ಸೋಮವಾರ, ಆಗಸ್ಟ್ 15, 2022
22 °C
53 ದಿನದ ಮನೆ ವಾಸ ಅಂತ್ಯ: ವಾಣಿಜ್ಯ ಚಟುವಟಿಕೆ–ವಾಹನ ಸಂಚಾರ ಆರಂಭ

ಲಾಕ್‌ಡೌನ್‌ ಭಾಗಶಃ ಸಡಿಲ: ಜನಜೀವನ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ 2ನೇ ಅಲೆಯ ಆರ್ಭಟದ ಕಾರಣಕ್ಕೆ ಜಿಲ್ಲೆಯಲ್ಲಿ ಜಾರಿಯಾಗಿದ್ದ ಲಾಕ್‌ಡೌನ್‌ ಸೋಮವಾರ ಭಾಗಶಃ ಸಡಿಲಿಕೆಯಾಗಿದ್ದು, ಜನಜೀವನ ತುಸು ಸಹಜ ಸ್ಥಿತಿಗೆ ಮರಳಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಜಿಲ್ಲಾಡಳಿತವು ಏ.22ರಿಂದ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಘೋಷಿಸಿತ್ತು. ಹೀಗಾಗಿ 53 ದಿನಗಳಿಂದ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಭಾಗಶಃ ಸ್ಥಗಿತಗೊಂಡು ಜನಜೀವನಕ್ಕೆ ತೊಂದರೆಯಾಗಿತ್ತು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ 5ಕ್ಕಿಂತ ಕೆಳಗಿಳಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಲಾಕ್‌ಡೌನ್‌ ಆದೇಶದಲ್ಲಿ ಮಾರ್ಪಾಡು ಮಾಡಿ ಕೆಲ ವಿನಾಯಿತಿ ನೀಡಿದೆ. ಸರ್ಕಾರದ ಆದೇಶದ ಪ್ರಕಾರ ಜಿಲ್ಲಾಡಳಿತವು ಸೋಮವಾರದಿಂದ ಅನ್ವಯವಾಗುವಂತೆ ವಾಣಿಜ್ಯ ಚಟುವಟಿಕೆ, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಿತು.

ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ವಹಿವಾಟು ಪುನರಾರಂಭವಾಯಿತು. ದಿನಸಿ, ಬೇಕರಿ, ಕಟ್ಟಡ ನಿರ್ಮಾಣ ಸಾಮಗ್ರಿ, ಮಾಂಸ ಮತ್ತು ಮೀನು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆದು ವಹಿವಾಟು ನಡೆಸಲಾಯಿತು. ಸರ್ಕಾರಿ ಕಚೇರಿಗಳು ಜನರಿಗೆ ಸೇವೆ ಒದಗಿಸಿದವು. ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗದ ಕಾರಣ ಕಚೇರಿಗಳಲ್ಲಿ ಜನರ ಮತ್ತು ಸಿಬ್ಬಂದಿ ಸಂಖ್ಯೆ ವಿರಳವಾಗಿತ್ತು.

ಲಾಕ್‌ಡೌನ್‌ ಕಾರಣಕ್ಕೆ ನಿಂತಲ್ಲೇ ನಿಂತಿದ್ದ ಆಟೊಗಳು, ಟ್ಯಾಕ್ಸಿಗಳು ರಸ್ತೆಗಿಳಿದವು. ಪ್ರಮುಖ ರಸ್ತೆ, ವೃತ್ತ ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಜನದಟ್ಟಣೆ ಕಂಡುಬಂತು. ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿತ್ತು. ಲಾಕ್‌ಡೌನ್‌ ಕಾರಣಕ್ಕೆ ಬಿಕೋ ಎನ್ನುತ್ತಿದ್ದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನ ಸವಾರರು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಸೇವಾ ಕೇಂದ್ರಗಳು, ಕೋರಿಯರ್‌ ಅಂಗಡಿಗಳು, ಗ್ಯಾರೇಜ್‌ಗಳು ಕಾರ್ಯಾರಂಭ ಮಾಡಿದವು. ಜಿಲ್ಲೆಯ ವೇಮಗಲ್‌, ನರಸಾಪುರ ಹಾಗೂ ಮಾಲೂರು ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು ಸೀಮಿತ ಕಾರ್ಮಿಕರನ್ನು ಬಳಸಿಕೊಂಡು ಕಾರ್ಯ ಚಟುವಟಿಕೆ ಆರಂಭಿಸಿದವು. ಉಪ ನೋಂದಣಾಧಿಕಾರಿ ಕಚೇರಿಗಳು ಜನರಿಂದ ತುಂಬಿ ಹೋಗಿದ್ದವು.

ನಿರ್ಬಂಧ ಮುಂದುವರಿಕೆ: ಕ್ಷೌರದಂಗಡಿ, ಬ್ಯೂಟಿ ಪಾರ್ಲರ್‌, ವಾಣಿಜ್ಯ ಸಮುಚ್ಚಯ, ಜಿಮ್‌ ಸೆಂಟರ್‌, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ. ದೇವಸ್ಥಾನ, ಚರ್ಚ್‌, ಮಸೀದಿಗಳಲ್ಲಿ ದಿನನಿತ್ಯದ ಪೂಜೆ ಹೊರತುಪಡಿಸಿ ಧಾರ್ಮಿಕ ಚಟುವಟಿಕೆ ನಿಷೇಧಿಸಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಮುಂದುವರಿಸಲಾಗಿದೆ. ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಅವಕಾಶ ನೀಡಲಾಯಿತು. ಉದ್ಯಾನಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ 10ರವರೆಗೆ ಮಾತ್ರ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಯಿತು. ಮದ್ಯದಂಗಡಿಗಳು ಮಧ್ಯಾಹ್ನ 2ರವರೆಗೆ ವಹಿವಾಟು ನಡೆಸಿದವು.

ಸರ್ಕಾರ ಲಾಕ್‌ಡೌನ್‌ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯದ ಕಾರಣ ಜನರಲ್ಲಿ ಗೊಂದಲ ಮುಂದುವರಿದಿದ್ದು, ಸಾಕಷ್ಟು ಮಂದಿ ಕೊರೊನಾ ಸೋಂಕು ಹಾಗೂ ಪೊಲೀಸರ ಭಯಕ್ಕೆ ಮನೆಗಳಲ್ಲೇ ಉಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು