ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ರಚನೆ ದ್ವೀಪದ ಬುಡದ ಕತ್ತಲಾಗಿದೆ

ವಿಚಾರಗೋಷ್ಠಿಯಲ್ಲಿ ಸಾಹಿತಿ ಚಂದ್ರಶೇಖರ ನಂಗಲಿ ಕಳವಳ
Last Updated 23 ಏಪ್ರಿಲ್ 2019, 12:39 IST
ಅಕ್ಷರ ಗಾತ್ರ

ಕೋಲಾರ: ‘ಈಗಿನ ಬಹುತೇಕ ವಿಮರ್ಶಕರಿಗೆ ಮಳೆ ಕಾಡಿನ ಸಾಹಿತ್ಯದ ಅನುಭವವೇ ಇಲ್ಲ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ನಂಗಲಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಶ್ರೀರಾಮಾಯಣ ದರ್ಶನಂ ದಾರ್ಶನಿಕ ಸಂದೇಶ ಅಭಿಯಾನದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ಕುವೆಂಪುರ ಸಾಹಿತ್ಯ ಹಾಗೂ ಮಳೆ ಕಾಡಿನ ಸಾಹಿತ್ಯ ಬೇರೆ ಬೇರೆಯಲ್ಲ. ಈ ಎರಡೂ ಒಟ್ಟಿಗೆ ಸೇರಿದ್ದರಿಂದ ಕುವೆಂಪು ಸಾಹಿತ್ಯಕವಾಗಿ ಜಾಗತಿಕ ಮನ್ನಣೆ ಪಡೆದರು’ ಎಂದರು.

‘ಹಸಿರು ಸಾಹಿತ್ಯ, ಸೃಷ್ಟಿ ಸಾಹಿತ್ಯವು ಕುವೆಂಪುರ ಸಾಹಿತ್ಯ ಕೃಷಿಯ ವಿಶೇಷವಾಗಿತ್ತು. ಈಗಿನ ಕಾಲಘಟ್ಟದ ಸಾಹಿತ್ಯ ರಚನೆಯು ದ್ವೀಪದ ಬುಡದ ಕತ್ತಲಾಗಿದೆ. ಇದನ್ನು ವಿಮರ್ಶಕವಾಗಿ ರಚನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

’ನಿಸರ್ಗದ ಆವರಣದಲ್ಲಿ ಪ್ರತ್ಯೇಕಗೊಂಡ ಸಸಿಗಳು ಮಾನವನ ಮಧ್ಯಪ್ರವೇಶ ಮತ್ತು ಹೊತ್ತೊತ್ತಿನ ಆರೈಕೆ ಸಿಕ್ಕಿ ಆಶ್ಚರ್ಯಕರವಾಗಿ ಬೆಳೆಯುತ್ತವೆ. ಬೆಟ್ಟದ ಗಿಡಗಳನ್ನು ಕುಂಡಗಳಲ್ಲಿ ನಾಟಿ ಮಾಡಿದಾಗ ವಿಸ್ಮಯಕಾರಿಯಾಗಿ ಬೆಳೆಯುತ್ತವೆ. ಈ ಬದಲಾವಣೆ ನನಗೆ ನಿಷ್ಪಲಸಿದ್ಧಿಯಾಗಿ ಕಾಣಿಸಿತು’ ಎಂದು ವಿವರಿಸಿದರು.

‘ಕುವೆಂಪುರ ಸಾಹಿತ್ಯ ಮಳೆ ಕಾಡಿನ ಸಾಹಿತ್ಯ. ಆದರೆ, ಅವರಿಗೆ ಮಳೆ ಕಾಡಿನ ಅನುಭವವೇ ಇಲ್ಲ. ಅವರು ಮಾಡಿದ ವಿಮರ್ಶೆ ವಿಪರೀತ ವೃದ್ಧಿಯಾಗಿ ನಿಷ್ಪಲಸಿದ್ಧಿಯಾಗಿ ಕಾಣುತ್ತಿದೆ. ಇದನ್ನು ನಾನು ಎಲ್ಲಿ ಬೇಕಾದರೂ ಸಮರ್ಥಿಸುತ್ತೇನೆ. ಅವರ ವಿಮರ್ಶೆ ಕತ್ತಲೆಯ ಭಾಗವಾಗಿದೆ. ಕುವೆಂಪುರ ಇಡೀ ಸಾಹಿತ್ಯ ಹಸಿರು ಸಾಹಿತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹೆಣ್ಣಿಗೆ ಗೌರವ: ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ವಿಷಯ ಮಂಡಿಸಿದ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ತಮಿಳ್ ಸೆಲ್ವಿ, ‘ರಾಮಾಯಾಣ ದರ್ಶನಂ ಕಾವ್ಯದಲ್ಲಿ ಸಮಾಜದಲ್ಲಿ ಹೆಣ್ಣಿಗೆ ಗೌರವ ನೀಡಬೇಕೆಂಬ ಸಂಗತಿ ಉಲ್ಲೇಖಿಸಲಾಗಿದೆ’ ಎಂದು ತಿಳಿಸಿದರು.

‘ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನನ್ನು ಆದರ್ಶ ಪುರುಷನಾಗಿ ಹಲವಾರು ಪಾತ್ರಗಳಲ್ಲಿ ಚಿತ್ರಿಸಿದ್ದಾರೆ. ಕುವೆಂಪು ರಾಮಾಯಣ ದರ್ಶನಂನಲ್ಲಿ ಗಾಂಧಿ ಮತ್ತು ಲೋಹಿಯಾರ ಆದರ್ಶ ತೆಗೆದುಕೊಳ್ಳಲಾಗಿದೆ. ಹೆಣ್ಣಿಗೆ ಆರಂಭದಿಂದಲೂ ಗೌರವ, ಬೆಲೆ ಕೊಡದೆ ಇರುವ ಸಮಾಜವನ್ನು ಇತಿಹಾಸದಲ್ಲಿ ತಿಳಿದಿದ್ದೇವೆ’ ಎಂದರು.

‘ಕಾವ್ಯದಲ್ಲಿ ಹೆಣ್ಣಿನ ಬಗ್ಗೆ ಗೌರವ ಕಂಡುಬಂದರೂ ನಿಜ ಜೀವನದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಸ್ತ್ರೀಯರ ಮನೋವಿಜ್ಞಾನದ ವಿಚಾರವನ್ನು ಭಾರತೀಯ ಸಾಹಿತ್ಯದಲ್ಲಿ ಮಹಿಳೆಯರೇ ಹೇಳಿಕೊಳ್ಳುವ ಅವಕಾಶ ತುಂಬಾ ಕಡಿಮೆಯಾಗಿದೆ. ರಾಮಾಯಣ ದರ್ಶನಂ ಮಹಿಳಾ ಮನಸ್ಸುಗಳ ಧ್ವನಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಮೈಸೂರಿನ ಭಾರತೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕ ಆರ್.ಚಲಪತಿ ಅವರು ರಾಮಾಯಣ ದರ್ಶನಂ ವಿಮರ್ಶೆಗಳ ವಿಮರ್ಶೆ ಕುರಿತು ವಿಷಯ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT