ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ: ಮೀಸಲಾತಿ ಪಟ್ಟಿ ಪ್ರಕಟ

ಗರಿಗೆದರಿದ ರಾಜಕೀಯ: ಪಕ್ಷೇತರ ಸದಸ್ಯರ ಓಲೈಕೆ ಕಸರತ್ತು
Last Updated 12 ಮಾರ್ಚ್ 2020, 9:38 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಸರ್ಕಾರವು ಜಿಲ್ಲೆಯ ಕೋಲಾರ, ಮುಳಬಾಗಿಲು ಮತ್ತು ರಾಬರ್ಟ್‌ಸನ್‌ಪೇಟೆ (ಕೆಜಿಎಫ್‌) ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಯ ಮೀಸಲಾತಿ ಪಟ್ಟಿ ಪ್ರಕಟಿಸಿದೆ.

ಕೋಲಾರ ನಗರಸಭೆ ಅಧ್ಯಕ್ಷಗಾದಿ ಹಿಂದುಳಿದ ವರ್ಗ–ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಮುಳಬಾಗಿಲು ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ–ಎ ಮತ್ತು ಉಪಾಧ್ಯಕ್ಷಗಾದಿಯು ಸಾಮಾನ್ಯ ವರ್ಗಕ್ಕೆ (ಮಹಿಳೆ) ಮೀಸಲಿರಿಸಲಾಗಿದೆ. ಕೆಜಿಎಫ್‌ ನಗರಸಭೆ ಅಧ್ಯಕ್ಷಗಾದಿಯನ್ನು ಸಾಮಾನ್ಯ ವರ್ಗ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ–ಎ (ಮಹಿಳೆ) ಮೀಸಲಿಡಲಾಗಿದೆ.

ಈ ಮೂರೂ ನಗರಸಭೆಗಳಿಗೆ 2019ರ ನ.12ರಂದು ಚುನಾವಣೆ ನಡೆದಿತ್ತು. ಬಳಿಕ ನ.14ರಂದು ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಗಿತ್ತು. 4 ತಿಂಗಳು ಕಳೆದರೂ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿರಲಿಲ್ಲ. ಸರ್ಕಾರದ ಈ ನಡೆ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಸರ್ಕಾರ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿತ್ತು. ಆದರೆ, ಮೀಸಲಾತಿ ಪಟ್ಟಿ ಅಂತಿಮಗೊಳಿಸಿರಲಿಲ್ಲ.

ಇದೀಗ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿಯ ಮೀಸಲಾತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸದಸ್ಯರು ಪಕ್ಷದ ವರಿಷ್ಠರ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ.

ಓಲೈಕೆ ಕಸರತ್ತು: 3 ನಗರಸಭೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಫಲಿತಾಂಶ ಅತಂತ್ರವಾಗಿದ್ದು, ಪಕ್ಷೇತರ ಸದಸ್ಯರ ಓಲೈಕೆ ಕಸರತ್ತು ಜೋರಾಗಿದೆ. ಕೋಲಾರ ಹಾಗೂ ಕೆಜಿಎಫ್‌ ನಗರಸಭೆಯಲ್ಲಿ ತಲಾ 35 ವಾರ್ಡ್‌ಗಳಿದ್ದು, ಕಾಂಗ್ರೆಸ್‌ ಪಕ್ಷವು ಕ್ರಮವಾಗಿ 12 ಮತ್ತು 13 ವಾರ್ಡ್‌ಗಳಲ್ಲಿ ಜಯ ಗಳಿಸಿ ಮೇಲುಗೈ ಸಾಧಿಸಿದೆ. ಕೈ ಪಾಳಯವು ಈ ಎರಡೂ ನಗರಸಭೆಗಳಲ್ಲಿ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ರಣತಂತ್ರ ರೂಪಿಸಿದೆ.

ಮುಳಬಾಗಿಲು ನಗರಸಭೆಯ 31 ವಾರ್ಡ್‌ಗಳ ಪೈಕಿ 10 ವಾರ್ಡ್‌ಗಳಲ್ಲಿ ಗೆದ್ದಿರುವ ಜೆಡಿಎಸ್‌ ಪಕ್ಷೇತರ ಸದಸ್ಯರನ್ನು ಸೆಳೆಯಲು ಮುಂದಾಗಿದೆ. ಮೂರೂ ನಗರಸಭೆಗಳಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಯತ್ನ ಮುಂದುವರಿಸಿದೆ.

ಮಹಿಳೆಯರಿಗೆ ಆದ್ಯತೆ

ಮೂರೂ ಸ್ಥಳೀಯ ಸಂಸ್ಥೆಗಳಿಗೆ ಪ್ರಕಟವಾಗಿರುವ ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 3 ನಗರಸಭೆಗಳ ಪೈಕಿ 2 ನಗರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಮಹಿಳಾ ಸದಸ್ಯರಿಗೆ ದಕ್ಕಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT