ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ-ಜಿಲ್ಲಾಧಿಕಾರಿ ಮಂಜುನಾಥ್‌

ಎಣಿಕೆ ಕೇಂದ್ರ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಡಿಸಿ
Last Updated 20 ಮೇ 2019, 13:26 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಚುನಾವಣೆಯ ಮತ ಎಣಿಕೆ ಮೇ 23ರಂದು ನಡೆಯಲಿದ್ದು, ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಸಕಲ ಸಿದ್ಧತೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈಗಾಗಲೇ ಮತದಾನ ಮುಗಿದಿದ್ದು, ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಇರಿಸಲಾಗಿದೆ. ಇವಿಎಂಗಳ ಭದ್ರತೆಗಾಗಿ ಕಾಲೇಜಿನ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದರು.

‘ಮೇ 23ರಂದು ಬೆಳಿಗ್ಗೆ 8ಕ್ಕೆ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ನಂತರ ಇವಿಎಂಗಳಲ್ಲಿನ ಮತ ಎಣಿಕೆ ಮಾಡಿ ಮತ ಖಾತ್ರಿ ಯಂತ್ರದೊಂದಿಗೆ (ವಿ.ವಿ ಪ್ಯಾಟ್) ತಾಳೆ ಹಾಕಲಾಗುತ್ತದೆ. ಎಣಿಕೆ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಲು ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಕೋರಿದರು.

‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, 12 ಕೊಠಡಿಗಳಲ್ಲಿ ಮತ ಎಣಿಕೆ ನಡೆಯುತ್ತದೆ. ಎಣಿಕೆ ಪ್ರಕ್ರಿಯೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೇ 23ರಂದು ಬೆಳಿಗ್ಗೆ 6 ಗಂಟೆಗೆ ಹಾಜರಿರುವಂತೆ ಸೂಚಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳ ಬೀಗ ತೆರೆಯಲಾಗುವುದು’ ಎಂದು ವಿವರಿಸಿದರು.

‘700 ಮಂದಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದು, ಈ ಪೈಕಿ 500 ಅಧಿಕಾರಿಗಳು, 200 ಮಂದಿ ಸಹಾಯಕರು ಹಾಗೂ 1,000 ಮಂದಿ ಪೊಲೀಸರು ಇದ್ದಾರೆ. ಜತೆಗೆ ಪಕ್ಷ ಹಾಗೂ ಅಭ್ಯರ್ಥಿಗಳ ಕಡೆಯ ಎಜೆಂಟರು 600 ಮಂದಿ ಹಾಜರಿರುತ್ತಾರೆ. ಗುರುತಿನ ಚೀಟಿ ಇರುವವರಿಗೆ ಮಾತ್ರ ಕೊಠಡಿ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಟೇಬಲ್‌ ವ್ಯವಸ್ಥೆ: ‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ಕ್ಷೇತ್ರ ಮತಗಳ ಎಣಿಕೆಗೆ ತಲಾ 12, ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಕೆಜಿಎಫ್ ಹಾಗೂ ಕೋಲಾರ ಕ್ಷೇತ್ರಕ್ಕೆ ತಲಾ 14 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ವೀಕ್ಷಕರು ಇರುತ್ತಾರೆ’ ಎಂದು ಹೇಳಿದರು.

‘ಮತ ಎಣಿಕೆ ನಿರ್ವಹಿಸಲು ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕ ಮತ್ತು ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಏಜೆಂಟರು ಮತ ಎಣಿಕೆ ಕೊಠಡಿಯೊಳಗೆ ಮೊಬೈಲ್‌ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಗೋಪ್ಯತೆ ಕಾಪಾಡಬೇಕು: ‘ಪ್ರತಿ ವಿಧಾನಸಭಾ ಕ್ಷೇತ್ರದ ಇವಿಎಂನ ಮತಗಳ ಎಣಿಕೆ ಜತೆಗೆ ತಲಾ 1 ವಿ.ವಿ ಪ್ಯಾಟ್‌ನ ಮತ ತಾಳೆ ಹಾಕಲಾಗುತ್ತದೆ. 17ರಿಂದ 23 ಸುತ್ತು ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನ ಮತ ವಿವರ ಘೋಷಿಸಲಾಗುವುದು. ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಏಜೆಂಟರು ಮತದಾನದ ಗೋಪ್ಯತೆ ಕಾಪಾಡಬೇಕು. ಮತ ವಿವರ ಬಹಿರಂಗಪಡಿಸಿದರೆ ಶಿಸ್ತುಕ್ರಮ ಜರುಗಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT