ಜನಸ್ನೇಹಿ ಕೆಲಸಕ್ಕೆ ಸಹಕಾರ ಅಗತ್ಯ

7
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಹೇಳಿಕೆ

ಜನಸ್ನೇಹಿ ಕೆಲಸಕ್ಕೆ ಸಹಕಾರ ಅಗತ್ಯ

Published:
Updated:
Deccan Herald

ಕೋಲಾರ: ‘ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲು ಸಾಧ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಅಭಿಪ್ರಾಯಪಟ್ಟರು.

ಇಲ್ಲಿ ಬುಧವಾರ ನಡೆದ ನಗರ ಠಾಣೆ ಇನ್‌ಸ್ಪೆಕ್ಟರ್‌ ಲೋಕೇಶ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ‘ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಸಹಜ. ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಜನಪರವಾಗಿ ಕೆಲಸ ಮಾಡಿದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ’ ಎಂದರು.

‘ಅಧಿಕಾರದಲ್ಲಿ ಇದ್ದಷ್ಟು ದಿನ ಎಷ್ಟು ಹಣ, ಆಸ್ತಿ, ಬಂಗಾರ ಸಂಪಾದಿಸಿದೆ ಎಂಬುದು ಮುಖ್ಯವಲ್ಲ. ಸಾವಿನ ಬಳಿಕ ಅಂತಿಮ ಶವ ಯಾತ್ರೆಯಲ್ಲಿ ಸೇರುವ ಜನರ ಸಂಖ್ಯೆ ಮನುಷ್ಯನ ಒಳ್ಳೆತನ ಗುರುತಿಸುತ್ತದೆ. ಸರ್ಕಾರಿ ಕೆಲಸ ಜನಸೇವೆಗೆ ಸಿಕ್ಕಿದ ಅವಕಾಶವೆಂದು ತಿಳಿದು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

`ಕೋಲಾರ ಜಿಲ್ಲೆಯು ಅತಿ ಸೂಕ್ಷ್ಮ ಪ್ರದೇಶ ಎಂಬುದು ಗೊತ್ತಿರುವ ವಿಚಾರ. ಇಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಹೋರಾಟ ನಡೆದಾಗ ಮುನ್ನೆಚ್ಚರಿಕೆ ವಹಿಸುವುದು ಪೊಲೀಸರು ಮಾತ್ರ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಘ ಸಂಸ್ಥೆಗಳ ಸಹಕಾರ ಅಗತ್ಯ’ ಎಂದು ಹೇಳಿದರು.

‘ಇತರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್‌ ಇಲಾಖೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸಿಬ್ಬಂದಿಯ ವರ್ಗಾವಣೆಯಾಗುತ್ತದೆ. ಇನ್‌ಸ್ಪೆಕ್ಟರ್‌ ಲೋಕೇಶ್‌ ಶುದ್ಧ ಮನಸ್ಸಿನಿಂದ ಕೆಲಸ ಮಾಡಿದ್ದಾರೆ. ಅವರ ಜಾಗಕ್ಕೆ ಬಂದಿರುವ ಫಾರೂಕ್‌ ಪಾಷಾ ಸಹ ಉತ್ತಮ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ಜಿಲ್ಲೆಯಲ್ಲಿ ಉತ್ತಮ ಪೊಲೀಸ್ ತಂಡವಿದೆ. ಸಾರ್ವಜನಿಕರ ರಕ್ಷಣೆ ಇಲಾಖೆಯ ಆದ್ಯ ಕರ್ತವ್ಯ’ ಎಂದು ತಿಳಿಸಿದರು.

ಹೋರಾಟಕ್ಕೆ ಬರವಿಲ್ಲ: ‘ಜಿಲ್ಲೆಯಲ್ಲಿ ನೀರಿಗೆ ಬರವಿದ್ದರೂ ಜನಪರ ಹೋರಾಟಗಳಿಗೆ ಬರವಿಲ್ಲ. ಜಿಲ್ಲೆಯು ಹೋರಾಟಗಳ ತವರು ಜಿಲ್ಲೆಯಾದರೂ ಜನರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದು ಸಂತಸದ ವಿಚಾರ' ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ಜಿಲ್ಲೆಯ ಬಗ್ಗೆ ತಿಳಿಯದೆ ಬಂದ ಅಧಿಕಾರಿಯ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಜನ ಸ್ಪಂದಿಸುತ್ತಾರೆ. ಸಾರ್ವಜನಿಕರು ಇದೇ ರೀತಿ ಮುಂದೆಯೂ ಇಲಾಖೆ ಜತೆ ಕೈ ಜೋಡಿಸಿ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಬೇಕು’ ಎಂದು ಕೋರಿದರು.

ನಗರ ಠಾಣೆಯಿಂದ ಬೆಂಗಳೂರಿನ ಕೆ.ಆರ್.ಪುರ ಸಂಚಾರ ಠಾಣೆಗೆ ವರ್ಗಾವಣೆಗೊಂಡ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ನೂತನ ಇನ್‌ಸ್ಪೆಕ್ಟರ್‌ ಫಾರೂಕ್‌ ಪಾಷಾ, ಡಿವೈಎಸ್ಪಿ ಬಿ.ಕೆ.ಉಮೇಶ್, ಎಸ್‍ಐಗಳಾದ ಶ್ರೀನಿವಾಸ್, ಅಣ್ಣಯ್ಯ, ಕೆ.ವಿ.ಶ್ರೀಧರ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !