ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿಗೆ ಬೆಂಬಲ ಬೆಲೆ ಘೋಷಿಸಲು ಒತ್ತಾಯ

ಜಿಲ್ಲಾಧಿಕಾರಿ ಕಚೇರಿ ಎದುರು ಮಾವು ಬೆಳೆಗಾರರ ಧರಣಿ
Last Updated 6 ಜುಲೈ 2018, 12:47 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಮಾವು ಬೆಳೆಗಾರರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಈ ಬಾರಿ ಜಿಲ್ಲೆಯಲ್ಲಿ ಮಾವು ಬೆಳೆ ಚೆನ್ನಾಗಿ ಬಂದಿದ್ದು, ಇಳುವರಿ ಪ್ರಮಾಣವೂ ಹೆಚ್ಚಿದೆ. ಆದರೆ, ಮಾವು ಬೆಲೆ ಪಾತಾಳಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಕೇಳುವವರಿಲ್ಲ. ಹೊರ ರಾಜ್ಯ ಹಾಗೂ ವಿದೇಶಕ್ಕೆ ಹಣ್ಣು ರಫ್ತಾಗುತ್ತಿಲ್ಲ. ಇದರಿಂದ ದಿಕ್ಕು ತೋಚದಂತಾಗಿದೆ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ಕೋಲಾರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 50,432 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದ್ದು, ವರ್ಷಕ್ಕೆ ಸರಾಸರಿ 5 ಸಾವಿರ ಮೆಟ್ರಿಕ್‌ ಟನ್‌ ಮಾವು ಉತ್ಪಾದನೆಯಾಗುತ್ತಿದೆ. ಈ ಬಾರಿ ಉತ್ತಮ ಫಸಲು ಬಂದಿದ್ದು, ಹೆಚ್ಚಿನ ಬೆಲೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ಬೆಲೆ ಕುಸಿತದಿಂದ ನಿರಾಸೆಯಾಗಿದೆ’ ಎಂದು ಸಂಘದ ಕಾರ್ಯದರ್ಶಿ ಚಿನ್ನಪ್ಪರೆಡ್ಡಿ ಹೇಳಿದರು.

‘ಒಂದು ಎಕರೆ ಮಾವಿನ ತೋಪು ನಿರ್ವಹಣೆಗೆ ವರ್ಷಕ್ಕೆ ₹ 12 ವೆಚ್ಚವಾಗುತ್ತದೆ. ಎಕರೆಗೆ ಸುಮಾರು 4 ಟನ್ ಮಾವಿನ ಹಣ್ಣು ಬೆಳೆಯಬಹುದು. ಬೆಳೆಯ ಖರ್ಚು ಕಳೆದು ಎಕರೆಗೆ ₹ 9,500 ಉಳಿಯುತ್ತದೆ. ಆದರೆ, ಬೆಲೆ ಕುಸಿದಿಂದಾಗಿ ಈ ಬಾರಿ ಬೆಳೆಗೆ ಖರ್ಚು ಮಾಡಿದ ಹಣ ಸಹ ರೈತರಿಗೆ ವಾಪಸ್‌ ಬರುತ್ತಿಲ್ಲ’ ಎಂದು ತಿಳಿಸಿದರು.

ಹರಾಜು ನಡೆಯುವುದಿಲ್ಲ: ‘ಮಾರುಕಟ್ಟೆಯಲ್ಲಿ ಮಾವು ಬೆಲೆ ಟನ್‌ಗೆ ₹ 3 ಸಾವಿರದಿಂದ ₹ 4 ಸಾವಿರ ಇದೆ. ಕಾಯಿ ಕೀಳುವ ಕಾರ್ಮಿಕರ ಕೂಲಿ ಹಣ, ಸಾಗಣೆ ವೆಚ್ಚ, ದಲ್ಲಾಳಿಗಳ ಕಮಿಷನ್‌ ಖರ್ಚು ಕಳೆದು ಹಣವೇ ಉಳಿಯುತ್ತಿಲ್ಲ. ಮಂಡಿಗಳಲ್ಲಿ ಮೂರ್ನಾಲ್ಕು ದಿನದವರೆಗೆ ಹರಾಜು ನಡೆಯುವುದಿಲ್ಲ. ಕೃಷಿ ಕೆಲಸ ಬಿಟ್ಟು ಹಣ್ಣಿನ ಹರಾಜಿಗಾಗಿ ಮಾರುಕಟ್ಟೆಯಲ್ಲಿ ದಿನಗಟ್ಟಲೇ ಕಾಯುವ ಪರಿಸ್ಥಿತಿ ಇದೆ’ ಎಂದು ಸದಸ್ಯರು ಅಲವತ್ತುಕೊಂಡರು.

‘ಮಾವು ಬೆಳೆಯಿಂದ ನಷ್ಟವಾಗುತ್ತಿರುವ ಕಾರಣ ರೈತರು ಹಣ್ಣು ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದಾರೆ. ಹಣ್ಣುಗಳು ಮರದಿಂದ ಉದುರಿ ತೋಪಿನಲ್ಲೇ ಕೊಳೆಯುತ್ತಿವೆ. ಬೇಗನೆ ಕೆಟ್ಟು ಹೋಗುವ ಮಾವು ಹಣ್ಣಿನ ಸಂರಕ್ಷಣೆಗೆ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕಗಳಿಲ್ಲ. ಈ ಸಂಬಂಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸರ್ಕಾರ ಸಂಸ್ಕರಣಾ ಘಟಕದ ಬೇಡಿಕೆಗೆ ಸ್ಪಂದಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ ಕರೆ ಎಚ್ಚರಿಕೆ: ‘ರಾಜ್ಯ ಸರ್ಕಾರ ಪ್ರತಿ ಟನ್‌ ಮಾವಿಗೆ ₹ 8 ಸಾವಿರ ಬೆಂಬಲ ಬೆಲೆ ಘೋಷಿಸಬೇಕು. ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಆಂಧ್ರಪ್ರದೇಶ ಸರ್ಕಾರವು ಜುಲೈ 4ರಿಂದ ಅನ್ವಯವಾಗುವಂತೆ ಪ್ರತಿ ಟನ್‌ ಮಾವಿಗೆ ₹ 2,500 ಬೆಂಬಲ ಘೋಷಿಸಿದೆ. ಜತೆಗೆ ಪ್ರತಿ ಟನ್‌ಗೆ ₹ 5 ಸಾವಿರಕ್ಕಿಂತ ಕಡಿಮೆ ಇಲ್ಲದಂತೆ ಮಾವು ಖರೀದಿಸುವಂತೆ ಕೈಗಾರಿಕೆಗಳಿಗೆ ಸೂಚನೆ ನೀಡಿದೆ. ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಬೇಕು. ಇಲ್ಲದಿದ್ದರೆ ಶ್ರೀನಿವಾಸಪುರ ತಾಲ್ಲೂಕು ಬಂದ್‌ಗೆ ಕರೆ ನೀಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ವಿಶ್ವನಾಥರೆಡ್ಡಿ, ಚೌಡರೆಡ್ಡಿ, ಕೃಷ್ಣರೆಡ್ಡಿ, ಕೆಂಪರೆಡ್ಡಿ, ಶ್ರೀನಿವಾಸ್, ಬಾಬು, ರಾಮಚಂದ್ರಾರೆಡ್ಡಿ, ನೀಲಟೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT