ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಡ್‌ ಶೆಡ್ಡಿಂಗ್‌: ರೈತರಿಗೆ ತೊಂದರೆ

Last Updated 28 ಏಪ್ರಿಲ್ 2022, 14:05 IST
ಅಕ್ಷರ ಗಾತ್ರ

ಕೋಲಾರ: ಬೆಸ್ಕಾಂ ಅಧಿಕಾರಿಗಳು ಬೇಸಿಗೆ ನೆಪದಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಿ ರೈತರಿಗೆ ಹಾಗೂ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ನಮ್ಮ ಕೋಲಾರ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಡ್‌ ಶೆಡ್ಡಿಂಗ್‌ ನೆಪದಲ್ಲಿ ವಿದ್ಯುತ್‌ ಸಮಸ್ಯೆ ಸೃಷ್ಟಿಸಲಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ತೀವ್ರ ತೊಂದರೆಯಾಗಿದೆ. ಈಗ ಪರೀಕ್ಷಾ ಸಮಯವಾಗಿದ್ದು, ವಿದ್ಯಾರ್ಥಿಗಳ ಓದಿಗೆ ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದ ಕಾರಣ ಬೆಳೆಗಳು ಒಣಗುತ್ತಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

ವಿದ್ಯುತ್‌ ವೋಲ್ಟೇಜ್‌ ಪ್ರಮಾಣದಲ್ಲಿ ಏರಿಳಿತ ಆಗುತ್ತಿರುವುದರಿಂದ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಕೃಷಿ ಉದ್ದೇಶದ ಪಂಪ್‌ಸೆಟ್‌ಗಳಿಗೆ ದಿನದಲ್ಲಿ 7 ತಾಸು ಮೂರು ಫೇಸ್ ವಿದ್ಯುತ್ ಕೊಡುವುದಾಗಿ ಇಂಧನ ಸಚಿವರು ಹೇಳುತ್ತಾರೆ. ಆದರೆ, ದಿನದಲ್ಲಿ ನಾಲ್ಕೈದು ತಾಸು ಮಾತ್ರ ವಿದ್ಯುತ್ ಸರಬರಾಜು ಆಗುತ್ತಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಸಂದರ್ಭದಲ್ಲಿ ರೈತರ ಪಂಪ್‍ಸೆಟ್‍ಗಳ ಕೇಬಲ್ ಮತ್ತು ಇತರೆ ಉಪಕರಣಗಳು ಕಳವಾಗುತ್ತಿವೆ ಎಂದು ಹೇಳಿದ್ದಾರೆ.

ಬಡ್ಡಿ ಸಾಲ ಮಾಡಿ ಬೆಳೆ ಬೆಳೆದ ರೈತರು ವಿದ್ಯುತ್‌ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ವಿದ್ಯುತ್‌ ಸಮಸ್ಯೆ ಬಗ್ಗೆ ವಿಚಾರಿಸಲು ಬೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿದರೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಹಿರಿಯ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT