ಬಿ.ವಿ.ಕಾರಂತರ ನೆನಪಿನಲ್ಲಿ ರಂಗಗೀತೆ ಸ್ವರ್ಧೆ

7

ಬಿ.ವಿ.ಕಾರಂತರ ನೆನಪಿನಲ್ಲಿ ರಂಗಗೀತೆ ಸ್ವರ್ಧೆ

Published:
Updated:

ಕೋಲಾರ: ‘ಬಿ.ವಿ.ಕಾರಂತರ ನೆನಪಿನಲ್ಲಿ ನಿರ್ದೇಶಕ ಟಿ.ಎಸ್‌.ನಾಗಾಭರಣರ ಬೆನಕ ಸಂಸ್ಥೆಯು ಇಡೀ ವರ್ಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ನಗರದ ಜೂನಿಯರ್ ಕಾಲೇಜಿನಲ್ಲಿ ಆ.18ರಂದು ರಂಗಗೀತೆ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಸಾರಂಗರಂಗ ಸಾಂಸ್ಕೃತಿಕ ತಂಡದ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಿಗ್ಗೆ 11ಕ್ಕೆ ಸ್ಪರ್ಧೆ ಆರಂಭವಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಆ.16ರೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ತಂಡದಲ್ಲಿ ಕನಿಷ್ಠ 5 ಮಂದಿ ಇರಬೇಕು. ಸ್ಪರ್ಧೆಗೆ ನೋಂದಣಿ ಉಚಿತ’ ಎಂದು ಹೇಳಿದರು.

‘ಕಲಾವಿದರಿಗೆ ಬಿ.ವಿ.ಕಾರಂತರ ಕನ್ನಡ ಭಾಷೆಯ 20 ಮತ್ತು ಹಿಂದಿ ಭಾಷೆಯ 10 ರಂಗಗೀತೆಗಳನ್ನು ವಾಟ್ಸ್‌ ಆ್ಯಪ್‌ ಹಾಗೂ ಇ–ಮೇಲ್ ಮೂಲಕ ಕಳುಹಿಸಿ, ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಐದು ತಂಡಗಳನ್ನು ಬೆಂಗಳೂರಿನಲ್ಲಿ ಸೆ.23ರಂದು ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ಅಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ತಂಡಗಳನ್ನು ಆಯ್ಕೆ ಮಾಡಿ, ಪ್ರಶಸ್ತಿ ನೀಡಲಾಗುವುದು’ ಎಂದು ವಿವರಿಸಿದರು.

‘ಬಿ.ವಿ.ಕಾರಂತರು ನನ್ನ ಗುರುಗಳು. ಅವರೊಂದಿಗೆ ಸುಮಾರು 10 ವರ್ಷಗಳ ಕಾಲ ಒಡನಾಟ ಹೊಂದಿದ್ದೆ. ಅವರಿಗೆ ಕೃತಜ್ಞತೆ ಸಲ್ಲಿಸುವ ದಿಸೆಯಲ್ಲಿ ಜಿಲ್ಲೆಯ ಪರವಾಗಿ ಸ್ಪರ್ಧೆಯ ಜವಾಬ್ದಾರಿ ಹೊತ್ತು ಸಾರಂಗರಂಗ ಮತ್ತು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಈ ಕಾರ್ಯಕ್ರಮ ನಿರ್ವಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜನರಿಗೆ ರಂಗಗೀತೆಗಳನ್ನು ಕಲಿಸುವ, ತಲುಪಿಸುವ ಮತ್ತು ಮುಂದಿನ ಪರಂಪರೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ಸ್ಪರ್ಧೆ ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ವಯೋಮಿತಿಯಿಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ಯುವಕ ಯುವತಿಯರನ್ನು ನಾಟಕ, ಸಂಗೀತ, ರಂಗ ಚಟುವಟಿಕೆಗಳತ್ತ ಸೆಳೆಯುವ ಉದ್ದೇಶದಿಂದ ಕಾಲೇಜಿನಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ’ ಎಂದರು.

ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !