ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರುತ್ತಿದೆ ಮಾವಿನ ಕಾಯಿ ಬೆಲೆ

ವ್ಯಾಪಾರಿಗಳಿಗೆ ಶಾಕ್‌ ನೀಡಿದ ರೈತರು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬೆಲೆ
Last Updated 22 ಜೂನ್ 2020, 12:22 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಕಾಯಿ ಬೆಲೆಯಲ್ಲಿ ಚೇತರಿಕೆ ಕಂಡುಬಂದಿದ್ದು, ದಿನದಿಂದ ದಿನಕ್ಕೆ ಬೆಲೆ ಹೆಚ್ಚಾಗುತ್ತಿದೆ. ಇದರಿಂದ ಮಾವು ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ವಾರ ಮಾರುಕಟ್ಟೆಯಲ್ಲಿ ಮಾವಿನ ಕಾಯಿ ಬೆಲೆ ದಿಢೀರ್‌ ಕುಸಿದು, ಬೆಳೆಗಾರರು ಕಂಗಾಲಾಗಿದ್ದರು. ಆದರೆ ಈಗ ಲಭ್ಯವಿರುವ ಎಲ್ಲ ತಳಿಯ ಮಾವಿನ ಕಾಯಿ ಬೆಲೆ ಏರುಮುಖದಲ್ಲಿ ಸಾಗುತ್ತಿದೆ.

ರಸ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಮಾವಿನ ಬೆಲೆ ಟನ್ನೊಂದಕ್ಕೆ ₹14 ಸಾವಿರದಿಂದ 23 ಸಾವಿರಕ್ಕೆ ಏರಿಕೆಯಾಗಿದೆ. ಬೇನಿಷ ₹30 ಸಾವಿರದಿಂದ ₹60 ಸಾವಿರಕ್ಕೆ ಜಿಗಿದಿದೆ. ಕಾಲಾಪಹಾಡ್‌ ₹35 ಸಾವಿರದಿಂದ 60 ಸಾವಿರಕ್ಕೆ ಹೋಗಿದೆ. ನೀಲಂ ಜಾತಿಯ ಮಾವು ಟನ್ನೊಂದಕ್ಕೆ ₹35 ಸಾವಿರದಂತೆ ಮಾರಾಟವಾಗುತ್ತಿದೆ.

‘ಮಾವು ಬೆಳೆಗಾರರು ಈ ಸಲ ಬೆಲೆ ವಿಷಯದಲ್ಲಿ ಆತಂಕಪಡಬೇಕಾದ ಅಗತ್ಯವಿಲ್ಲ. ಶೇ 20 ರಷ್ಟು ಫಸಲು ಮಾತ್ರ ಬಂದಿದೆ. ಬೆಳೆಗಾರರು ಒಂದೇ ಸಲ ಕಾಯಿ ಕೊಯ್ಲು ಮಾಡದೆ, ಹಂತ ಹಂತವಾಗಿ ಬಲಿತ ಕಾಯಿಗಳನ್ನು ಕೊಯ್ಲುಮಾಡಿ ಮಾರುಕಟ್ಟೆಗೆ ಹಾಕಬೇಕು. ಹಾಗೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆವಕದ ಪ್ರಮಾಣ ಸಾಮಾನ್ಯವಾಗಿ ಬೆಲೆ ಏರಿಕೆಯಾಗುತ್ತದೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಸಲಹೆ ನೀಡಿದರು.‌

ಜಿಲ್ಲೆಯಲ್ಲಿಇದೆ ಮೊದಲ ಬಾರಿಗೆ ತೋಟಗಳಲ್ಲಿಯೇ ಕಾಯಿ ಮಾರಾಟವಾಗುತ್ತಿದೆ. ವ್ಯಾಪಾರಿಗಳು ತಾವೇ ಕ್ಯಾಂಟರ್‌ ಅಥವಾ ಲಾರಿ ಕಳುಹಿಸಿ, ರೈತರು ಕೊಯ್ಲು ಮಾಡಿದ ಮಾವನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಖಾಲಿ ಲಾರಿ ತೂಕ ಮಾಡಿಸಿ, ನಂತರ ಕಾಯಿ ತುಂಬಿದ ಲಾರಿ ತೂಕ ಮಾಡುವುದರಿಂದ ತೂಕದಲ್ಲಿ ಮೋಸವಾಗುವುದಿಲ್ಲ. ಶೇ 10 ರಷ್ಟು ಕಮೀಷನ್‌ ನೀಡಬೇಕಾಗಿಲ್ಲ. ರೈತರಿಗೆ ಟ್ಯ್ಯಾಕ್ಟರ್‌ ಬಾಡಿಗೆ ಉಳಿಯುತ್ತದೆ ಎನ್ನುತ್ತಾರೆ ರೈತರು.

ಇನ್ನೂ ಬೆಲೆ ಏರಿಕೆಯೊಂದಿಗೆ ಮಾವಿನ ಕೊಯ್ಲು ಕಾರ್ಯ ಭರದಿಂದ ನಡೆಯುತ್ತಿದ್ದು, ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಂಭವ ಇದೆ. ನೆರೆಯ ರಾಜ್ಯಗಳಲ್ಲಿ ಈಗಾಗಲೇ ಮಾವಿನ ಸುಗ್ಗಿ ಮುಗಿದಿರುವುದರಿಂದ ಇಲ್ಲಿನ ಉತ್ಪನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

---

ಬೆಳೆಗಾರರ ಒಗ್ಗಟ್ಟಿನ ಫಲ

‘ಇಲ್ಲಿನ ಮಾರುಕಟ್ಟೆಯಲ್ಲಿ ಕಳೆದ ವಾರ ವ್ಯಾಪಾರಿಗಳು ಅನಿರೀಕ್ಷಿತವಾಗಿ ಮಾವಿನ ಕಾಯಿ ಬೆಲೆಯನ್ನು ಇಳಿಸುವುದರ ಮೂಲಕ ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದರು. ಆದರೆ ರೈತರು ಇದೇ ಮೊದಲ ಬಾರಿಗೆ ಒಗ್ಗಟ್ಟಾಗಿ ಕಾಯಿ ಕೊಯ್ಲು ಮಾಡುವುದನ್ನು ನಿಲ್ಲಿಸಿ, ವ್ಯಾಪಾರಿಗಳಿಗೆ ಶಾಕ್‌ ನೀಡಿದರು. ಮಂಡಿಗಳು ಕಾಯಿ ಇಲ್ಲದೆ ಬಣಗುಟ್ಟಿದವು. ಇದರಿಂದ ಎಚ್ಚೆತ್ತುಕೊಂಡ ವ್ಯಾಪಾರಿಗಳು ಹಂತ ಹಂತವಾಗಿ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಮಾವು ಬೆಳೆಗಾರರ ಒಗ್ಗಟ್ಟಿನ ಫಲವಾಗಿದೆ’ ಎಂದು ನೀಲಟೂರು ಚಿನ್ನಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

---

ಸಂತೋಷ ತಂದ ಬೆಲೆ ಏರಿಕೆ

‘ಕೊರೊನಾ ಆತಂಕದ ನಡುವೆಯೂ ಮಾವಿನ ಕಾಯಿ ಒಳ್ಳೆ ಬೆಲೆಗೆ ಮಾರಾಟವಾಗುತ್ತಿರುವುದು ಸಂತೋಷ ತಂದಿದೆ. ಈ ಮೊದಲು ಹೇಗೋ ಏನೋ ಎಂಬ ಭಯ ಕಾಡುತ್ತಿತ್ತು. ಈಗ ಆತಂಕ ನಿವಾರಣೆಯಾಗಿದೆ’ ಎಂಬುದು ಮೀಸಗಾನಹಳ್ಳಿ ಗ್ರಾಮದ ಮಾವು ಬೆಳೆಗಾರ ವೆಂಕಟರೆಡ್ಡಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT