ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಶಕ್ತ ಭಾರತಕ್ಕೆ ಸಂಕಲ್ಪ ಮಾಡಿ

ಶಿಕ್ಷಕರಿಗೆ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಕಿವಿಮಾತು
Last Updated 5 ಸೆಪ್ಟೆಂಬರ್ 2021, 14:10 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಮೂಲಕ ಸ್ವಾಭಿಮಾನಿ, ಉಜ್ವಲ, ಸಶಕ್ತ ಭಾರತ ಕಟ್ಟುವ ಕೆಲಸಕ್ಕೆ ಶಿಕ್ಷಕರು ಸಂಕಲ್ಪ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ‘ಗುರು ಸಮಾಜ ಕಟ್ಟುವ ಕೆಲಸ ಗುರುಕುಲ ಪದ್ಧತಿಯ ಶಿಕ್ಷಣದಿಂದಲೇ ಆರಂಭವಾಗಿದೆ. ಗುರು ಇಲ್ಲದ ಸಮಾಜಕ್ಕೆ ದಿಕ್ಕು ದೆಸೆ ಇರುವುದಿಲ್ಲ. ಶಿಕ್ಷಣ ವ್ಯವಸ್ಥೆ ಬಲಗೊಳ್ಳದ ದೇಶ ಉದ್ಧಾರವಾಗದು’ ಎಂದು ಅಭಿಪ್ರಾಯಪಟ್ಟರು.

‘ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ನೀಡುವ ಶಿಕ್ಷಕರು ಅತಿ ಮುಖ್ಯ ಸ್ಥಾನ ಹೊಂದಿದ್ದಾರೆ. ರಾಜ್ಯದ ₹ 29 ಸಾವಿರ ಕೋಟಿ ಬಜೆಟ್‌ನಲ್ಲಿ ₹ 28 ಸಾವಿರ ಕೋಟಿ ವೇತನಕ್ಕೆ ಹೋಗುತ್ತದೆ. ಉಳಿದ ₹ 1 ಸಾವಿರ ಕೋಟಿಯಲ್ಲಿ ಶಾಲೆಗಳ ಅಭಿವೃದ್ಧಿ ಹಾಗೂ ಕಟ್ಟಡಗಳ ನಿರ್ಮಾಣ ಎಲ್ಲವೂ ಆಗಬೇಕಿದ್ದು, ಇದು ಅಸಾಧ್ಯ’ ಎಂದರು.

‘ಅನ್ನ, ಅಕ್ಷರ, ಆರೋಗ್ಯ ಮೂರರಲ್ಲೂ ಸಾಧನೆ ಅಗತ್ಯ. ನಾವಿಂದು ಅನ್ನದಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಕೋವಿಡ್‌ನಿಂದ ನಮ್ಮ ಆರೋಗ್ಯ ವ್ಯವಸ್ಥೆ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಿದೆ. ಶಿಕ್ಷಣಕ್ಕೆ ಹಿನ್ನಡೆಯಾಗಿದ್ದು, ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸರಿದೂಗಿಸುವ ಕೆಲಸವಾಗಲಿ. ಸಿಎಸ್‍ಆರ್ ನಿಧಿಯನ್ನು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸಿದಂತೆ 2 ವರ್ಷಗಳ ಕಾಲ ಜಿಲ್ಲೆಯ ಶಾಲೆಗಳ ಅಭಿವೃದ್ಧಿಗೆ ಬಳಸಬೇಕು’ ಎಂದು ಸಲಹೆ ನೀಡಿದರು.

ಶಾಲೆಗೆ ಕಟ್ಟಡ: ‘ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಗುರುವಿನ ಆಶೀರ್ವಾದ ಇಲ್ಲವಾದರೆ ಯಾವುದೇ ಹಾದಿಯಲ್ಲಿ ಯಶಸ್ಸು ಗಳಿಸುವುದು ಅಸಾಧ್ಯ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಶಿಥಿಲ ಶಾಲಾ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರೆ ನೂತನ ಕಟ್ಟಡಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳುತ್ತೇವೆ. ನಗರದ ಪಿ.ಸಿ ಬಡಾವಣೆ ಶಾಲೆ ಅಭಿವೃದ್ಧಿಗೆ ತಮ್ಮ ಶಾಸಕರ ನಿಧಿಯಿಂದ ₹ 30 ಲಕ್ಷ ಮತ್ತು ಶಾಸಕ ಶ್ರೀನಿವಾಸಗೌಡರ ನಿಧಿಯಿಂದ ₹ 30 ಲಕ್ಷ ನೀಡಿ ಸುಂದರ ಕಟ್ಟಡ ನಿರ್ಮಿಸುತ್ತೇವೆ’ ಎಂದು ವಿಧಾನ ಪರಿಷತ್ ಇಂಚರ ಗೋವಿಂದರಾಜು ಭರವಸೆ ನೀಡಿದರು.

ದೇವಾಲಯದಂತೆ ಕಟ್ಟಿ: ‘ಗ್ರಾಮಗಳಲ್ಲಿ ದೇವಾಲಯ ಕಟ್ಟಲು ಎಲ್ಲರೂ ಕೈಜೋಡಿಸುತ್ತಾರೆ. ಅದೇ ರೀತಿ ಶಾಲೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ಶಾಸಕರ ಅನುದಾನ, ಸಿಎಸ್‍ಆರ್ ನಿಧಿ ಬಳಸಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸೋಣ’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಸಲಹೆ ನೀಡಿದರು.

‘ದೇವಾಲಯ ಮನಸ್ಸಿಗೆ ನೆಮ್ಮದಿ, ಶಾಂತಿ ನೀಡಿದರೆ ಶಾಲೆ, ಗ್ರಂಥಾಲಯ ಬದುಕಿಗೆ ದಾರಿ ತೋರುತ್ತವೆ. ಕೋವಿಡ್‌ನಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ ಮತ್ತು ಶಿಕ್ಷಣದ ಗುಣಮಟ್ಟವೂ ಚೆನ್ನಾಗಿದೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ಪ್ರಶಸ್ತಿ ಗಳಿಸಿದ 18 ಶಿಕ್ಷಕರು, ನಿವೃತ್ತ ಶಿಕ್ಷಕರು, ಅನುದಾನರಹಿತ ಶಾಲೆಗಳ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್, ಡಿಡಿಪಿಐ ಎಸ್.ಜಿ.ನಾಗೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT