ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನೋದ್ಯಮ ನಂಬಿ ರೈತರ ಜೀವನ

ಸಭೆಯಲ್ಲಿ ಕೋಚಿಮುಲ್ ನಿರ್ದೇಶಕ ಹರೀಶ್ ಹೇಳಿಕೆ
Last Updated 4 ಸೆಪ್ಟೆಂಬರ್ 2019, 12:11 IST
ಅಕ್ಷರ ಗಾತ್ರ

ಕೋಲಾರ: ‘ರೈತರು ಹೈನೋದ್ಯಮ ಕ್ಷೇತ್ರದಿಂದ ದೂರ ಸರಿಯಬಾರದು. ಗ್ರಾಮೀಣ ಭಾಗದಲ್ಲಿ ಹಾಲು ಸಂಘಗಳನ್ನು ಅಭಿವೃದ್ಧಿಪಡಿಸಿದರೆ ರೈತರು ಆರ್ಥಿಕವಾಗಿ ಸಬಲರಾಗಬಹುದು’ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಸಲಹೆ ನೀಡಿದರು.

ತಾಲ್ಲೂಕಿನ ಚಿಕ್ಕಹಸಾಳ ಗ್ರಾಮದಲ್ಲಿ ಬುಧವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯ ರೈತರು ಹೈನೋದ್ಯಮ ನಂಬಿ ಜೀವನ ನಡೆಸುತ್ತಿದ್ದಾರೆ. ಈ ರೈತರಿಗೆ ಸೌಕರ್ಯ ಕಲ್ಪಿಸದಿದ್ದರೆ ಮೋಸ ಮಾಡಿದಂತೆ’ ಎಂದರು.

‘ಒಕ್ಕೂಟಕ್ಕೆ ಪ್ರತಿನಿತ್ಯ 10.50 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಹಾಲಿನ ಮಾರಾಟಕ್ಕೆ ಸಮಸ್ಯೆಯಾಗಿದ್ದು, ಹಾಲಿನ ಪುಡಿ ತಯಾರಿಕೆಗಾಗಿ ಹಾಲನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಹಾಲಿನ ಪುಡಿ ತಯಾರಿಕೆ ಘಟಕ ಸ್ಥಾಪನೆಯಾಗಿದ್ದು, ಅಲ್ಲಿಗೆ ಹಾಲು ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಎಂ.ವಿ.ಕೃಷ್ಣಪ್ಪರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ₹ 80 ಲಕ್ಷ ವೆಚ್ಚವಾಗಿದೆ. ಇದಕ್ಕೆ ಒಕ್ಕೂಟದ ಹಿಂದಿನ ಆಡಳಿತ ಮಂಡಳಿ ಅಥವಾ ಅಧಿಕಾರಿಗಳ ವೈಫಲ್ಯ ಕಾರಣ. ಒಕ್ಕೂಟಕ್ಕೆ ಅಗತ್ಯವಿರುವ ನೀರು ಖರೀದಿಗೆ ವರ್ಷಕ್ಕೆ ₹ 1.70 ಕೋಟಿ ವೆಚ್ಚವಾಗುತ್ತಿದ್ದು, ಇದನ್ನು ತಪ್ಪಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

‘ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ಒಕ್ಕೂಟಕ್ಕೆ ತಾಲ್ಲೂಕಿನ ಹೊಳಲಿ ಬಳಿ 40 ಎಕರೆ ಜಮೀನು ಗುರುತಿಸಿದ್ದರು. ಆ ನಂತರ ಜಮೀನು ಮಂಜೂರು ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಈ ಜಮೀನಿಗೆ ಸಂಬಂಧಪಟ್ಟ ಕಡತ ಸಿಕ್ಕಿದ್ದು, ಒಕ್ಕೂಟದ ಹೆಸರಿಗೆ ಜಮೀನು ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಆ ಜಮೀನು ಒಕ್ಕೂಟಕ್ಕೆ ಹಸ್ತಾಂತರವಾದರೆ ಅಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಸಮಸ್ಯೆ ನಿವಾರಣೆ ಮಾಡಬಹುದು. ತಾಲ್ಲೂಕಿನ 23 ಕಡೆ ಬಲ್ಕ್ ಮಿಲ್ಕ್ ಕೇಂದ್ರ (ಬಿಎಂಸಿ) ಸ್ಥಾಪಿಸಲಾಗಿದ್ದು, ಕೇಂದ್ರಗಳ ಸಂಖ್ಯೆ ಹೆಚ್ಚಿಸಿದರೆ ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಅಧಿಕಾರ ದುರುಪಯೋಗ: ‘ಒಕ್ಕೂಟದಲ್ಲಿ ರಾಜಕೀಯ ಮಾಡುವವರಿಗೆ ಎಂದಿಗೂ ಒಳ್ಳೆಯದಾಗಲ್ಲ. ಅಧಿಕಾರಿಗಳ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪ ಕೇಳಿ ಬರುತ್ತಿದ್ದು, ಇದಕ್ಕೆ ಸಹಕಾರ ನೀಡುವುದಿಲ್ಲ’ ಎಂದು ಕೋಚಿಮುಲ್‌ ಮಾಜಿ ನಿರ್ದೇಶಕ ಆರ್.ರಾಮಕೃಷ್ಣೇಗೌಡ ಎಚ್ಚರಿಕೆ ನೀಡಿದರು.

‘ಈ ಹಿಂದೆ ಒಂದು ಬಾರಿ ಒಕ್ಕೂಟದ ಮುಂದೆ ಗೋಲಿಬಾರ್ ಆಗಿತ್ತು. ಮತ್ತೆ ಆ ಪರಿಸ್ಥಿತಿ ಎದುರಾಗದಂತೆ ಈಗಿನ ಆಡಳಿತ ಮಂಡಳಿ ಎಚ್ಚರ ವಹಿಸಬೇಕು. ರೈತರಿಗೆ ಆರೋಗ್ಯ ಸೇವೆ ನೀಡಲು ಒಕ್ಕೂಟವು ವಿಮಾ ಯೋಜನೆ ಜಾರಿಗೊಳಿಸಿದೆ. ರೈತರು ಮತ್ತು ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ ₹ 30 ಸಾವಿರ ನೀಡಲಾಗುತ್ತದೆ. ಅವರು ಮೃತಪಟ್ಟರೆ ₹ 3 ಲಕ್ಷ ಹಣ ನೀಡಲಾಗುತ್ತದೆ’ ಎಂದರು.

‘ಜಿಡ್ಡು ಮತ್ತು ಘನ ಕೊಬ್ಬಿನ ಅಂಶದ (ಎಸ್‌ಎನ್‌ಎಫ್‌) ಆಧಾರದಲ್ಲಿ ಹಾಲಿನ ಖರೀದಿ ದರ ನಿಗದಿ ಮಾಡಿದ ಮೇಲೆ ಪಶು ಆಹಾರಕ್ಕೆ ಬೇಡಿಕೆ ಹೆಚ್ಚಿದೆ. ಬಿಎಂಸಿ ಕೇಂದ್ರಗಳು ಸ್ಥಾಪನೆಯಾದ ನಂತರ ಗುಣಮಟ್ಟದ ಹಾಲು ಉತ್ಪಾದನೆ ಹೆಚ್ಚಾಯಿತು’ ಎಂದು ವಿವರಿಸಿದರು.

ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ, ಸಂಘದ ಅಧ್ಯಕ್ಷ ವಿ.ಮುನಿರಾಜು, ನಿರ್ದೇಶಕರಾದ ಎಲ್.ಕೆಂಪಣ್ಣ, ಎಂ.ಮಂಜುನಾಥ್, ಸಿ.ಚಲಪತಿ, ಸಿ.ಎನ್‌.ಮಂಜುನಾಥ್, ವಿ.ರಮೇಶ್, ಎಸ್.ಶ್ರೀನಿವಾಸ್, ರತ್ನಮ್ಮ, ಬಿ.ಕೆ.ನಾಗವೇಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT