ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ತರಕಾರಿ, ಹೂ ಬೆಲೆ ಕುಸಿತ

ಲಾಕ್‌ಡೌನ್ ಪರಿಣಾಮ
Last Updated 10 ಮೇ 2021, 3:49 IST
ಅಕ್ಷರ ಗಾತ್ರ

ನಂಗಲಿ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಜಾರಿ ಮಾಡಿರುವುದರಿಂದ ರೈತರ
ಬೆಳೆಗಳಿಗೆ ಬೇಡಿಕೆ ಮತ್ತು ಬೆಲೆ ಕಡಿಮೆಯಾಗಿದೆ.

ರೈತರ ಬೆಳೆಗಳಿಗೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಬೆಲೆಗಳು ಪಾತಾಳಕ್ಕೆ ಇಳಿದಿವೆ. ಇದರಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರ ಬದುಕು ನೆಲಕಚ್ಚಿದೆ.

ಬರಗಾಲದ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಮುಳಬಾಗಿಲು ತಾಲ್ಲೂಕಿನಲ್ಲಿ ಅಂತರ್ಜಲ ಪಾತಾಳ ತಲುಪಿ 1,500 ಅಡಿಗಳಷ್ಟು ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿತ್ತು. ಆದರೆ ಈಚೆಗೆ ಬಿದ್ದ ಮಳೆಯಿಂದ ಕೆಲವು ಸಣ್ಣಪುಟ್ಟ ಕೆರೆ ಕುಂಟೆಗಳು ತುಂಬಿದ್ದರಿಂದ ಸ್ವಲ್ಪಮಟ್ಟಿಗೆ ನೀರಿನ ಅಭಾವ ಕಡಿಮೆಯಾಗಿದೆ. ಆದರೂ ಕೊಳವೆ ಬಾವಿಗಳಿಂದ ಬರುವ ಅಲ್ಪಸ್ವಲ್ಪ ನೀರಿನಲ್ಲಿ ರೈತರು ಟೊಮೆಟೊ, ಕೋಸು, ಬೀನ್ಸ್, ಬದನೆಕಾಯಿ, ಬೆಂಡೇಕಾಯಿ ಮುಂತಾದ ತರಕಾರಿಗಳನ್ನು , ಸೊಪ್ಪು, ಕೊತ್ತಂಬರಿ ಸೊಪ್ಪು ಮುಂತಾದ ತರಕಾರಿಗಳನ್ನು ಹಾಗೂ ಚೆಂಡು ಮಲ್ಲಿಗೆ, ಸೇವಂತಿಗೆ ಮುಂತಾದ ಹೂ ತೋಟಗಳನ್ನು ಬೆಳೆದಿದ್ದಾರೆ. ಆದರೆ ಲಾಕ್ ಡೌನ್ ಎಲ್ಲದರ ಮೇಲೆಯೂ ಪರಿಣಾಮ ಬೀರಿರುವುದರಿಂದ ತರಕಾರಿ, ಹೂ ಅಥವಾ ಕೊತ್ತಂಬರಿ ಸೊಪ್ಪುಗಳಿಗಾಗಲಿಕನಿಷ್ಠ ಬೆಲೆ ಇಲ್ಲದೆ ಇರುವುದರಿಂದ ತೋಟಗಳಲ್ಲಿಯೇ ಕೊಳೆಯುತ್ತಿದೆ.

ತಾಲ್ಲೂಕಿನಲ್ಲಿ ಸುಮಾರು 600 ಎಕರೆ ಟೊಮೆಟೊ, 30 ಹೆಕ್ಟೇರ್ ಕೋಸು, ಬದನೆಕಾಯಿ, ಬೀನ್ಸ್, ಕ್ಯಾರೆಟ್, ಬೀಟ್‌ರೂಟ್ ಮುಂತಾದ ತರಕಾರಿಗಳನ್ನು ಹಾಗೂ ಸುಮಾರು 10 ಹೆಕ್ಟೇರ್ ಗಳಲ್ಲಿ ಚೆಂಡು ಹೂ, ಪಪ್ಪಾಯ, ಬಾಳೆ ಮುಂತಾದ ಹಣ್ಣುಗಳನ್ನು ಬೆಳೆಸಲಾಗಿದೆ. ಆದರೆ ಸುಮಾರು ಒಂದು ವರ್ಷದಿಂದಲೂ ಕೊರೊನಾ ಕಾರಣದಿಂದ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ತರಕಾರಿ, ಹಣ್ಣು ಹಾಗೂ ಹೂ ಬೆಳೆಗಾರರು ಬೀದಿಗೆ ಬಿದ್ದಿದ್ದಾರೆ.

ರಾಜ್ಯದಿಂದ ತಮಿಳುನಾಡಿನ ಚೆನ್ನೈ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮುಂತಾದ ರಾಜ್ಯಗಳಿಗೆ ತಾಲ್ಲೂಕಿನಿಂದ ಪ್ರತಿದಿನ ತರಕಾರಿ ಹೋಗುತ್ತದೆ. ಆದರೆ ನೆರೆಯ ರಾಜ್ಯಗಳಲ್ಲಿಯೂ ಲಾಕ್ ಡೌನ್ ಜಾರಿ ಇರುವುದರಿಂದ ಟೊಮೆಟೊ 15 ಕೆಜಿ ಒಂದು ಬಾಕ್ಸ್ ಕೇವಲ ₹20ರಿಂದ ₹40ರವರೆಗೆ ಮಾರಾಟವಾದರೆ, ಕೋಸು ಒಂದು ಮೂಟೆ ₹60, ಬೀನ್ಸ್ ಒಂದು ಕೆಜಿ ಕೇವಲ ₹10ಗೆ ಮಾರಾಟವಾಗುತ್ತಿದೆ. ಇನ್ನು ಬದನೆ, ಬೆಂಡೆ ಹಾಗೂ ಇನ್ನಿತರೆ ತರಕಾರಿ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದೆ ಇರುವುದರಿಂದ ಇಲ್ಲಿಂದ ತರಕಾರಿ ಕಿತ್ತು ಚೆನ್ನೈಗೆ ಸಾಗಿಸುವ ಬಾಡಿಗೆ ಹಾಗೂ ಕೂಲಿಯೂ ಸಹ ರೈತರಿಗೆ ಬರುತ್ತಿಲ್ಲ ಇದರಿಂದಾಗಿ ರೈತರು ಹಣ್ಣು ತರಕಾರಿಗಳನ್ನು ಕೀಳದೆ ತೋಟಗಳಲ್ಲಿಯೇ ಬಿಟ್ಟಿರುವುದರಿಂದ ಎಲ್ಲವೂ ತೋಟಗಳಲ್ಲಿ ಒಣಗಿ ಕೊಳೆಯುತ್ತಿದೆ.

ಇನ್ನು ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಮದುವೆ, ಜಾತ್ರೆ, ರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿತ್ತು, ಆದರೆ ಲಾಕ್ ಡೌನಿಂದ ಯಾವುದೇ ಕಾರ್ಯಕ್ರಮಗಳು ಅಥವಾ ಮದುವೆಗಳು ಆಡಂಬರದಿಂದ ನಡೆಯುತ್ತಿಲ್ಲವಾದ್ದರಿಂದ ಚೆಂಡು ಹೂವನ್ನು ಕೇಳುವವರೇ ಇಲ್ಲ. ಆದ್ದರಿಂದ ಚೆಂಡು ಹೂ ತೋಟಗಳಿಗೆ ಜಾನುವಾರುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಇನ್ನು ಪಪ್ಪಾಯ ಮತ್ತು ಬಾಳೆ ಮುಂತಾದ ಬೆಳೆಗಳನ್ನು ಈ ಭಾಗದಲ್ಲಿ ಅಲ್ಪಸ್ವಲ್ಪ ಬೆಳೆಯುತ್ತಿದ್ದರೂ ಅವುಗಳನ್ನು ಬೆಳೆದ ರೈತರಿಗೆ ಬೆಲೆ ಕಡಿಮೆ ಆಗಿರುವ ಬಿಸಿ ತಟ್ಟಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT