ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ | ಮಾವು ಬೆಳೆಗಾರರ ಮೇಲೆ ತೂಗುಗತ್ತಿ

ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಮಾರುಕಟ್ಟೆ
Last Updated 22 ಮೇ 2020, 20:00 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮಾವು ಬೆಳೆಗಾರರನ್ನು ಕೊರೊನಾ ಆತಂಕ ಕಾಡುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು, ಸೀಲ್‌ಡೌನ್‌ ಮಾಡಿದರೆ ಗತಿಯೇನು ಎನ್ನುವ ಪ್ರಶ್ನೆ ಬೆಳೆಗಾರರಲ್ಲಿ ಮೂಡಿದೆ.

ಪಟ್ಟಣದ ಮಾವು ಮಾರುಕಟ್ಟೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ. ಕಾಯಿಯ ಬೆಲೆಯೂ ನಿರ್ಧಾರವಾಗಿಲ್ಲ. ಬೆರಳೆಣಿಕೆಯಷ್ಟು ಮಂಡಿಗಳು ಮಾತ್ರ ವಹಿವಾಟು ಪ್ರಾರಂಭಿಸಿವೆ. ಆದರೆಬೆಳೆಗಾರರಲ್ಲಿ ಕಾಯಿ ಕಿತ್ತು ಮಂಡಿಗೆ ಹಾಕುವ ಧಾವಂತ ಹೆಚ್ಚಿದೆ. ಎಳೆ ಕಾಯಿಯನ್ನೇ ತಂದು ಮಂಡಿಗಳಲ್ಲಿ ಸುರಿಯುತ್ತಿದ್ದಾರೆ.

ರಾಜಗೀರ, ಬಾದಾಮಿ ತಳಿ ಮಾವು ಈಗ ಪಕ್ವವಾಗುತ್ತದೆ. ಇದಾದ ಮೇಲೆ ಹಂತ ಹಂತವಾಗಿ ಇತರ ತಳಿಯ ಮಾವು ಪಕ್ವಗೊಂಡು ಕೊಯ್ಲಿಗೆ ಬರುತ್ತದೆ. ಆದರೆ ಕೊರೊನಾ ಭೀತಿಯಿಂದ ರೈತರು ತೋತಾಪುರಿ ಮಾವನ್ನೂ ಬಿಡದೆ ಕಟಾವು ಮಾಡುತ್ತಿದ್ದಾರೆ. ಜೂನ್‌ ಕೊನೆ ವಾರದಲ್ಲಿ ಕೀಳಬೇಕಾಗಿರುವ ಈ ತಳಿ ಮಾವನ್ನು ಈಗಲೇ ಕಟಾವು ಮಾಡಲಾಗುತ್ತಿದೆ. ಮಲ್ಲಿಕಾ, ಬೇನಿಷಾ ತಳಿಯ ಮಾವಿನ ಕತೆಯೂ ಇದೇ ಆಗಿದೆ.

‘ಮಾವಿನ ರಸ ತಯಾರಿಕೆಯಲ್ಲಿ ಬಳಸುವ ತೋತಾಪುರಿಯನ್ನು ಈಗ ಕಟಾವು ಮಾಡುವುದರಿಂದ ಶೇ 40ರಷ್ಟು ತೂಕ ನಷ್ಟ ಆಗುತ್ತದೆ. ಇದರಿಂದ ಬೆಳೆಗಾರರಿಗೂ ಅಪಾರ ನಷ್ಟ. ಈ ಬಾರಿ ಶೇ 20ರಷ್ಟು ಫಸಲು ಮಾತ್ರ ಬಂದಿದೆ. ಇರುವ ಫಸಲನ್ನು ಹೆಚ್ಚು ಜಾಗರೂಕತೆಯಿಂದ ಕಟಾವು ಮಾಡಬೇಕು. ಈ ರೀತಿ ಮಾಡಿದರೆ ಮಾತ್ರ ಲಾಭ ಸಿಗುತ್ತದೆ’ ಎಂದು ಮಾವು ಬೆಳೆಗಾರ ನೀಲಟೂರು ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ತೊತಾಪುರಿ ಮಾವು ಟನ್ನೊಂದಕ್ಕೆ ₹20 ಸಾವಿರದ ವರೆಗೆ ಮಾರಾಟವಾಗಿತ್ತು. ಆದರೆ ಈಗ ಅಕಾಲಿಕವಾಗಿ ಕಿತ್ತ ಮಾವನ್ನು ಟನ್ನೊಂದಕ್ಕೆ ₹10 ರಿಂದ ₹12 ಸಾವಿರದ ವರೆಗೆ ಮಾತ್ರ ಖರೀದಿಸಲಾಗುತ್ತಿದೆ. ಮಾವು ರಸ ತಯಾರಿಕಾ ಕಾರ್ಖಾನೆಗಳು ಬಣ್ಣ ಹಾಗೂ ರುಚಿಗೆ ಹೆಸರಾದ ಬಾದಾಮಿ ತಳಿಗೆ ಮುಗಿಬಿದ್ದಿವೆ. ಮಾವು ಪ್ರಿಯರೂ ಈ ತಳಿಯ ಮಾವನ್ನು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಾರೆ. ಆರಂಭದ ಸಗಟು ಬೆಲೆಯಲ್ಲಿ ಕೆಜಿಯೊಂದಕ್ಕೆ ₹18 ರಿಂದ ₹22 ರವರೆಗೆ ಖರೀದಿಸಲಾಗುತ್ತಿದೆ.

ಎಳೆ ಕಾಯಿ ಮಾರುಕಟ್ಟೆಗೆ ಬರುತ್ತಿರುವುದರಿಂದ ವ್ಯಾಪಾರಿಗಳು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗ ಕಟಾವು ಮಾಡಲು ಅರ್ಹವಾದ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಕೊಯ್ಲು ಮಾಡಲಾದ ಮಾವಿಗೆ ಮಾನ್ಯತೆ ಹೆಚ್ಚು. ಹಾಗಾಗಿ ಕೆಲವು ರೈತರು ತೋಟಗಳಲ್ಲಿ ತೊಟ್ಟು ಸಮೇತ ಕೊಯ್ಲು ಮಾಡಲಾದ ಬಾದಾಮಿ ತಳಿ ಮಾವನ್ನು ಕೆಜಿಯೊಂದಕ್ಕೆ ₹25ರಂತೆ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಖರೀದಿದಾರರೇ ತೋಟಗಳ ಬಳಿ ಬಂದು ಕೊಂಡೊಯ್ಯುತ್ತಿದ್ದಾರೆ. ಯಾವುದೇ ಕಮೀಷನ್‌ ಕೊಡಬೇಕಾಗಿಲ್ಲ.

‘ಇದೇ ಮೊದಲ ಬಾರಿಗೆ ಆನ್‌ಲೈನ್‌ ಮಾರಾಟ ಭರದಿಂದ ನಡೆಯುತ್ತಿದೆ. ವಿವಿಧ ಜಾತಿಯ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ದೂರ ಪ್ರದೇಶಗಳಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ಗುಣಮಟ್ಟದ ಹಣ್ಣಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ತೋಟದ ಬಳಿಯಾದರೆ, ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ನೀಡಲು ಸಿದ್ಧರಿದ್ದಾರೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್‌ ಪ್ರದೇಶಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ಸಿಂಹಪಾಲು ಶ್ರೀನಿವಾಸಪುರ ತಾಲ್ಲೂಕಿನದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆದ ಕಾಯಿಯೂ ಶ್ರೀನಿವಾಸಪುರ ಮಾರುಕಟ್ಟೆಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT