ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಸ್ವರ ಮೂಲಕ ಸ್ವರ ದಾಸೋಹ ಮಾಡುತ್ತಿರುವ ಶ್ರೀನಿವಾಸಪುರದ ಬಹುಮುಖ ಪ್ರತಿಭೆ ಮಾಯಾ

Last Updated 24 ಫೆಬ್ರುವರಿ 2023, 3:58 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದಲ್ಲಿ ಸಪ್ತಸ್ವರ ಸಂಗೀತ ವಿದ್ಯಾಲಯ ಸ್ಥಾಪಿಸಿ ಸ್ವರ ದಾಸೋಹ ಮಾಡುತ್ತಿರುವ ಮಾಯಾ ಬಾಲಚಂದ್ರ ಗಡಿನಾಡಿನ ಪ್ರತಿಭಾವಂತ ಸಂಗೀತ ಕಲಾವಿದೆ.

ವಿದುಷಿ ಅಪರ್ಣಾ ವೆನ್ನಲಕಂಟಿ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತ ಅವರು, ಸಂಗೀತ ಪಾಠ ಹಾಗೂ ಸಂಗೀತ ಕಛೇರಿ ನಡೆಸಿಕೊಡುವ ಮೂಲಕ ಯುವ ಸಮುದಾಯದಲ್ಲಿ ಸಂಗೀತಾಸಕ್ತಿ ಮೂಡಿಸುತ್ತಿದ್ದಾರೆ. ಅವರ ಶಿಷ್ಯರಲ್ಲಿ ಕೆಲವರು ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ.

ಮಾಯಾ ಬಾಲಚಂದ್ರ ಅವರ ಆಸಕ್ತಿ ಸಂಗೀತ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾಗಿ, ಮನೆ ಮನೆಗೆ ದಾಸ ಸಾಹಿತ್ಯ ತಲುಪಿಸುವ ಕಾಯಕದಲ್ಲಿ ತೊಡಗಿದ್ದಾರೆ. ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಶರಣ ಸಾಹಿತ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಗಮಕಿಯೂ ಆಗಿರುವ ಅವರು, ಕನ್ನಡ ಸಾಹಿತ್ಯದ ವಿಶಿಷ್ಟ ಕೃತಿಗಳಲ್ಲಿ ಒಂದಾದ ಕುಮಾರವ್ಯಾಸ ಭಾರತ ಅಧ್ಯಯನ ಮಾಡಿ ವ್ಯಾಖ್ಯಾನಿಸುತ್ತಿದ್ದಾರೆ. ರಾಜ್ಯದಾದ್ಯಂತ ಗಮಕ ಕಲೆ ಪಸರಿಸುತ್ತಿದ್ದಾರೆ. ಪಟ್ಟಣದಲ್ಲಿ ಮಹಿಳಾ ಮಂಡಳಿ ಸ್ಥಾಪಿಸಿ, ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡುತ್ತಿದ್ದಾರೆ.

ಸ್ವತಃ ಯೋಗ ಶಿಕ್ಷಕಿಯಾಗಿರುವ ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಪೂರಕವಾಗಿ ಮಹಿಳೆಯರಿಗೆ ಯೋಗ ಶಿಕ್ಷಣ ನೀಡುತ್ತಿದ್ದಾರೆ. ಪುರಸಭೆ ಸ್ವಚ್ಛ ಭಾರತ ಅಭಿಯಾನದ ರಾಯಭಾರಿಯಾಗಿರುವ ಅವರು ಕಸ ವಿಂಗಡಣೆ, ನಿರ್ವಹಣೆ, ಸಾವಯವ ಗೊಬ್ಬರ ತಯಾರಿಕೆ ಮುಂತಾದ ವಿಷಯಗಳಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯಲು ಶ್ರಮಿಸುತ್ತಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ, ಕಾನೂನು ಅರಿವು ಹಾಗೂ ಜಾಗೃತಿ ಸಮಿತಿ ಸಂಪನ್ಮೂಲ ವ್ಯಕ್ತಿಯಾಗಿ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ ಹಲವು ಕಾರ್ಯಕ್ರಮ ರೂಪಿಸಿ ಜಾರಿಗೆ ತಂದಿದ್ದಾರೆ. ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೂ ಶ್ರಮಿಸುತ್ತಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಹಾಗೂ ಸಾಧನೆ ಗುರುತಿಸಿ ಬೇರೆ ಬೇರೆ ಸಂಘ, ಸಂಸ್ಥೆಗಳು ಪುರಸ್ಕರಿಸಿವೆ. ರಾಜ್ಯಮಟ್ಟದ ಪುರಂದರ ವಿಠಲ ಶ್ರೀ ಪ್ರಶಸ್ತಿ, ಕನ್ನಡಿಗ ಗಂಗ ಅರಸು ಪ್ರಶಸ್ತಿ, ಗೋದಾದೇವಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ನೀಡಿರುವ ಸನ್ಮಾನಗಳಿಗೆ ಲೆಕ್ಕವಿಲ್ಲ.

ಇಷ್ಟು ಮಾತ್ರವಲ್ಲದೆ ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಅವರ ಬರಹಗಳು ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಯಾವಾಗಲೂ ಮಿಂಚಿನಂತೆ ಕಾರ್ಯ ನಿರ್ವಹಿಸುವ ಮಾಯಾ ಬಾಲಚಂದ್ರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

‘ಅದರಲ್ಲೂ ಗ್ರಾಮೀಣ ಮಹಿಳೆಯರು ಕೀಳರಿಮೆ ಬಿಟ್ಟು ಸಾಹಿತ್ಯ, ಸಂಗೀತ ಹಾಗೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಅವಕಾಶಗಳಿಗೆ ಕಾಯದೆ ಸೃಷ್ಟಿಸಿಕೊಳ್ಳಬೇಕು’ ಎಂಬುದು ಅವರ ಮನದಾಳದ
ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT