ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಷ್ಠಿತರಿಗೂ ಠೇವಣಿ ನಷ್ಟ!

ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರು ಎಪ್ಪತ್ತೊಂದು ಮಂದಿ
Last Updated 17 ಮೇ 2018, 8:17 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಒಂಭತ್ತು ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 91 ಮಂದಿ ಪೈಕಿ 71 ಮಂದಿ ಠೇವಣಿ ಉಳಿಸಿಕೊಳ್ಳಲು ಆಗಿಲ್ಲ.

ಪ್ರತಿ ಕ್ಷೇತ್ರದಲ್ಲೂ ಚಲಾವಣೆಯಾಗಿರುವ ಪುರಸ್ಕೃತ ಮತಗಳ ಆರನೇ ಒಂದು ಭಾಗಕ್ಕಿಂತ ಒಂದು ಹೆಚ್ಚು ಮತವನ್ನು ಗಳಿಸಿದರೆ ಮಾತ್ರ ಠೇವಣಿಯನ್ನು ವಾಪಸ್‌ ಪಡೆಯಬಹುದು. ಆದರೆ ಜಿಲ್ಲೆಯಲ್ಲಿ ಇಪ್ಪತ್ತು ಮಂದಿ ಮಾತ್ರ ಠೇವಣಿ ವಾಪಸ್‌ ಪಡೆಯಲು ಅರ್ಹ ಮತಗಳನ್ನು ಪಡೆದಿದ್ದಾರೆ.

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಠೇವಣಿ ಉಳಿಸಿಕೊಳ್ಳಲು ಕನಿಷ್ಠ 20 ಸಾವಿರ ಮತಗಳನ್ನು ಪಡೆಯಬೇಕಾಗಿತ್ತು. ಆದರೆ ಬಹುತೇಕರು ಮೂರಂಕಿ ಮತಗಳನ್ನಷ್ಟೇ ಗಳಿಸಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ನಾಲ್ಕಂಕಿ ಮತ ಪಡೆದಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸದಲ್ಲಿದ್ದ ಮಹ್ಮದ್‌ ಇಕ್ಬಾಲ್‌ ಹೊತುರ್‌ ಠೇವಣಿ ಕಳೆದುಕೊಂಡ ಪ್ರತಿಷ್ಠಿತರು. ಅವರು ನಾಲ್ಕಂಕಿ ಮತಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ. ಅದೇ ಪಕ್ಷದ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಡಿ.ರಮೇಶ್‌, ಸಿರುಗುಪ್ಪದ ಹೊಸಮನೆ ಬಿ.ಮಾರುತಿ, ಸಂಡೂರಿನ ಬಿ.ವಸಂತಕುಮಾರ್‌, ಹಗರಿಬೊಮ್ಮನಹಳ್ಳಿಯ ಕೃಷ್ಣಾನಾಯ್ಕ, ಕಂಪ್ಲಿಯ ಕೆ.ರಾಘವೇಂದ್ರ, ಹಡಗಲಿಯ ಕಾಯಣ್ಣನವರ ಪುತ್ರಪ್ಪ ಮತ್ತು ವಿಜಯನಗರ ಕ್ಷೇತ್ರದ ದೀಪಕ್‌ಸಿಂಗ್‌ ಕೂಡ ಠೇವಣಿ ಕಳೆದುಕೊಂಡಿದ್ದಾರೆ.

ಕೂಡ್ಲಿಗಿಯ ಎನ್‌.ಟಿ.ಬೊಮ್ಮಣ್ಣ ಠೇವಣಿ ಉಳಿಸಿಕೊಂಡಿದ್ದರೆ, ಅಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಘು ಗುಜ್ಜಲ್‌ ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟು, ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ಲೋಕೇಶ್‌ ವಿ ನಾಯ್ಕ ಠೇವಣಿ ಉಳಿಸಿಕೊಂಡು ಬೆಂಗಳೂರಿಗೆ ವಾಪಸಾಗಿದ್ದಾರೆ!

ಸಿರುಗುಪ್ಪದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಬಿ.ಎಂ.ನಾಗರಾಜ ಅವರ ಸಹೋದರ ಬಿ.ಎಂ.ವೆಂಕಟೇಶನಾಯಕ ಅವರು ಬಂಡಾಯದಿಂದ ಠೇವಣಿ ಉಳಿಸಿಕೊಳ್ಳುಷ್ಟು ಮತ ಗಳಿಸಿಲ್ಲ.

ಸಂಡೂರಿನಲ್ಲಿ ಎಸ್‌ಯುಸಿಐಸಿ ಅಭ್ಯರ್ಥಿ ರಾಮಾಂಜಿನಪ್ಪ ಅವರ ಭರದ ಪ್ರಚಾರದ ನಡುವೆಯೂ ಠೇವಣಿ ಉಳಿಯುವಷ್ಟು ಮತಗಳನ್ನು ಪಡೆಯಲು ಆಗಿಲ್ಲ. ಅವರು 1243 ಮತಗಳನ್ನಷ್ಟೇ ಗಳಿಸಿದ್ದಾರೆ. ಹಗರಿಬೊಮ್ಮನಹಳ್ಳಿಯ ಸಿಪಿಐಎಂ ಅಭ್ಯರ್ಥಿ ಬಿ.ಮಾಳಮ್ಮ, ಕಂಪ್ಲಿ ಅಭ್ಯರ್ಥಿ ವಿ.ಶಿವಶಂಕರಪ್ಪ ಅವರೂ ಕಡಿಮೆ ಮತಗಳಿಸಿದ್ದಾರೆ.

ಪ್ರಭಾವ ಬೀರಿದ ಮೋದಿ, ಬೀರದ ‘ಯೋಗಿ’

ಬಳ್ಳಾರಿ: ಹೊಸಪೇಟೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರಚಾರ ಮತದಾರರ ಮೇಲೆ ಪ್ರಭಾವ ಬೀರಿಲ್ಲ. ಪ್ರಬಲ ಪೈಪೋಟಿ ನೀಡಿಯೂ ವಿಜಯನಗರದ ಬಿಜೆಪಿ ಅಭ್ಯರ್ಥಿ ಎಚ್‌.ಆರ್‌.ಗವಿಯಪ್ಪ ಸೋಲುಂಡಿದ್ದಾರೆ. ಆದರೆ ಬಳ್ಳಾರಿ ನಗರದಲ್ಲಿ ಪ್ರಧಾನಿ ಮೋದಿ ಮಾಡಿದ ಪ್ರಚಾರ ಭಾಷಣವು ಅಲ್ಲಿ ಬಿಜೆಪಿಗೆ ಗೆಲುವನ್ನು ತಂದುಕೊಟ್ಟಿದೆ. ಹೊಸಪೇಟೆಗೆ ಹಿಂದಿನ ವರ್ಷ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಭೇಟಿ ನೀಡಿದ್ದರು. ಆಗ ಕಾಂಗ್ರೆಸ್‌ ಸೇರಿದ್ದ ಆನಂದ್‌ಸಿಂಗ್‌ ವಿಜಯನಗರದಿಂದ ಮತ್ತು ಬಳ್ಳಾರಿ ಗ್ರಾಮೀಣದಿಂದ ಬಿ.ನಾಗೇಂದ್ರ ಗೆದ್ದಿದ್ದಾರೆ.
ಸಿರುಗುಪ್ಪ ಮತ್ತು ಸಂಡೂರಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರೋಡ್‌ ಷೋ ನಡೆಸಿದ್ದರೂ, ಸಿರುಗುಪ್ಪದಲ್ಲಿ ಮಾತ್ರ ಬಿಜೆಪಿಗೆ ಗೆಲುವು ದಕ್ಕಿದೆ.

**
ಅಗತ್ಯವಿರುವಷ್ಟು ಮತಗಳನ್ನು ಗಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಮಾತ್ರ ಠೇವಣಿ ವಾಪಸ್‌ ನೀಡಲಾಗುವುದು
ಡಾ.ವಿ.ರಾಮಪ್ರಸಾದ್‌ ಮನೋಹರ್, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT