ಮಂಗಳವಾರ, ಅಕ್ಟೋಬರ್ 20, 2020
22 °C
ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ರೋಗ

ಶ್ರೀನಿವಾಸಪುರ: ಹಸುವಿಗೆ ಮಾರಕ ‘ಚರ್ಮ ಗಂಟು ರೋಗ’

ಆರ್‌.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ನಾಟಿ ಹಸು ಹಾಗೂ ಎತ್ತುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದ ನಾಟಿ ಜಾನುವಾರುಗಳ ಆರ್ಥಿಕ ಮೌಲ್ಯ ಕುಸಿದಿದೆ. ಇದರಿಂದ ರೈತರು ಗಂಗಾಲಾಗಿದ್ದಾರೆ.

ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಈ ರೋಗ ಹೆಚ್ಚಾಗಿ ಕಂಡುಬಂದಿದೆ. ಗುಡ್ಡಗಾಡು ಪ್ರದೇಶದ ವ್ಯಾಪ್ತಿಗೆ ಬರುವ ರಾಯಲ್ಪಾಡ್‌, ಅಡ್ಡಗಲ್‌, ಲಕ್ಷ್ಮಿಪುರ ಹಾಗೂ ಪುಲಗೂರುಕೋಟೆ ಸಮೀಪ ಈ ರೋಗ ವ್ಯಾಪಕವಾಗಿ ಹರಡಿದೆ. ಗಡಿ ಗ್ರಾಮಗಳಲ್ಲಿ ನಾಟಿ ಹಸು ಹಾಗೂ ಎತ್ತುಗಳನ್ನು ಹೆಚ್ಚಾಗಿ ಸಾಕಲಾಗುತ್ತಿದೆ. ಇಲ್ಲಿನ ರೈತರು ವ್ಯವಸಾಯಕ್ಕೆ ಬೇಕಾದ ಕೊಟ್ಟಿಗೆ ಗೊಬ್ಬರ, ಹಾಲು ಹಾಗೂ ಕೃಷಿ ಕಾರ್ಯ ನಿರ್ವಹಣೆಗಾಗಿ ನಾಟಿ ಗೋವನ್ನು ಸಾಕುತ್ತಾರೆ. ಚರ್ಮ ಗಂಟು ರೋಗ ಈ ಜಾನುವಾರುಗಳ ಜೀವ ಹಿಂಡುತ್ತಿದೆ.

‘ನಾವು ಪಾರಂಪರಿಕವಾಗಿ ನಾಟಿ ದನ ಸಾಕುತ್ತಿದ್ದೇವೆ. ಈಗ ಹಸು ಹಾಗೂ ಎತ್ತುಗಳ ಮೈಮೇಲೆ ದಟ್ಟವಾಗಿ ಗಂಟುಗಳು ಕಾಣಿಸಿಕೊಂಡಿವೆ. ಇಂಥ ಜಾನುವಾರು ಖರೀದಿಗೆ ರೈತರು ಮುಂದಾಗುವುದಿಲ್ಲ. ಬೇರೆಯವರು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ. ಹಾಗಾಗಿ ಅಪಾರ ನಷ್ಟ ಉಂಟಾಗುತ್ತಿದೆ’ ಎಂದು ರೈತ ವೆಂಕಟರವಣ ಅಳಲು ತೋಡಿಕೊಂಡರು.

‘ಕ್ಯಾಪ್ರೈನ್‌ ಎಂಬ ವೈರಸ್‌ನಿಂದ ಚರ್ಮಗಂಟು ರೋಗ ಬರುತ್ತದೆ. ಜ್ವರ, ಮೇವು ತಿನ್ನದಿರುವುದು, ಚರ್ಮದ ಮೇಲೆ ಹಾಗೂ ಎದೆ ಭಾಗದಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು, ಕಾಲು ಊತ ಬಂದು ಕುಂಟುವುದು ಈ ರೋಗದ ಲಕ್ಷಣ. ಈ ರೋಗ ಕಾಣಿಸಿಕೊಂಡ ತಕ್ಷಣ, ಪಶು ಪಾಲಕರು ತಜ್ಞ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು’ ಎಂದು ರಾಯಲ್ಪಾಡ್‌ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ವೆಂಕಟಶಿವಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೊಣಗಳು ಚರ್ಮ ಗಂಟು ರೋಗದ ವೈರಾಣು ವಾಹಕಗಳಾಗಿವೆ. ನಾಟಿ ಹಸು ಹಾಗೂ ಎತ್ತುಗಳನ್ನು ಮೇಯಲು ಗುಡ್ಡಗಾಡಿಗೆ ಕೊಂಡೊಯ್ಯುವುದರಿಂದ, ಅವು ಸುಲಭವಾಗಿ ನೊಣದ ಕಡಿತಕ್ಕೆ ಒಳಗಾಗುತ್ತವೆ. ರೋಗಾಣು ದನಗಳ ದೇಹ ಪ್ರವೇಶಿಸಿ ರೋಗ ಬಾಧೆಯನ್ನು ಉಂಟುಮಾಡುತ್ತದೆ’ ಎಂದು ಹೇಳಿದರು.

ಚರ್ಮ ಗಂಟು ರೋಗಕ್ಕೆ ಆಯುರ್ವೇದ ಚಿಕಿತ್ಸೆಯೂ ಇದೆ. 10 ವೀಳ್ಯದೆಲೆ, 10 ಗ್ರಾಂ ಮೆಣಸು, 10 ಗ್ರಾಂ ಉಪ್ಪು, 50 ಗ್ರಾಂ ಬೆಲ್ಲವನ್ನು ರುಬ್ಬಿ ದಿನಕ್ಕೆ ಎರಡು ಬಾರಿ ತಿನ್ನಿಸಬೇಕು. 20 ಗ್ರಾಂ ಅರಿಶಿಣ, 1 ಹಿಡಿ ಮೆಹಂದಿ ಸೊಪ್ಪು, 1 ಹಿಡಿ ಒಳ್ಳೆ ಬೇವಿನ ಸೊಪ್ಪು, 1 ಹಿಡಿ ತುಳಸಿ ಸೊಪ್ಪು, ಬೆಳ್ಳುಳ್ಳಿಯ 10 ಹೋಳನ್ನು 500 ಮಿ.ಲೀ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೇಯಿಸಿ ತಣ್ಣಗೆ ಮಾಡಿ ಗಾಯಗಳಿಗೆ ದಿನಕ್ಕೆ ಮೂರು ಬಾರಿ ಹಚ್ಚಬೇಕು ಎಂದು ಸಲಹೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು