ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಧಿಕಾರಿಗಳ ನಡೆ ಅನುಮಾನಕ್ಕೆ ಎಡೆ

ಜಿಲ್ಲೆಯಲ್ಲಿ ನೆಪಕ್ಕೆ ಮದ್ಯದ ದಾಸ್ತಾನು ಪರಿಶೀಲನೆ
Last Updated 3 ಮೇ 2020, 15:42 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮದ್ಯದಂಗಡಿಗಳಲ್ಲಿ ನಡೆದ ಮದ್ಯದ ದಾಸ್ತಾನು ಪರಿಶೀಲನೆ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಕೆಲವೇ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಾನೂನಿನ ಅಸ್ತ್ರ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಲಾಕ್‌ಡೌನ್‌ ಜಾರಿಯಾದ ನಂತರ ಜಿಲ್ಲೆಯ ಬಹುತೇಕ ಮದ್ಯದಂಗಡಿ ಮಾಲೀಕರು ಕದ್ದುಮುಚ್ಚಿ ಕಾಳಸಂತೆಯಲ್ಲಿ ದುಪ್ಟಟ್ಟು ಬೆಲೆಗೆ ಮದ್ಯ ಮಾರಾಟ ಮಾಡಿರುವ ಬಗ್ಗೆ ಅಬಕಾರಿ ಇಲಾಖೆಗೆ ದೂರು ಸಲ್ಲಿಕೆಯಾದವು. ದಿನ ಕಳೆದಂತೆ ದೂರುಗಳ ಪ್ರಮಾಣ ಹೆಚ್ಚುತ್ತಾ ಹೋಯಿತು. ಆದರೂ ಅಧಿಕಾರಿಗಳು ದೂರುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಅಂತಿಮವಾಗಿ ಮದ್ಯದ ಅಕ್ರಮ ವಹಿವಾಟಿನ ಬಗ್ಗೆ ಅಬಕಾರಿ ಸಚಿವರಿಗೆ ದೂರು ಸಲ್ಲಿಕೆಯಾದವು. ಹೀಗಾಗಿ ಸಚಿವರು ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಮದ್ಯದಂಗಡಿಗಳಲ್ಲಿನ ಮದ್ಯದ ದಾಸ್ತಾನು ತಪಾಸಣೆ ಮಾಡಿ ವರದಿ ನೀಡುವಂತೆ ಇಲಾಖೆ ಆದೇಶಿಸಿದರು. ಸಚಿವರ ಆದೇಶದಂತೆ ಅಧಿಕಾರಿಗಳು ಕಳೆದ 10 ದಿನಗಳಿಂದ ಮದ್ಯದಂಗಡಿಗಳ ಬಾಗಿಲು ತೆರೆಸಿ ಪರಿಶೀಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 240 ಮದ್ಯದಂಗಡಿಗಳಿದ್ದು, ಬಹುತೇಕ ಅಂಗಡಿ ಮಾಲೀಕರು ಲಾಕ್‌ಡೌನ್‌ ಅವಧಿಯಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ಮಾಡಿದ್ದಾರೆ. ಜಿಲ್ಲೆಯ ಗಡಿ ದಾಟಿ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ರಾಜ್ಯಗಳಿಗೂ ಮದ್ಯ ಸರಬರಾಜಾಗಿದೆ. ಈ ಅಕ್ರಮಕ್ಕೆ ಇಲಾಖೆ ಅಧಿಕಾರಿಗಳು ಕೈಜೋಡಿಸಿರುವ ಗುಸು ಗುಸು ಕೇಳಿಬರುತ್ತಿದೆ.

ಅಧಿಕಾರಿಗಳು ನೆಪಕ್ಕೆ ಕೆಲವೇ ಮದ್ಯದಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು ಮದ್ಯದ ದಾಸ್ತಾನು ಪರಿಶೀಲಿಸಿ ನೋಟಿಸ್‌ ಜಾರಿ ಮಾಡಿದ್ದಾರೆ. ತಪಾಸಣೆಯಾಗಿರುವ ಬಹುತೇಕ ಮದ್ಯದಂಗಡಿಗಳಲ್ಲಿ ಮದ್ಯದ ಸರಕು ಖಾಲಿಯಾಗಿದ್ದರೂ ಅಧಿಕಾರಿಗಳು ಆ ಅಂಗಡಿಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶೇ 80ರಷ್ಟು ಖಾಲಿ

ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ (ಸಿಎಲ್‌– 11ಸಿ) ಮಳಿಗೆಗಳು ಸೇರಿದಂತೆ ಎಲ್ಲಾ ಬಗೆಯ ಮದ್ಯದಂಗಡಿಗಳಲ್ಲೂ ಲಾಕ್‌ಡೌನ್‌ ವೇಳೆ ಮದ್ಯದ ಸರಕು ಖಾಲಿಯಾಗಿದೆ. ಇಲಾಖೆ ಅಧಿಕಾರಿಗಳೇ ಹೇಳುವಂತೆ ಪ್ರತಿ ಮಳಿಗೆಯಲ್ಲೂ ಶೇ 80ರಷ್ಟು ಮದ್ಯ ಖಾಲಿಯಾಗಿದೆ.

‘ಅಧಿಕಾರಿಗಳು ಎಂಎಸ್‌ಐಎಲ್‌ ಮಳಿಗೆಗಳ ಅಕ್ರಮ ವಹಿವಾಟಿನ ಸತ್ಯ ಮರೆಮಾಚಿ ಕೆಲವೇ ಖಾಸಗಿ ಮದ್ಯದಂಗಡಿಗಳ ವಹಿವಾಟಿನ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೆಲ ಖಾಸಗಿ ಮದ್ಯದಂಗಡಿಗಳ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ನಗರದ ಬಾರ್‌ ಮಾಲೀಕರೊಬ್ಬರು ದೂರಿದರು.

ಕೊನೆ ಗಳಿಗೆಯಲ್ಲಿ ಪರಿಶೀಲನೆ

ಅಧಿಕಾರಿಗಳು ರಾಜಕೀಯ ಪ್ರಭಾವಿಗಳ ಮಾಲೀಕತ್ವದ ಮದ್ಯದಂಗಡಿಗಳಲ್ಲಿ ನೆಪಕ್ಕೆ ಮದ್ಯದ ದಾಸ್ತಾನಿನ ಪರಿಶೀಲನೆ ಮಾಡಿ ಕೈ ಕೊಳೆದುಕೊಂಡಿದ್ದಾರೆ. ಸೋಮವಾರದಿಂದ (ಮೇ 4) ಸಿಎಲ್‌–2 ಮತ್ತು ಸಿಎಲ್‌– 11ಸಿ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಆದೇಶಿಸಿದ್ದು, ಅಧಿಕಾರಿಗಳು ಭಾನುವಾರ ಕೊನೆ ಗಳಿಗೆಯಲ್ಲಿ ಮದ್ಯದಂಗಡಿಗಳಲ್ಲಿ ದಾಸ್ತಾನು ಪರಿಶೀಲನೆಯ ಶಾಸ್ತ್ರ ಪೂರ್ಣಗೊಳಿಸಿದರು. ಅಧಿಕಾರಿಗಳ ಈ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT