ಶಿಕ್ಷಣದ ಜತೆ ನೈತಿಕ ಮೌಲ್ಯ ರೂಢಿಸಿಕೊಳ್ಳಿ

ಭಾನುವಾರ, ಮೇ 26, 2019
33 °C
ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರ ವಿ.ವಿ ಕುಲಪತಿ ಕೆಂಪರಾಜ್ ಕಿವಿಮಾತು

ಶಿಕ್ಷಣದ ಜತೆ ನೈತಿಕ ಮೌಲ್ಯ ರೂಢಿಸಿಕೊಳ್ಳಿ

Published:
Updated:
Prajavani

ಕೋಲಾರ: ‘ವಿದ್ಯಾರ್ಥಿಗಳು ಶಿಕ್ಷಣದ ಜತೆ ನೈತಿಕ ಮೌಲ್ಯ ರೂಢಿಸಿಕೊಳ್ಳಬೇಕು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್ ಕಿವಿಮಾತು ಹೇಳಿದರು.

ಇಲ್ಲಿ ಗುರುವಾರ ನಡೆದ ಸರ್ಕಾರಿ ಮಹಿಳಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ‘ಕೌಶಲ ಅಭಿವೃದ್ಧಿ ಮೂಲಕ ಆಧುನಿಕತೆ ಮತ್ತು ತಾಂತ್ರಿಕತೆಯ ಸವಾಲು ಎದುರಿಸಲು ಸಿದ್ಧರಾಗಿ’ ಎಂದು ಸಲಹೆ ನೀಡಿದರು.

‘ಶಿಕ್ಷಣದಲ್ಲಿ ಆಧುನಿಕತೆ, ತಾಂತ್ರಿಕತೆ ಅಳವಡಿಕೆಯಾಗುತ್ತಿದೆ. ಬದಲಾದ ಕಾಲಕ್ಕೆ ತಕ್ಕಂತೆ ಮನೆಯಲ್ಲೇ ಕುಳಿತು ಪರೀಕ್ಷೆ ಬರೆಯುವ ಕಾಲ ಬರಬಹುದು. ಇಡೀ ವಿಶ್ವ ಭಾರತದ ಕಡೆ ನೋಡುತ್ತಿದೆ. 2025ರ ವೇಳೆಗೆ 18ರಿಂದ 28 ವರ್ಷ ವಯೋಮಿತಿಯ ಯುವ ಸಮುದಾಯ ಶೇ 56ರಷ್ಟು ಆಗಲಿದೆ. ಜಗತ್ತಿನ ಯಾವ ರಾಷ್ಟ್ರದಲ್ಲೂ ಯುವ ಸಂಪತ್ತು ಈ ಪ್ರಮಾಣದಲ್ಲಿ ಇರುವುದಿಲ್ಲ’ ಎಂದರು.

‘ದೇಶದ ಯುವ ಸಂಪತ್ತಿಗೆ ಬಲ ನೀಡಲು ಗುಣಮಟ್ಟದ ಶಿಕ್ಷಣ ಮತ್ತು ಕೌಶಲ ಒದಗಿಸುವುದು ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ಜವಾಬ್ದಾರಿ. ನಾವಿರುವ ಸಮಾಜ ಸರಳ ಸಮಾಜವಲ್ಲ. ಕ್ಲಿಷ್ಟಕರ ಸನ್ನಿವೇಶದಲ್ಲಿ ಸ್ಪರ್ಧಾತ್ಮಕ ಪ್ರಪಂಚಕ್ಕೆ ಕಾಲಿಡುತ್ತಿದ್ದೇವೆ. ಸ್ಪರ್ಧಾತ್ಮಕ ವ್ಯವಸ್ಥೆ ಎದುರು ಜಯಶೀಲರಾಗಲು ಶಿಕ್ಷಣ ವ್ಯವಸ್ಥೆ ಪೂರಕವಾಗಿರಬೇಕು. ಜ್ಞಾನಾಧಾರಿತ ಶಿಕ್ಷಣದ ಜತೆಗೆ ಕೌಶಲಾಧಾರಿತ ಶಿಕ್ಷಣ ಪಡೆಯುವುದು ಅನಿವಾರ್ಯ’ ಎಂದು ಅಭಿಪ್ರಾಯಪಟ್ಟರು.

ದಾಖಲಾತಿ ಕುಸಿತ: ‘ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಕುಸಿತವೇ ದೊಡ್ಡ ಸಮಸ್ಯೆಯಾಗಿದೆ. ಆದರೆ, ಸರ್ಕಾರಿ ಕೋಲಾರದ ಮಹಿಳಾ ಕಾಲೇಜಿನಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಓದುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿ.ವಿಯಲ್ಲಿ ಮುಂದಿನ ದಿನಗಳಲ್ಲಿ ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳು ಎದುರಿಸುತ್ತಿರುವ ಅಂಕಪಟ್ಟಿ, ದಾಖಲಾತಿ ಅನುಮೋದನೆ ಸಮಸ್ಯೆಗೆ ಅವಕಾಶವಿಲ್ಲದಂತೆ ಆಡಳಿತ ನಡೆಸಲು ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

ಸಮಾಜಕ್ಕೆ ಮಾದರಿ: ‘ಎಲ್ಲಾ ಕ್ಷೇತ್ರದಲ್ಲೂ ಅನನ್ಯ ಸಾಧನೆ ಮಾಡುತ್ತಿರುವ ಹೆಣ್ಣು ಮಕ್ಕಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೆಣ್ಣು ಮಕ್ಕಳಲ್ಲಿ ಛಲ, ಕೌಶಲ್ಯ, ಕಲಿಕಾಸಕ್ತಿಗೆ ಸಾಟಿಯಿಲ್ಲ. ಉದ್ಯೋಗಕ್ಕಾಗಿ ಕಲಿಕೆಯಲ್ಲ. ಬದಲಿಗೆ ಬದುಕು ರೂಪಿಸಿಕೊಳ್ಳಲು ಕಲಿಯಬೇಕು’ ಎಂದು ಚಿತ್ರ ನಟ ಜಿ.ಕಿಶೋರ್‌ಕುಮಾರ್ ಹೇಳಿದರು.

ಶೈಕ್ಷಣಿಕವಾಗಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಪುರಸ್ಕರಿಸಲಾಯಿತು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮನರಂಜಿಸಿದವು. ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಬೆಂಗಳೂರಿನ ಸಂಜೀವಿನಿ ಸಿಟೆಡಾಲ್ ಸೆಂಟರ್‌ ಮುಖ್ಯಸ್ಥ ಸಿ.ಮಹಾನಂದ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !