ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತ ಎಣಿಕೆ ಸುಸೂತ್ರ: ಗೆದ್ದ ಅಭ್ಯರ್ಥಿಗೆ ಜೈಕಾರ

ಎಣಿಕೆ ಕೇಂದ್ರದ ಸುತ್ತಮುತ್ತ ಜನಜಂಗುಳಿ
Last Updated 23 ಮೇ 2019, 16:13 IST
ಅಕ್ಷರ ಗಾತ್ರ

ಕೋಲಾರ: ನಗರದ ಸರ್ಕಾರಿ ಪ್ರಥಮ ಕಾಲೇಜು ಕಟ್ಟಡದಲ್ಲಿ ಗುರುವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯಿತು.

ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಕಾಲೇಜಿನ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ 23 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು.

ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೇಂದ್ರದ ಬಳಿ ಬೆರಳೆಣಿಕೆ ಜನರಿದ್ದರು. ಸಮಯ ಕಳೆದಂತೆ ಜನಜಂಗುಳಿ ಹೆಚ್ಚುತ್ತಾ ಹೋಯಿತು. ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಿತು. ನಂತರ ವಿದ್ಯುನ್ಮಾನ ಮತ ಯಂತ್ರಗಳಲ್ಲಿನ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು.

ಮತ ಎಣಿಕೆ ಮುಂದುವರಿದಂತೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಎದೆಯಲ್ಲಿ ಸೋಲು ಗೆಲುವಿನ ಢವ ಢವ ಶುರುವಾಯಿತು. ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 5 ಬೂತ್‌ನ ಮತ ಖಾತ್ರಿ ಉಪಕರಣಗಳನ್ನು (ವಿ.ವಿ ಪ್ಯಾಟ್‌) ಲಾಟರಿ ಮೂಲಕ ಆಯ್ಕೆ ಮಾಡಿ ಮತ ಎಣಿಕೆ ಮಾಡಲಾಯಿತು. ನಂತರ ಇವಿಎಂ ಮತಗಳೊಂದಿಗೆ ತಾಳೆ ಹಾಕಲಾಯಿತು.

ಅಂತಿಮ ಕಣದಲ್ಲಿದ್ದ 14 ಅಭ್ಯರ್ಥಿಗಳ ಫಲಿತಾಂಶ ಸಂಜೆ 5 ಗಂಟೆ ಸುಮಾರಿಗೆ ಪ್ರಕಟವಾಯಿತು. ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಎಣಿಕೆ ಕೇಂದ್ರದಿಂದ ಹೊರ ಬಂದು ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಸಂತಸ ಹಂಚಿಕೊಂಡರು.

ಪಕ್ಷಗಳ ಕಾರ್ಯಕರ್ತರು ಮುನಿಸ್ವಾಮಿ ಅವರನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಬೆಂಬಲಿಗರು ಅಭ್ಯರ್ಥಿಗಳಿಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪರ ಘೋಷಣೆ ಕೂಗಿದರು. ಜತೆಗೆ ಸಿಹಿ ಹಂಚಿ ಮತ್ತು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮುನಿಸ್ವಾಮಿ ಕೋಲಾರಮ್ಮ ದೇವಸ್ಥಾನದವರೆಗೂ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ದಾರಿಯುದಕ್ಕೂ ಪಕ್ಷದ ಕಾರ್ಯಕರ್ತರು ಅವರ ಹೂವಿನ ಸುರಿಮಳೆ ಸುರಿಸಿದರು. ರಸ್ತೆ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಮುನಿಸ್ವಾಮಿ ಕೈ ಮುಗಿದು ಧನ್ಯವಾದ ಸಲ್ಲಿಸಿದರು.

ಸಂಚಾರ ನಿರ್ಬಂಧ: ಮತ ಎಣಿಕೆ ಹಿನ್ನೆಲೆಯಲ್ಲಿ ಕಾಲೇಜಿನ ಅಕ್ಕಪಕ್ಕದ ಬಂಗಾರಪೇಟೆ ರಸ್ತೆ, ಅಂಚೆ ಕಚೇರಿ ರಸ್ತೆ, ರಾಮಕೃಷ್ಣ ಉಡುಪ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಸಂಜೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಅಭ್ಯರ್ಥಿಗಳ ಬೆಂಬಲಿಗರು, ಏಜೆಂಟರು ಹಾಗೂ ಪಕ್ಷಗಳ ಕಾರ್ಯಕರ್ತರ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಆವರಣ, ಸಿ.ಬೈರೇಗೌಡ ನಗರ, ಜಿಲ್ಲಾ ಪಂಚಾಯಿತಿ ಮುಂಭಾಗದ ಲಾರಿ ನಿಲ್ದಾಣ, ಮಣಿಘಟ್ಟ ರಸ್ತೆ, ನಚಿಕೇತನ ವಿದ್ಯಾರ್ಥಿನಿಲಯದ ಆವರಣ, ಕೋಲಾರಮ್ಮ ದೇವಸ್ಥಾನದ ಮುಂಭಾಗ, ಇಟಿಸಿಎಂ ವೃತ್ತ, ಕೆಇಬಿ ಕಚೇರಿ ಮುಂದೆ, ಮೆಥೋಡಿಸ್ಟ್ ಶಾಲೆ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ಕೇಂದ್ರಕ್ಕೆ ನಡೆದು ಬಂದರು.

ಗುರುತಿನ ಚೀಟಿ ಹೊಂದಿದ್ದವರಿಗೆ ಮಾತ್ರ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಪೊಲೀಸರು ಪ್ರತಿ ವ್ಯಕ್ತಿಯನ್ನು ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡಿದ ನಂತರವಷ್ಟೇ ಕೇಂದ್ರದೊಳಗೆ ಹೋಗಲು ಅವಕಾಶ ನೀಡಿದರು.

ಕೇಂದ್ರದಿಂದ ನಿರ್ಗಮನ: 16ನೇ ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಸೋಲಿನ ಸುಳಿವರಿತ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಇತರ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸಹ ನಿರಾಶೆಯಿಂದ ಮತ ಎಣಿಕೆ ಮಧ್ಯೆಯೇ ಕೇಂದ್ರದಿಂದ ನಿರ್ಗಮಿಸಿದರು.

ಮತ ಎಣಿಕೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಹಾಗೂ ಭದ್ರತಾ ಕಾರ್ಯದಲ್ಲಿದ್ದ ಪೊಲೀಸರಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿ ಬಾತ್‌, ಪೊಂಗಲ್‌, ಉದ್ದಿನ ವಡೆ ಮತ್ತು ಚಟ್ನಿ ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ಅನ್ನ ಸಂಬಾರ್‌, ಮೊಸರನ್ನ, ಪಲಾವ್‌, ಬಾಳೆ ಹಣ್ಣು, ಕ್ಯಾರೆಟ್‌ ಹಲ್ವಾ ವಿತರಿಸಲಾಯಿತು.

ಕೇಂದ್ರದ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಸೇರಿದಂತೆ 1,000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT