ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ: ಸರ್ವೆಗೆ ಮಲ್ಲಪ್ಪನಪಾಳ್ಯ ಗ್ರಾಮಸ್ಥರ ಒತ್ತಾಯ

ಬಡವರ ನಿವೇಶನಕ್ಕೆ ಮಂಜೂರಾದ ಜಮೀನು ಒತ್ತುವರಿ
Last Updated 29 ನವೆಂಬರ್ 2021, 16:03 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಮಲ್ಲಪ್ಪನಪಾಳ್ಯ ಗ್ರಾಮದಲ್ಲಿ ಬಡವರ ನಿವೇಶನಕ್ಕೆ ಮಂಜೂರಾಗಿರುವ ಜಮೀನಿನ ಸರ್ವೆ ಮಾಡಿಸಿ ಗಡಿ ಗುರುತಿಸಿ ಕೊಡಬೇಕೆಂದು ಗ್ರಾಮಸ್ಥರು ಇಲ್ಲಿ ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ತಾಲ್ಲೂಕಿನ ಅರಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲ್ಲಪ್ಪನಪಾಳ್ಯ ಗ್ರಾಮಕ್ಕೆ ಸೇರಿರುವ 2 ಎಕರೆ 20 ಗುಂಟೆ ಜಮೀನನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿದಾರರು ಈ ಜಮೀನಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿದ್ದಾರೆ. ಹೀಗಾಗಿ ಜಮೀನಿನ ಸರ್ವೆ ಮಾಡಬೇಕು ಮತ್ತು ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಬಡವರ ನಿವೇಶನಕ್ಕೆ ಮಂಜೂರಾಗಿದ್ದ ಜಮೀನು ಒತ್ತುವರಿಯಾಗಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಗ್ರಾ.ಪಂನಲ್ಲಿ ಜಮೀನಿನ ದಾಖಲೆಪತ್ರಗಳನ್ನು ತಿದ್ದಲಾಗಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥ ನಾಗೇಶ್ ಆರೋಪಿಸಿದರು.

‘ಜಮೀನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗೆ ಬೇರೆಡೆ ಸುಮಾರು 12 ಎಕರೆ ಜಮೀನಿದೆ. ಆದರೂ ಅವರು ಗ್ರಾಮ ಠಾಣಾ ಜಾಗ ಕಬಳಿಸಲು ಮುಂದಾಗಿದ್ದಾರೆ. ಕೋಲಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಆ ಜಮೀನಿನಲ್ಲಿ ಯಾರಿಗಾದರೂ ಹಕ್ಕುಪತ್ರ ನೀಡಲಾಗಿದೆಯೇ ಎಂದು ಮಾಹಿತಿ ಕೇಳಲಾಗಿತ್ತು. ಅರ್ಜಿಗೆ ಹಿಂಬರಹ ನೀಡಿರುವ ಅಧಿಕಾರಿಗಳು ಹಕ್ಕುಪತ್ರ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ’ ಎಂದರು.

ಅನಿರ್ದಿಷ್ಟಾವಧಿ ಧರಣಿ: ‘ಮಲ್ಲಪ್ಪನಪಾಳ್ಯದಲ್ಲಿ ಸಾಕಷ್ಟು ಮಂದಿಗೆ ನಿವೇಶನವಿಲ್ಲ. ಒತ್ತುವರಿ ಜಮೀನು ಬಿಡಿಕೊಟ್ಟರೆ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಅನುಕೂಲವಾಗುತ್ತದೆ. ಬಡವರ ಹಿತದೃಷ್ಟಿಯಿಂದ ಅಧಿಕಾರಿಗಳು ಒತ್ತುವರಿ ತೆರವಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು. ವಾರದೊಳಗೆ ಒತ್ತುವರಿ ತೆರವು ಮಾಡದಿದ್ದರೆ ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಮುನಿಆಂಜಿನಪ್ಪ, ಸಂಪತ್‌ಕುಮಾರ್, ಶಂಕರ್, ಎಂ.ಮಂಜುನಾಥ್, ಮುನಿರತ್ನಮ್ಮ, ಎಚ್.ಎಂ.ಮುನಿವೆಂಕಟಪ್ಪ, ವೆಂಕಟೇಶಪ್ಪ, ರತ್ನಯ್ಯ, ಲಕ್ಷ್ಮಮ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT