ಬುಧವಾರ, ನವೆಂಬರ್ 20, 2019
25 °C

ಅಪೌಷ್ಟಿಕತೆ: ವರ್ಷಕ್ಕೆ 40 ಲಕ್ಷ ಮಕ್ಕಳ ಸಾವು

Published:
Updated:

ಕೋಲಾರ: ‘ಆರೋಗ್ಯಕರ ಜೀವನಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಮ್.ಜಿ.ಪಾಲಿ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಉದ್ಘಾಟಿಸಿ ಮಾತನಾಡಿ, ‘ಪ್ರೋಟಿನ್, ವಿಟಮಿನ್ ಹಾಗೂ ನಾರಿನ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಪ್ರತಿ ವರ್ಷ 40 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಮೃತಪಡುತ್ತಿದ್ದಾರೆ. ಪ್ರತಿ 8 ಸೆಕೆಂಡ್‌ಗೆ ಒಂದು ಮಗು ಮೃತಪಡುತ್ತಿದೆ. ಹೀಗಾಗಿ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಅಂಗನವಾಡಿ ಕಾರ್ಯಕರ್ತಯರು ಪೌಷ್ಟಿಕ ಆಹಾರ ಸೇವನೆಯಿಂದ ಆಗುವ ಪ್ರಯೋಜನ ಕುರಿತು ಮಕ್ಕಳು, ಯುವಕ- ಯುವತಿಯರು, ಬಾಣಂತಿಯರು ಹಾಗೂ ತಾಯಂದಿರಿಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಉತ್ತಮ ಆರೋಗ್ಯಕ್ಕಾಗಿ ಜೀವನ ಕ್ರಮದ ಶೈಲಿ ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಪೌಷ್ಟಿಕ ಸಪ್ತಾಹದ ನಡೆಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಕ್ತಹೀನತೆ, ಅತಿಸಾರ ಭೇದಿ ಸಮಸ್ಯೆ ಹೆಚ್ಚುತ್ತಿದೆ. ಇದರ ಜತೆಗೆ ರೋಟಾ ವೈರಸ್ ಆರೋಗ್ಯ ಸಮಸ್ಯೆ ಹೊಸದಾಗಿ ಕಾಣಿಸಿಕೊಳ್ಳುತ್ತಿದೆ. ಈ ಕಾಯಿಲೆಗಳನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಆಹಾರದಲ್ಲಿ ಪ್ರೋಟಿನ್, ಖನಿಜಾಂಶ ಇರುವಂತೆ ನೋಡಿಕೊಳ್ಳಬೇಕು. ಹಳಸಿದ ಆಹಾರ ಪದಾರ್ಥ ತಿನ್ನಬಾರದು. ತರಕಾರಿ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸಲಾಗಿರುತ್ತದೆ. ಆದ ಕಾರಣ ತರಕಾರಿಗಳನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು ಅಡುಗೆಗೆ ಬಳಸಬೇಕು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಬಿ.ಜಿ.ಪ್ರಕಾಶ್ ತಿಳಿಸಿದರು.

‘ಮಕ್ಕಳು ಅತಿ ಹೆಚ್ಚಾಗಿ ಅಪೌಷ್ಟಿಕತೆ ಸಮಸ್ಯೆಯಿಂದ ಮೃತಪಡುತ್ತಿದ್ದಾರೆ. ಆದ ಕಾರಣ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಕೊಡಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿ.ಎಸ್.ಚಿಕ್ಕಣ ಹೇಳಿದರು.

ತೋಟಗಾರಿಕಾ ಮಹಾವಿದ್ಯಾಲಯದ ಮುಖ್ಯಸ್ಥ ಕೆ.ತುಳಸಿರಾಮ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)