ್ಣ ಧಾವೆಗಳಲ್ಲಿ ಶೇ 92.95, ಮರಣ ಧಾವೆಗಳಲ್ಲಿ ಶೇ 98.27ರಷ್ಟು ಪ್ರಕರಣ ಇತ್ಯರ್ಥಗೊಳಿಸಿದೆ’ ಎಂದು ವಿವರಿಸಿದರು.

‘ಬೆಂಗಳೂರು ವಿಭಾಗ–2ರಲ್ಲಿ 34 ಶಾಖೆಗಳಿದ್ದು, ಈ ಪೈಕಿ ಕೋಲಾರ ಶಾಖೆಗೆ ಸಿಂಗಲ್ ಪ್ರೀಮಿಯಂನಲ್ಲಿ ₹ 5.50 ಕೋಟಿಯ ಗುರಿ ನೀಡಲಾಗಿತ್ತು. ಅಂತಿಮವಾಗಿ ಶಾಖೆಯು ₹ 5.73 ಕೋಟಿ ವ್ಯವಹಾರ ಮಾಡಿ ಪ್ರಥಮ ಸ್ಥಾನ ಪಡೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲ್‌ಐಸಿ ಬೆಂಗಳೂರು ವಿಭಾಗ–2ರ ವ್ಯವಸ್ಥಾಪಕ (ಮಾರುಕಟ್ಟೆ) ಶ್ರೀಕುಮಾರ್, ಮಾರಾಟ ವಿಭಾಗದ ವ್ಯವಸ್ಥಾಪಕ ಮಹಮ್ಮದ್‌ ಇಸಾಕ್, ದಾಖಲಾತಿ ವಿಭಾಗದ ವ್ಯವಸ್ಥಾಪಕ ಚಂದ್ರಶೇಖರ್, ಕೋಲಾರ ಶಾಖಾಧಿಕಾರಿ ಎಸ್.ಹನುಮಂತನಾಯಕ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)