ಬುಧವಾರ, ಸೆಪ್ಟೆಂಬರ್ 18, 2019
23 °C
ಬೀಳ್ಕೊಡುಗೆ ಸಮಾರಂಭದಲ್ಲಿ ಜಿ.ಪಂ ನಿರ್ಗಮಿತ ಸಿಇಒ ಜಗದೀಶ್‌ ಮನವಿ

ಅಭಿವೃದ್ಧಿಯ ಕನಸು ನನಸು ಮಾಡಿ

Published:
Updated:
Prajavani

ಕೋಲಾರ: ‘ಜಿಲ್ಲೆಯ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯಗತಗೊಳಿಸಿ ನನ್ನ ಕನಸು ನನಸು ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ನಿರ್ಗಮಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಅಧಿಕಾರಿಗಳು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನ ಗುರುತಿಸಿದಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದರು.

‘ನಾನು ಹಾಸನ ಜಿಲ್ಲಾ ಪಂಚಾಯಿತಿಯಿಂದ ಕೋಲಾರಕ್ಕೆ ವರ್ಗಾವಣೆಯಾದಾಗ ಸಾಕಷ್ಟು ಮಂದಿ ಕರೆ ಮಾಡಿ ಹೋಗದಂತೆ ಒತ್ತಾಯಿಸಿದರು. ಇದಕ್ಕೆ ಕಾರಣ ಕೋಲಾರ ಜಿಲ್ಲೆಯಲ್ಲಿನ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅರ್ಜಿದಾರರ ಹಾವಳಿ. ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಸಾವಿರಾರು ಆರ್‌ಟಿಐ ಅರ್ಜಿಗಳು ಹೋಗಿರುತ್ತದೆ. ಹೀಗಾಗಿ ಈ ಜಿಲ್ಲೆಗೆ ಬರಲು ಅಧಿಕಾರಿಗಳು ಹಿಂಜರಿಯುತ್ತಾರೆ’ ಎಂದು ಹೇಳಿದರು.

‘ಬಡವರಿಗೆ, ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಹೊಟ್ಟೆ ಪಾಡಿಗಾಗಿ ಅರ್ಜಿ ಹಾಕಿಕೊಂಡು ಬರುವವರನ್ನು ವಾಪಸ್ ಕಳುಹಿಸಬೇಕು. ದುರುದ್ದೇಶಕ್ಕೆ ಅರ್ಜಿ ಹಾಕುವವರನ್ನು ನಿಯಂತ್ರಿಸಲಾಗಿದೆ. ಇನ್ನು ಮುಂದೆ ಅವರಿಗೆ ಅವಕಾಶ ನೀಡಬೇಡಿ’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ರೈತರು ತುಂಬಾ ಧೈರ್ಯಶಾಲಿಗಳು. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರು ಲಭ್ಯವಿದ್ದರೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಕೋಲಾರ ಜಿಲ್ಲೆಯಲ್ಲಿ ಬರವಿದ್ದರೂ ರೈತರು ಎದೆಗುಂದದೆ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

₹ 120 ಕೋಟಿ ವೆಚ್ಚ: ‘ಜಿಲ್ಲೆಯ ಸಮಸ್ಯೆ ಅರಿತು ಕ್ರಿಯಾಯೋಜನೆ ಸಿದ್ಧಪಡಿಸಿದೆ. ಚೆಕ್‌ಡ್ಯಾಂ ನಿರ್ಮಾಣ, ನಿರುದ್ಯೋಗ ಸಮಸ್ಯೆ ನಿವಾರಿಸಲು ನರೇಗಾದಲ್ಲಿ ₹ 120 ಕೋಟಿ ವೆಚ್ಚ ಮಾಡಲು ಸಾಧ್ಯವಾಯಿತು. ನೀರಿನ ಸಮಸ್ಯೆ ಎದುರಿಸಲು ₹ 11.50 ಕೋಟಿಗೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರ ಪ್ರಸ್ತಾವ ಕಳುಹಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೂಲಕ ₹ 20 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಇದನ್ನು ಸಮರ್ಪಕವಾಗಿ ಬಳಸಿ’ ಎಂದರು.

‘ಸರ್ಕಾರ ಜಿಲ್ಲೆಯಂತೆಯೇ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಚೆಕ್‌ಡ್ಯಾಂ ನಿರ್ಮಿಸಲು ಮುಂದಾಗಿದೆ. ಈ ಯಶಸ್ಸಿನ ಹಿಂದೆ ಪ್ರತಿ ಇಲಾಖೆಯ ಅಧಿಕಾರಿಗಳ ಸಹಕಾರವಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಓದಲು ಬಾರದಿರುವುದನ್ನು ಕಂಡಿದ್ದೇನೆ. ಶಿಕ್ಷಕರು ಸಂಬಳಕ್ಕಾದರೂ ನ್ಯಾಯ ದೊರಕಿಸಲು ಮಕ್ಕಳಿಗೆ ಚೆನ್ನಾಗಿ ಕನ್ನಡ ಕಲಿಸಬೇಕು. ಇಲ್ಲದಿದ್ದರೆ ಮಕ್ಕಳನ್ನು ವಂಚಿಸಿದಂತೆ ಆಗುತ್ತದೆ’ ಎಂದು ಕಿವಿಮಾತು ಹೇಳಿದರು.

ಕನಸು ನನಸಾಗಲಿ: ‘ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು ಮಾತ್ರ ಜಿಲ್ಲಾಧಿಕಾರಿ ಜವಾಬ್ದಾರಿ ನಿಭಾಯಿಸಲು ಸಾಧ್ಯ. ಯಾವುದೇ ಹುದ್ದೆಯಲ್ಲಿದ್ದರೂ ಜನ ನಮ್ಮನ್ನು ಗುರುತಿಸುವಂತಹ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಇತರೆ ಕಾರ್ಯಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರವಿದ್ದರೆ, ಶೇ 70ರಷ್ಟು ಜಿಲ್ಲೆಯ ಅಧಿಕಾರ ಜಿ.ಪಂ ಸಿಇಒಗೆ ಇರುತ್ತದೆ. ಗ್ರಾಮೀಣಾಭಿವೃದ್ಧಿಯ ಸಂಪೂರ್ಣ ಹೊಣೆ ಸಿಇಒ ಮೇಲಿರುತ್ತದೆ. ಸಿಇಒ ಶ್ರಮದಿಂದಲೇ ಜಿಲ್ಲೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬರುತ್ತವೆ’ ಎಂದು ಅಭಿಪ್ರಾಯಪಟ್ಟರು.

ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಜಿ.ಪಂ ಸದಸ್ಯರು ಜಗದೀಶ್‌ ಅವರನ್ನು ಸನ್ಮಾನಿಸಿದರು. ಜಿ.ಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಆರ್.ನಾರಾಯಣಸ್ವಾಮಿ, ಅರವಿಂದ್, ಬಿ.ವಿ.ಮಹೇಶ್, ರೂಪಶ್ರೀ, ಅಶ್ವಿನಿ, ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಪಾಲ್ಗೊಂಡಿದ್ದರು.

Post Comments (+)