ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ: ಹಕ್ಕು ಚಲಾವಣೆಗೆ ಕ್ಷಣಗಣನೆ

Last Updated 17 ಏಪ್ರಿಲ್ 2019, 14:02 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಗುರುವಾರ (ಏ.18) ಲೋಕಸಭಾ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತವು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿದೆ.

ಕ್ಷೇತ್ರದಲ್ಲಿ ಒಟ್ಟಾರೆ 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಮತದಾರರು ಗುರುವಾರ ಅಭ್ಯರ್ಥಿಗಳ ಸೋಲು ಗೆಲುವು ನಿರ್ಧರಿಸಲಿದ್ದಾರೆ. ಬುಧವಾರ ಸಂಜೆ ಮನೆ ಮನೆ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಜಿಲ್ಲೆಯಲ್ಲಿ 2,100 ಮತಗಟ್ಟೆಗಳಿದ್ದು, ಈ ಪೈಕಿ 1,624 ಸಾಮಾನ್ಯ ಮತ್ತು 476 ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ.

100 ಮತಗಟ್ಟೆಗಳಲ್ಲಿ ವೆಬ್‌ ಕ್ಯಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕೆ 2,310 ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ 2,310 ಮತ ಖಾತ್ರಿ ಉಪಕರಣ (ವಿ.ವಿ ಪ್ಯಾಟ್‌) ಬಳಸಲಾಗುತ್ತಿದೆ. 9,912 ಮಂದಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಶೇ 20ರಷ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಅತಿ ಸೂಕ್ಷ್ಮ ಮತಗಟ್ಟೆಗಳಿಗೆ 472 ಮಂದಿ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ 4 ಸಿಬ್ಬಂದಿ ಮತ್ತು ಒಬ್ಬರು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣಾ ಪ್ರಕ್ರಿಯೆಗೆ ಕೆಎಸ್‌ಆರ್‌ಟಿಸಿಯ 301 ಬಸ್‌ಗಳ ಜತೆಗೆ 82 ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಸೆಕ್ಟರ್‌ ಅಧಿಕಾರಿಗಳಿಗೆ ಜಿಪಿಎಸ್ ವ್ಯವಸ್ಥೆಯುಳ್ಳ 185 ವಾಹನಗಳನ್ನು ನೀಡಲಾಗಿದೆ.

ಮತದಾರರೆಷ್ಟು?: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟಾರೆ ಲೋಕಸಭಾ ಕ್ಷೇತ್ರದಲ್ಲಿ 16,12,227 ಮಂದಿ ಮತದಾರರಿದ್ದಾರೆ. ಹೊಸದಾಗಿ 26 ಸಾವಿರ ಮತದಾರರು ಹೆಸರು ಸೇರ್ಪಡೆ ಮಾಡಿದ್ದಾರೆ. 8,09,331 ಮಂದಿ ಪುರುಷ, 8,02,896 ಮಹಿಳಾ ಮತದಾರರಿದ್ದಾರೆ. ಮತದಾನ ಪ್ರಕ್ರಿಯೆ ಬೆಳಿಗ್ಗೆ 7ಕ್ಕೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ನಿಷೇಧಾಜ್ಞೆ ಜಾರಿ: ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಮಂಗಳವಾರ (ಏ.16) ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರ ಸಾಗಣೆ, ಪ್ರದರ್ಶನ ಹಾಗೂ ಬಳಕೆ ಸಹ ನಿರ್ಬಂಧಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು, ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರು ಕ್ಷೇತ್ರದಲ್ಲೆಡೆ ನಿಯಮಿತವಾಗಿ ಗಸ್ತು ನಡೆಸಲಿದ್ದಾರೆ.

ಮತಗಟ್ಟೆ ಅಧಿಕಾರಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಔಷಧಗಳು, ಓಆರ್‍ಎಸ್ ಪೊಟ್ಟಣ ಮತ್ತು ಆಯಕಟ್ಟಿನ ಜಾಗದಲ್ಲಿ ಆಂಬುಲೆನ್ಸ್‌ ಸೇವೆ ಕಲ್ಪಿಸಲಾಗಿದೆ.

ಪೊಲೀಸ್‌ ಕಟ್ಟೆಚ್ಚರ: ಕ್ಷೇತ್ರದ 24 ಚೆಕ್‌ಪೋಸ್ಟ್‌ಗಳಲ್ಲಿ ಹಣ ಹಾಗೂ ಮದ್ಯ ಸಾಗಣೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಚುನಾವಣಾ ಅಕ್ರಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.

3,800 ಪೊಲೀಸ್‌ ಸಿಬ್ಬಂದಿ, 3,480 ಮಂದಿ ಗೃಹರಕ್ಷಕ ದಳ ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 8 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) 20 ತುಕಡಿ ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) 4 ಕಂಪನಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮತಗಟ್ಟೆ ತಲುಪಿದ ಸಿಬ್ಬಂದಿ: ಮತಗಟ್ಟೆ ಸಿಬ್ಬಂದಿಯು ಆಯಾ ಕ್ಷೇತ್ರದ ಮಸ್ಟರಿಂಗ್‌ ಕೇಂದ್ರಗಳಲ್ಲಿ ಬುಧವಾರ ಇವಿಎಂ ಮತ್ತು ವಿ.ವಿ ಪ್ಯಾಟ್‌ ಉಪಕರಣ ಪಡೆದು ಪೊಲೀಸ್‌ ಭದ್ರತೆಯಲ್ಲಿ ಮತಗಟ್ಟೆಗೆ ತಲುಪಿದ್ದಾರೆ. ಮತಗಟ್ಟೆ ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರಗಳಲ್ಲಿ ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬರ್‌, ಮಸಾಲ ವಡೆ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಗುರುತಿನ ಚೀಟಿ: ಮತದಾರರ ಬಳಿಕ ಎಪಿಕ್ ಕಾರ್ಡ್ ಇಲ್ಲದಿದ್ದ ಸಂದರ್ಭದಲ್ಲಿ ಚಾಲನಾ ಪರವಾನಗಿ (ಡಿ.ಎಲ್‌), ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ನಿಗಮ ಮಂಡಳಿಯಿಂದ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯಿಂದ ನೀಡಿರುವ ಭಾವಚಿತ್ರವಿರುವ ಪಾಸ್‌ಬುಕ್‌, ಪಾನ್‌ಕಾರ್ಡ್‌, ನರೇಗಾ ಉದ್ಯೋಗ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ 12 ಬಗೆಯ ಪರ್ಯಾಯ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು.

ಅಂಕಿ ಅಂಶ.....
* 2,100 ಮತಗಟ್ಟೆಗಳು
* 1,624 ಸಾಮಾನ್ಯ ಮತಗಟ್ಟೆ
* 476 ಅತಿ ಸೂಕ್ಷ್ಮ ಮತಗಟ್ಟೆ
* 301 ಕೆಎಸ್‌ಆರ್‌ಟಿಸಿ ಬಸ್‌
* 2,310 ಮತ ಖಾತ್ರಿ ಉಪಕರಣ
* 9,912 ಮಂದಿ ಚುನಾವಣಾ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT