ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಟ್ರಾನ್‌ ಆಡಳಿತ ಮಂಡಳಿ ಜತೆ ಸಭೆ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌

ಕಂಪನಿಯಲ್ಲಿ ಪರಿಶೀಲನೆ ಬಳಿಕ ಹೇಳಿಕೆ
Last Updated 27 ಡಿಸೆಂಬರ್ 2020, 14:08 IST
ಅಕ್ಷರ ಗಾತ್ರ

ಕೋಲಾರ: ‘ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ದಾಂದಲೆ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ಸಂಬಂಧ ವಿಕಾಸಸೌಧದಲ್ಲಿ ಮುಂದಿನ ವಾರ ಕಂಪನಿ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆ ಸಭೆ ನಡೆಸುತ್ತೇವೆ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಆ್ಯಪಲ್‌ ಐ–ಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ ಕಂಪನಿ ಘಟಕದಲ್ಲಿ ಭಾನುವಾರ ಪರಿಶೀಲನೆ ನಡೆಸಿ ಮಾತನಾಡಿ, ‘ದಾಂದಲೆಗೆ ಕಾರಣವೇನು? ಕಂಪನಿಯಲ್ಲಿ ಆಗಿರುವ ಲೋಪಗಳೇನು ಎಂಬುದನ್ನು ತಿಳಿಯುವ ಉದ್ದೇಶಕ್ಕೆ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ’ ಎಂದರು.

‘ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವಿದೆ. ರಾಜ್ಯಕ್ಕೆ ಹೆಚ್ಚಿನ ಕಂಪನಿಗಳನ್ನು ಆಕರ್ಷಿಸುವ ಉದ್ದೇಶಕ್ಕಾಗಿ ಕೈಗಾರಿಕಾ ನೀತಿ ಸರಳಗೊಳಿಸಿದ್ದೇವೆ. ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

‘ನಾವು ಕಾರ್ಮಿಕರ ವಿರೋಧಿಯಲ್ಲ. ಕಾರ್ಮಿಕರಿಗೆ ನ್ಯಾಯ ಕೊಡಿಸುವುದು ಸರ್ಕಾರದ ಉದ್ದೇಶ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ. ವಿಸ್ಟ್ರಾನ್‌ ಕಂಪನಿ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆ ಚರ್ಚಿಸುವಂತೆ ಜಿಲ್ಲೆಯ ಸಂಸದರು ಮತ್ತು ಶಾಸಕರು ಒತ್ತಾಯಿಸಿದ್ದರು’ ಎಂದು ಮಾಹಿತಿ ನೀಡಿದರು.

ಆರೋಪ ಸರಿಯಲ್ಲ: ‘ಕಾರ್ಮಿಕರು ತಮ್ಮ ಸಮಸ್ಯೆ ತಿಳಿಸದೆ ಇರುವುದು ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಾರ್ಮಿಕರು ಸಂಘ ಸಹ ರಚಿಸಿಕೊಂಡಿಲ್ಲ. ಘಟನೆಗೆ ಕಾರ್ಮಿಕರು ಅಥವಾ ಕಂಪನಿ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕೈಗಾರಿಕೆಗಳು ಅಥವಾ ಖಾಸಗಿ ಕಂಪನಿಗಳು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು. ಆದರೆ, ಕನಿಷ್ಠ ವೇತನ ನೀಡದೆ ಕೆಲಸ ಮಾಡಿಸುವುದು ಸರಿಯಲ್ಲ. ಸಕಾಲಕ್ಕೆ ವೇತನ ನೀಡದಿರುವುದನ್ನು ಒಪ್ಪುವುದಿಲ್ಲ’ ಎಂದು ಹೇಳಿದರು.

‘ತಪ್ಪು ನಡೆದಿದೆ ಎಂದು ವಿಸ್ಟ್ರಾನ್‌ ಕಂಪನಿ ಆಡಳಿತ ಮಂಡಳಿ ಹೇಳಿದೆ. ಆದರೆ, ಕಂಪನಿ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಂಪನಿ ಪುನರಾರಂಭಕ್ಕೆ ಕ್ರಮ ಕೈಗೊಂಡಿದ್ದು, ಕಂಪನಿಯಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ತಿಳಿಸಲಾಗಿದೆ. ಪ್ರತಿ ಕಂಪನಿಯಲ್ಲೂ ಕಾರ್ಮಿಕ ಕಾನೂನುಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT