ಕೋಲಾರ: ‘ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತ ಸಮುದಾಯದವರಿಗೆ ರಾಜಕೀಯ ಶಕ್ತಿಯೂ ಇಲ್ಲ, ಆರ್ಥಿಕ ಶಕ್ತಿಯೂ ಇಲ್ಲ. ಹೆಚ್ಚಿನ ಸಂಪತ್ತು ಹಾಗೂ ರಾಜಕೀಯ ಶಕ್ತಿ ಲಿಂಗಾಯತರು ಮತ್ತು ಒಕ್ಕಲಿಗರ ಬಳಿಯೇ ಇದೆ. ಇನ್ನು ಅಧಿಕಾರಿ ವರ್ಗ, ನ್ಯಾಯಾಂಗ ವ್ಯವಸ್ಥೆಯಲ್ಲಿರುವವರು, ಮಾಧ್ಯಮದಲ್ಲಿರುವವರು ಹೆಚ್ಚಿನವರು ಬ್ರಾಹ್ಮಣರೇ ಆಗಿರುತ್ತಾರೆ’ ಎಂದು ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ ಹಾಗೂ ವಿಧಾನಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಅಹಿಂದ ಚಳವಳಿ ಮತ್ತು ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಹಿಂದ ಸಮುದಾಯಗಳ ಪ್ರಮುಖರ ಮತ್ತು ಸಂಘಟನೆಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
'ಬಹುಸಂಖ್ಯಾತ ಅಹಿಂದ ಬಳಿ ಏನೂ ಇಲ್ಲ. ಅಂಬೇಡ್ಕರ್ ಅವರಿಂದಾಗಿ ನಮಗೆ ಶಿಕ್ಷಣ ಸಿಗುತ್ತಿದ್ದು, ಮೂರು ಹೊತ್ತು ಊಟ ಮಾಡಲು ಸಾಧ್ಯವಾಗುತ್ತಿದೆ ಅಷ್ಟೇ. ಈ ದೇಶ ಕೇವಲ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರದ್ದು ಅಲ್ಲ. ಅವರು ಈಗಾಗಲೇ ಎಲ್ಲವನ್ನೂ ಗಳಿಸಿದ್ದಾರೆ. ಏನೂ ಪಡೆಯದ ನಾವು ಈಗ ವಾಸ್ತವ ಅರಿತು ಮುನ್ನಡೆಯಬೇಕಿದೆ’ ಎಂದರು.
‘ಅಹಿಂದ ಚಳವಳಿ ಬಲಗೊಂಡರೆ ಮುಂದಿನ ವರ್ಷಗಳಲ್ಲಿ ಸಮಾನತೆ ಬರಬಹುದು. ಅದಕ್ಕಾಗಿ ಈಗ ನಾವು ಯೋಚನೆ ಮಾಡಬೇಕಿದೆ. ಅಹಿಂದಕ್ಕೆ ಪುನರ್ ಜನ್ಮ ನೀಡಬೇಕಿದೆ. ಬದಲಾವಣೆ ಹಾದಿ ಹಿಡಿಯಬೇಕಿದೆ’ ಎಂದು ಕರೆ ನೀಡಿದರು.
‘ಬಹುಸಂಖ್ಯಾತರಾಗಿದ್ದರೂ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಂಘಟನೆಯಲ್ಲಿ ಹಿಂದುಳಿದಿರುವ ಅಹಿಂದ ವರ್ಗವನ್ನು ಮೇಲೆತ್ತುವುದು ಅಹಿಂದ ಚಳವಳಿಯ ಆಶಯವಾಗಿದೆ. ಆರ್ಥಿಕ ಹಾಗೂ ರಾಜಕೀಯ ಶಕ್ತಿಯ ಅಗತ್ಯವಿದ್ದು, ಅದಕ್ಕಾಗಿ ಸಂಘಟನೆ ಆಗಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಲ್.ಎ. ಮಂಜುನಾಥ್ ಮಾತನಾಡಿ, ‘ಅಹಿಂದ ವರ್ಗಗಳು ಒಂದಾಗಬೇಕು. ಆಗ ಶಾಶ್ವತವಾಗಿ ಅಧಿಕಾರ ಪಡೆಯಬಹುದು. ಹೀಗಾಗಿ, ಅಹಿಂದ ಚಳವಳಿಗೆ ಮರು ಜೀವಕೊಡಬೇಕಿದೆ. ಆ ಮೂಲಕ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರಿಗೆ ಧ್ವನಿ ಆಗಿ ನಿಲ್ಲಬೇಕಿದೆ’ ಎಂದು ತಿಳಿಸಿದರು.
ಮುಖಂಡ ಅಫ್ರೋಜ್ ಪಾಷಾ ಮಾತನಾಡಿ, ‘ಸಣ್ಣ ಸಣ್ಣ ಜಾತಿಗಳು ಸೇರಿಕೊಂಡರೆ ಭೂಮಿ ಇರುವವರೆಗೆ ಆಡಳಿತ ನಡೆಸಬಹುದು. ದಲಿತರು, ಅಲ್ಪಸಂಖ್ಯಾತರು ಸೇರಿದರೆ ರಾಜ್ಯದಲ್ಲಿ 135 ಸೀಟು ಗೆಲ್ಲಬಹುದು. ಇನ್ನುಳಿದ ಸಣ್ಣ ಸಣ್ಣ ಜಾತಿಗಳು ಸೇರಿದರೆ 200 ಸೀಟು ಗೆಲ್ಲಬಹುದು’ ಎಂದರು.
ಸಂಚಾಲಕ ವೆಂಕಟೇಶ್ ಗೌಡ ಮಾತನಾಡಿ, ‘ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಲು ಹೊರಟಿರುವ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅಹಿಂದ ಉಳಿವಿಗೆ ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಚಳವಳಿ ಸಂಘಟಿಸಿ ನಮ್ಮ ಹಕ್ಕನ್ನು ಪಡೆಯಲು ಪ್ರಯತ್ನಿಸೋಣ’ ಎಂದು ಹೇಳಿದರು.
‘ಈ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸೋಣ. ಅಲ್ಲಿಂದ ಬಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿ ಅಹಿಂದ ಮರು ಸ್ಥಾಪನೆ ಮಾಡೋಣ’ ಎಂದರು
ಸಂಚಾಲಕ ದಾಸ್ ಪ್ರಕಾಶ್, ‘ಈ ನಾಡಿನಿಂದಲೇ ಅಹಿಂದ ಚಳವಳಿ ಪುನರ್ ಜನ್ಮ ಪಡೆಯಬೇಕು. ಹಿಂದೆ ರಾಜಕೀಯವಾಗಿ ಅಹಿಂದ ಹುಟ್ಟು ಪಡೆದಿತ್ತು. ನಾವೀಗ ಸಂಘಟನಾತ್ಮಕವಾಗಿ ಕಟ್ಟಬೇಕಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ‘ಅಹಿಂದ’ ಚಳವಳಿ ಸಂಘಟನೆಯ ಜಿಲ್ಲಾ ಸಮಿತಿ ರಚನೆ ಮತ್ತು ಜಿಲ್ಲೆಗಳಲ್ಲಿ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರ ಬ್ಯಾಂಕಿನ ಶಾಖೆಗಳ ಸ್ಥಾಪನೆ ಬಗ್ಗೆಯೂ ಚರ್ಚೆ ನಡೆಯಿತು.
ಚಳವಳಿ ಸಂಚಾಲಕ ಅಶೋಕ್ ಕುಮಾರ್, ಒಬಿಸಿ ಮಂಜುನಾಥ್, ಪ್ರಸಾದ್ ಬಾಬು, ಸಲಾಲುದ್ದೀನ್ ಬಾಬು, ಮುದ್ದುಕೃಷ್ಣ, ವಿಜಯಕುಮಾರಿ, ವೆಂಕಟೇಶ್, ಅಶ್ವತ್ಥ ಕುಮಾರ್, ಶ್ರೀಕೃಷ್ಣ, ದೇವರಾಜ್, ಯೋಗೇಶ್ವರಿ ಇದ್ದರು.
ಶಾಸನ ಸಭೆಯಲ್ಲೂ ‘ಅಹಿಂದ’ ಧ್ವನಿ ಇಲ್ಲ
‘2011ರ ಜನಸಂಖ್ಯೆ ಪ್ರಕಾರ ರಾಜ್ಯದಲ್ಲಿ 62 ಲಕ್ಷ ಲಿಂಗಾಯತರು ಇದ್ದಾರೆ. ಶಾಸನ ಸಭೆಗೆ ಸಮುದಾಯದ 80ರಿಂದ 100 ಪ್ರತಿನಿಧಿಗಳು ಬರುತ್ತಾರೆ. ಒಕ್ಕಲಿಗರ ಜನಸಂಖ್ಯೆ 54 ಲಕ್ಷವಿದ್ದು ಶಾಸನ ಸಭೆಗೆ 60ರಿಂದ 80 ಮಂದಿ ಇರುತ್ತಾರೆ. ಸಾಮಾನ್ಯವಾಗಿ ಈ ಎರಡು ಜಾತಿಯವರೇ 150 ಮಂದಿ ಇರುತ್ತಾರೆ. ಪರಿಶಿಷ್ಟ ಜಾತಿ ಪಂಗಡದ ಮೀಸಲು ಕ್ಷೇತ್ರದ 52 ಜನರಿರುತ್ತಾರೆ. 2.48 ಕೋಟಿ ಇರುವ ಸಣ್ಣ ಸಣ್ಣ ಸಮುದಾಯವನ್ನು ಸಿದ್ದರಾಮಯ್ಯ ಸೇರಿದಂತೆ ಕೇವಲ 22 ಮಂದಿ ಶಾಸನಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಆ ಪೈಕಿ 72 ಲಕ್ಷ ಇರುವ ಮುಸ್ಲಿಮರು ಕೇವಲ 8 ಮಂದಿ ಇದ್ದಾರೆ’ ಎಂದು ಎಸ್.ಮೂರ್ತಿ ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ 14 ನಿವೇಶನ ಹೊಂದಿದ್ದಾರೆ ಎಂದು ಆರೋಪಿಸುತ್ತಾ ಪಕ್ಷಗಳ ಹೆಸರಿನಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರು ಮೈಸೂರಿಗೆ ಜಾಥಾ ನಡೆಸಿದ್ದಾರೆ.ಎಸ್.ಮೂರ್ತಿ, ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ
ಸುಖಾಸುಮ್ಮನೇ ಆರೋಪ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದುರ್ಬಲ ಮಾಡಿ ಅಹಿಂದ ವರ್ಗದ ವಿಶ್ವಾಸ ಕುಗ್ಗಿಸುವ ಷಡ್ಯಂತ್ರ ನಡೆಯುತ್ತಿದೆ.ಎಲ್.ಎ.ಮಂಜುನಾಥ್, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.