ಶನಿವಾರ, ಆಗಸ್ಟ್ 13, 2022
27 °C
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬದ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಬ್ಯಾಂಕ್‌ನಿಂದ ಸಾಲ ನೀಡುವ ಸಂಕಲ್ಪ ಮಾಡಿದ್ದೇವೆ’  ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ತಿಳಿಸಿದರು.

ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು ಇಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ವಿತರಿಸಿ ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಟ್ಟಾರೆ 9.41 ಲಕ್ಷ ಬಿಪಿಎಲ್ ಕುಟುಂಬಗಳಿವೆ. ಬಡತನ ರೇಖೆಗಿಂತ ಕೆಳಗಿರುವ ಈ ಎಲ್ಲಾ ಕುಟುಂಬಗಳಿಗೂ ಸಾಲ ನೀಡುತ್ತೇವೆ’ ಎಂದರು.

‘ಈಗಾಗಲೇ 4.16 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ಸಾಲ ಕೊಟ್ಟಿದ್ದು, ಉಳಿದ 5.25 ಲಕ್ಷ ಕುಟುಂಬಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಜಾತಿ, ಧರ್ಮ, ಪಕ್ಷದ ಎಲ್ಲೆ ಮೀರಿ ಎಲ್ಲಾ ಅರ್ಹರಿಗೂ ಸಾಲ ಕೊಡುತ್ತೇವೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗುವುದು ಬ್ಯಾಂಕ್‌ನ ಧ್ಯೇಯ’ ಎಂದು ಹೇಳಿದರು.

‘ಮಹಿಳಾ ಸ್ವಸಹಾಯ ಸಂಘಗಳಿಗೆ ಸದ್ಯ ಕೊಡುತ್ತಿರುವ ₹ 5 ಲಕ್ಷ ಸಾಲವನ್ನು ಮುಂದೆ ₹ 10 ಲಕ್ಷಕ್ಕೆ ಹೆಚ್ಚಿಸುತ್ತೇವೆ. ಪ್ರತಿ ಮಹಿಳೆಗೆ ₹ 1 ಲಕ್ಷ ಬಡ್ಡಿರಹಿತ ಸಾಲ ನೀಡುವ ಮೂಲಕ ಸ್ವಾವಲಂಬಿಗಳಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವ ಆಶಯವಿದೆ’ ಎಂದು ನುಡಿದರು.

ತವರಿನ ಬ್ಯಾಂಕ್‌: ‘ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು. ಜತೆಗೆ ಇದೇ ಬ್ಯಾಂಕ್‌ನಲ್ಲಿ ಎಲ್ಲಾ ಹಣಕಾಸು ವಹಿವಾಟು ನಡೆಸಬೇಕು. ಬಡ ಜನರ ಕಷ್ಟಕ್ಕೆ ಸ್ಪಂದಿಸುವ ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ತವರಿನ ಬ್ಯಾಂಕ್‌ ಆಗಿದೆ’ ಎಂದು ಅಭಿಪ್ರಾಯಪಟ್ಟರು.

‘ರೂಪೇ ಕಾರ್ಡ್‌ನಿಂದ ಯಾವುದೇ ಎಟಿಎಂ ಘಟಕದಲ್ಲಿ ಹಣ ಡ್ರಾ ಮಾಡಬಹುದು. ಇತರೆ ವಾಣಿಜ್ಯ ಬ್ಯಾಂಕ್‌ಗಳಂತೆ ಎಟಿಎಂ ಸೇವೆಗೆ ಡಿಸಿಸಿ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ಮಹಿಳೆಯರು ಕಿಸಾನ್ ಶ್ರೀ ಲಕ್ಷ್ಮೀ ಬಾಂಡ್ ಯೋಜನೆಯಡಿ ಹಣ ಠೇವಣಿ ಇಟ್ಟರೆ ವರ್ಷಕ್ಕೆ ಶೇ 8ರಷ್ಟು ಬಡ್ಡಿ ನೀಡುತ್ತೇವೆ’ ಎಂದು ವಿವರಿಸಿದರು.

ಅಪಪ್ರಚಾರ: ‘ಬ್ಯಾಂಕ್‌ನಿಂದ ರೈತರು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ₹ 1,500 ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ. ಸರ್ಕಾರ ಈವರೆಗೆ ₹ 320 ಕೋಟಿ ಬಡ್ಡಿ ಪಾವತಿಸಿದೆ. ಆದರೆ, ಕೆಲವರು ಬ್ಯಾಂಕ್‌ನ ಪ್ರಗತಿ ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಮಹಿಳೆಯರೇ ತಕ್ಕ ಪಾಠ ಕಲಿಸಬೇಕು’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಗುಡುಗಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಸೋಮಣ್ಣ, ಕೆ.ವಿ.ದಯಾನಂದ್, ಕಸಬಾ ಸೊಸೈಟಿ ಅಧ್ಯಕ್ಷ ಶ್ರೀನಿವಾಸ್, ನಿರ್ದೇಶಕರಾದ ಶ್ರೀರಾಮರೆಡ್ಡಿ, ಶ್ರೀನಿವಾಸ್, ಪ್ರಕಾಶ್, ಕಾರ್ಯದರ್ಶಿ ವೆಂಕಟೇಶ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.