ಸಮಸ್ಯೆ ಅರಿತು ಬರ ಪರಿಸ್ಥಿತಿ ನಿರ್ವಹಿಸಿ: ಯಡಿಯೂರಪ್ಪ ಸಲಹೆ

7
ಸಭೆಯಲ್ಲಿ ಅಧಿಕಾರಿಗಳಿಗೆ ವಿಧಾನಸಭೆ ವಿಪಕ್ಷ ನಾಯಕ ಕಿವಿಮಾತು

ಸಮಸ್ಯೆ ಅರಿತು ಬರ ಪರಿಸ್ಥಿತಿ ನಿರ್ವಹಿಸಿ: ಯಡಿಯೂರಪ್ಪ ಸಲಹೆ

Published:
Updated:
Prajavani

ಕೋಲಾರ: ‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು, ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಮಸ್ಯೆ ಅರಿತು ಪರಿಸ್ಥಿತಿ ನಿರ್ವಹಣೆ ಮಾಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

ಬರ ಪರಿಸ್ಥಿತಿ ಸಂಬಂಧ ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ‘ರಾಜ್ಯದ 152 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ ಬರ ನಿರ್ವಹಣೆಗೆ ಅನುದಾನ ಮೀಸಲಿಟ್ಟಿದೆ. ಅನುದಾನ ಬಳಕೆ ಸಮರ್ಪಕವಾಗಿ ನಡೆಯಲಿ’ ಎಂದು ಸೂಚಿಸಿದರು.

‘ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಹೋಗಲಿ. ಇಲ್ಲಿ ಯಾವುದು ಶಾಶ್ವತವಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬರ ನಿರ್ವಹಣೆಗೆ ಸರ್ಕಾರ ಶೀಘ್ರವೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ನೀರಿನ ಸಮಸ್ಯೆ: ‘ಸರ್ಕಾರ ಜಿಲ್ಲೆಯ 6 ತಾಲ್ಲೂಕುಗಳನ್ನೂ ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಆದ್ಯತೆ ಮೇರೆಗೆ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾಹಿತಿ ನೀಡಿದರು.

‘ಸದ್ಯಕ್ಕೆ ಜಿಲ್ಲೆಯ 10 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಈ ಪೈಕಿ 7 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮತ್ತು 3 ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಬರ ನಿರ್ವಹಣೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ (ಎನ್‌ಡಿಆರ್‌ಎಫ್‌) ₹ 13.29 ಕೋಟಿ ಅನುದಾನ ಲಭ್ಯವಿದೆ. ಕಾರ್ಯಪಡೆಯಿಂದ ಮೊದಲ ಹಂತದಲ್ಲಿ ₹ 1.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ವಿವರಿಸಿದರು.

ಪ್ರಸ್ತಾವ ಸಲ್ಲಿಕೆ: ‘ಜಿಲ್ಲೆಯಲ್ಲಿ ಅನಾವೃಷ್ಟಿಯಿಂದ 39,438 ಹೆಕ್ಟೇರ್ ಬೆಳೆ ನಾಶವಾಗಿದೆ. ಮುಂಗಾರು ಮಳೆ ವೈಫಲ್ಯದಿಂದ ಶೇ 80 ಹಾಗೂ ಹಿಂಗಾರು ಮಳೆ ಕೊರತೆಯಿಂದ ಶೇ 100ರಷ್ಟು ಬೆಳೆ ನಾಶವಾಗಿದೆ. ಬೆಳೆ ನಷ್ಟ ಪರಿಹಾರಕ್ಕೆ ₹ 26.75 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಬರಗಾಲದಲ್ಲೂ 13 ವಾರಕ್ಕೆ ಆಗುವಷ್ಟು ಮೇವು ಲಭ್ಯವಿದೆ. ಇತ್ತೀಚೆಗೆ 72 ಸಾವಿರ ಮೇವಿನ ಕಿಟ್‌ ಪೂರೈಕೆಯಾಗಿದೆ. ಈಗಾಗಲೇ ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ 8 ಕೆರೆಗಳಿಗೆ ತುಂಬಿ ಹರಿದಿದ್ದು, ಆ ಭಾಗದಲ್ಲಿ ಮೇವು ಬೆಳೆಯಲು ರೈತರಿಗೆ ಮೇವು ಕಿಟ್‌ ಸರಬರಾಜು ಮಾಡಲಾಗಿದೆ. ಬೇಡಿಕೆ ಇಟ್ಟಿರುವ ರೈತರಿಗೂ ನೀಡಲಾಗಿದೆ’ ಎಂದು ತಿಳಿಸಿದರು.

ಒತ್ತಡ ಹೇರಬೇಕು: ‘₹ 1,300 ಕೋಟಿ ವೆಚ್ಚ ಮಾಡಿ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸದ್ಯ 2 ಹಂತದಲ್ಲಿ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಕೆರೆಗಳು ಬೆಂಗಳೂರಿನ ಬೆಳ್ಳಂದೂರು ಹಾಗೂ ಚಲ್ಲಘಟ್ಟ ಕೆರೆಯ ಮಾದರಿಯಲ್ಲಿ ಕಲುಷಿತಗೊಳ್ಳುತ್ತವೆ ಎಂಬ ಆತಂಕ ಕಾಡುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

‘ಬೆಳ್ಳಂದೂರು, ಚಲ್ಲಘಟ್ಟ ಕೆರೆಯಲ್ಲಿ ಬುರುಗು ಮತ್ತು ಬೆಂಕಿ ಕಾಣಿಸಿಕೊಂಡಿದೆ. 3 ಹಂತದಲ್ಲಿ ನೀರು ಸಂಸ್ಕರಿಸಿ ಹರಿಸಿದರೆ ಅನಾಹುತ ತಪ್ಪಿಸಬಹುದು. ಇದಕ್ಕೆ ₹ 350 ಕೋಟಿ ಹಣ ವೆಚ್ಚವಾಗುತ್ತದೆ. ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸುವಂತೆ ಮತ್ತು ಮೇಕೆದಾಟು ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಮನವಿ ಮಾಡಿದರು.

ಅಂಕಿ ಅಂಶ.....
* 10 ಗ್ರಾಮಗಳಲ್ಲಿ ನೀರಿನ ಸಮಸ್ಯೆ
* 3 ಗ್ರಾಮಕ್ಕೆ ಟ್ಯಾಂಕರ್ ನೀರು
* ₹ 13.29 ಕೋಟಿ ಅನುದಾನ ಲಭ್ಯವಿದೆ
* 39,438 ಹೆಕ್ಟೇರ್ ಬೆಳೆ ನಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !