ಮಾಲೂರು: ಪಟ್ಟಣದಲ್ಲಿ ಬುಧವಾರ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ವೈ. ನಂಜೇಗೌಡ, ‘ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಕೊಡುಗೆ ಅನನ್ಯವಾದದ್ದು. ಅಹಿಂಸೆ ಎಂಬ ಪರಿಕಲ್ಪನೆ ಹುಟ್ಟುಹಾಕಿದರು. ಅವರ ಗೌರವಾರ್ಥವಾಗಿ ವಿಶ್ವಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಅಹಿಂಸಾ ದಿನ ಆಚರಿಸುತ್ತದೆ’ ಎಂದರು.
ಸ್ವಾತಂತ್ರ್ಯ ಹೋರಾಟದ ವೇಳೆ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದರು. ಈ ಸಭೆಗೆ ನೂರು ವರ್ಷ ತುಂಬಿದೆ ಎಂದರು.
ಮಾಲೂರ ಪಟ್ಟಣದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರವು ವಿವಿಧ ಯೋಜನೆಗಳಡಿ ಸುಮಾರು ₹1,200 ಕೋಟಿ ಅನುದಾನ ನೀಡಿದೆ. ಪಟ್ಟಣಲ್ಲಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ ಅಭಿವೃದ್ಧಿಗೆ ₹2.20 ಕೋಟಿ, ₹20 ಕೋಟಿ ವೆಚ್ಚದಲ್ಲಿ ಪಟ್ಟಣದ ಬಸ್ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಆರಂಭವಾಗಲಿದೆ. ದೊಡ್ಡಕೆರೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿ, ನೀರು ಸರಬರಾಜು ಮಾಡಲು ₹44.66 ಕೋಟಿ ಮಂಜೂರಾಗಿದೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪುರಸಭೆಗೆ ₹30 ಕೋಟಿ ಮಂಜೂರಾಗಿದ್ದು, ಪಟ್ಟಣದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಪಟ್ಟಣದ ಮುಖ್ಯ ಕಾಲುವೆ ಅಭಿವೃದ್ಧಿಗೆ ₹14 ಕೋಟಿ, ಉದ್ಯಾನವನ ಅಭಿವೃದ್ಧಿಗೆ ₹2 ಕೋಟಿ ಬಿಡುಗಡೆಯಾಗಿದೆ. ಒಟ್ಟಾರೆ ಪಟ್ಟಣದ ಅಭಿವೃದ್ಧಿಗೆ ₹150 ಕೋಟಿ ಅನುದಾನ ತರಲಾಗಿದೆ ಎಂದರು.
ಬೆಳಗ್ಗೆ 10 ಗಂಟೆಗೆ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾರ್ಲಾಪಣೆ ಮಾಡಿದ ಅವರು, ವಿವಿಧ ಶಾಲೆಗಳ ಮಕ್ಕಳು ಮತ್ತು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಒಂದೂವರೆ ಕಿ.ಮೀ ಮೆರವಣಿಗೆಯಲ್ಲಿ ಸಾಗಿದರು.
ಮಾಜಿ ಶಾಸಕ ಎ.ನಾಗರಾಜು, ಪುರಸಭೆ ಅಧ್ಯಕ್ಷೆ ಕೋಮಲ, ವಿಜಯಲಕ್ಷ್ಮಿ, ಎ. ರಾಜಪ್ಪ, ಮುರಳೀಧರ್, ಇಮ್ತಿಯಾಜ್, ವೆಂಕಟೇಶ್, ಸಿ.ಒ. ಪ್ರದೀಪ್, ಇ.ಒ ಕೃಷ್ಣಪ್ಪ, ಬಿಇಒ ಚಂದ್ರಕಲಾ, ಮಹಮದ್ ನಯುಂ, ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ, ಕೆ.ಎಚ್. ಚನ್ನರಾಯಪ್ಪ, ಪಿ.ನಾರಾಯಣಸ್ವಾಮಿ, ಎಂ.ವಿ.ಹನುಮಂತಯ್ಯ, ಎ.ಅಶ್ವಥರೆಡ್ಡಿ, ಮದುಸೂದನ್, ವಿಜಯನಾರಸಿಂಹ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.