ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಾಲದ ಸಬ್ಸಿಡಿ ಕಾಲ ಮಿಂಚಿಲ್ಲ

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

2022ರ ವೇಳೆಗೆ ಪ್ರತಿಯೊಬ್ಬರೂ ಸ್ವಂತ ಸೂರು ಹೊಂದುವಂತಾಗಬೇಕು ಎನ್ನುವ ಆಶಯದೊಂದಿಗೆ ಆರಂಭವಾದದ್ದು ‘ಪ್ರಧಾನ ಮಂತ್ರಿ ಆವಾಜ್ ಯೋಜನೆ’. ಬಡವರು, ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಎಲ್ಲರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ‘ಇದು ನಮಗಲ್ಲ’ ಎನ್ನುವ ಗ್ರಹಿಕೆ ಅನೇಕರು ಈ ಯೋಜನೆಯಿಂದ ದೂರ ನಿಲ್ಲುವಂತೆ ಮಾಡಿದೆ. ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎನ್ನುವ ಅಸಮಾಧಾನ ತಜ್ಞರದ್ದು.

ಕಡು ಬಡವರು, ಕೊಳೆಗೇರಿ ನಿವಾಸಿಗಳು, ಗ್ರಾಮೀಣ ಜನರು, ಮಧ್ಯಮ ವರ್ಗ ಹಾಗೂ ದುಡಿಯುವ ವರ್ಗಕ್ಕೆ ಯೋಜನೆಯಲ್ಲಿ ಪ್ರತ್ಯೇಕ ಅನುಕೂಲಗಳಿವೆ. ಎಲ್ಲ ವರ್ಗದವರು ಗೃಹಸಾಲದ ಬಡ್ಡಿ ಮೇಲೆ ಸಬ್ಸಿಡಿ ಪಡೆಯಬಹುದು. ಈಗಾಗಲೆ ಗೃಹಸಾಲ ಪಡೆದು ಮನೆ ಮಾಡಿಕೊಂಡ ಗ್ರಾಹಕರೂ ಈ ಯೋಜನೆಯಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು.

ನಗರ ಪ್ರದೇಶಗಳಲ್ಲಿ 2022ರ ವೇಳೆಗೆ ಒಟ್ಟಾರೆ 20 ದಶಲಕ್ಷ ವಸತಿ ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶ. ಆದರೆ ಈ ಯೋಜನೆಯನ್ನು ಬಳಸಿಕೊಂಡ ಜನ ಬಹಳ ಕಡಿಮೆ. ಕಾರಣ ಬ್ಯಾಂಕುಗಳ ನಿರ್ಲಕ್ಷ್ಯ ಹಾಗೂ ಬಿಲ್ಡರ್‌ಗಳ ಇಚ್ಛಾಶಕ್ತಿಯ ಕೊರತೆ. ಬ್ಯಾಂಕಿನಲ್ಲಿ ಗ್ರಾಹಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕೇಳಿದರೆ ಈ ಯೋಜನೆಗೆ ನೀವು ಒಳಪಡುವುದಿಲ್ಲ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಹೀಗಾಗಿ ಮನೆ ಕೊಳ್ಳುವಾಗ ಎಲ್ಲರಿಗೂ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ.

‘ಈ ಯೋಜನೆಯ ಲಾಭವನ್ನು ಗ್ರಾಹಕರಿಗೆ ಒದಗಿಸಿಕೊಡುವುದರಿಂದ ಬ್ಯಾಂಕುಗಳಿಗೆ ಯಾವುದೇ ಪ್ರಯೋಜನಗಳಿಲ್ಲ. ಅಲ್ಲದೆ, ಬಿಲ್ಡರ್‌ಗಳಿಗೂ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ಚರ್ಚೆಯಾಗಿರುವುದರಿಂದ ಈ ಯೋಜನೆಗೆ ಇನ್ನಷ್ಟು ಬಲ ಬಂದಂತಾಗಿದೆ. ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ನಲ್ಲಿ ಅಫರ್ಡಬಲ್‌ ಹೌಸಿಂಗ್‌ ಫಂಡ್‌ (ಕೈಗೆಟುಕುವ ದರದ ಮನೆಗಳಿಗೆ ನಿಧಿ) ಸ್ಥಾಪಿಸುತ್ತಿರುವುದರಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಹೆಚ್ಚಿನ ವೇಗ ಪಡೆಯಲು ಸಾಧ್ಯವಾಗುತ್ತದೆ’ ಎಂದು ವಿವರಿಸುತ್ತಾರೆ ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಘಟನೆಗಳ ಭಾರತೀಯ ಒಕ್ಕೂಟದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್‌ ಹರಿ.

ಯಾರಿಗೆ ಎಷ್ಟು ಸಬ್ಸಿಡಿ
ಒಟ್ಟು ನಾಲ್ಕು ವರ್ಗಗಳಲ್ಲಿ ಈ ಯೋಜನೆಯನ್ನು ವಿಂಗಡಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್- ವರ್ಗ 1), ಕಡಿಮೆ ಆದಾಯವಿರುವ (ಎಲ್‌ಐಜಿ)ವರ್ಗ, ಮಧ್ಯಮ ಆದಾಯ ಗುಂಪು–1  ಮತ್ತು ಮಧ್ಯಮ ಆದಾಯ ಗುಂಪು –2 (MIG–1 ಮತ್ತು MIG–2).

ಆರ್ಥಿಕವಾಗಿ ದುರ್ಬಲ ವರ್ಗದ  (ಇಡಬ್ಲ್ಯೂಎಸ್) ಹಾಗೂ ಕಡಿಮೆ ಆದಾಯವಿರುವ (ಎಲ್‌ಐಜಿ) ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು 2015ರ ಜೂನ್‌ 17ರಂದು ಮೊದಲ ಹಂತದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಚಾಲನೆ ನೀಡಲಾಯಿತು. ಮುಂದೆ ಜನವರಿ 1, 2017ಕ್ಕೆ ಈ ಯೋಜನೆಯ ಮುಂದುವರಿದ ಭಾಗವಾಗಿ ಮತ್ತೆ ಎರಡು ಗುಂಪುಗಳನ್ನು ಇದಕ್ಕೆ ಸೇರಿಸಲಾಯಿತು– ಮಧ್ಯಮ ಆದಾಯ ಗುಂಪು–1  (MIG–1) ಮತ್ತು ಮಧ್ಯಮ ಆದಾಯ ಗುಂಪು –2 (MIG–2).

ಸಾಲ ನೀಡಲು ಫೈನಾನ್ಸ್‌ ಕಂಪನಿಗಳು, ಸಾರ್ವಜನಿಕ ಬ್ಯಾಂಕ್‌ಗಳು, ಪ್ರಾದೇಶಿಕ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ ಸೇರಿದಂತೆ ಸುಮಾರು 70 ಹಣಕಾಸು ಸಂಸ್ಥೆಗಳನ್ನು ಗುರುತಿಸಲಾಗಿದೆ. ಯಾವುದೇ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಈ ಯೋಜನೆ ಒಂದೇ ಪ್ರಕಾರವಾಗಿರುತ್ತದೆ.

‌ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ವರ್ಗದ ಜನರು ₹ 6 ಲಕ್ಷದಿಂದ ₹12 ಲಕ್ಷದ ತನಕದ ಗೃಹಸಾಲದ ಬಡ್ಡಿಯಲ್ಲಿ ₹2.35 ಲಕ್ಷ ದಿಂದ ₹2.67. ತನಕ ಸಬ್ಸಿಡಿ ಪಡೆಯಬಹುದು. ಇದು ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಲು, ಈಗಾಗಲೇ ಕಟ್ಟಿಸಿದ ಮನೆಯನ್ನು ಕೊಳ್ಳಲು ಅಥವಾ ಫ್ಲ್ಯಾಟ್‌ ಖರೀದಿಯ ಸಾಲಕ್ಕೆ ಅನ್ವಯವಾಗುತ್ತದೆ.

ಅರ್ಹತಾ ಮಾನದಂಡಗಳು
ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ. ವಾರ್ಷಿಕ ಆದಾಯದ ನಿಖರ ವಿವರಗಳನ್ನು ಒದಗಿಸಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ದೇಶದ ಯಾವುದೇ ಭಾಗದಲ್ಲಿ ಸ್ವಂತ ಮನೆ ಹೊಂದಿರಬಾರದು. ವಿವಾಹಿತರಾಗಿದ್ದಲ್ಲಿ ಒಬ್ಬರು ಅಥವಾ ಜಂಟಿ ಮಾಲೀಕತ್ವದಲ್ಲಿ ಯೋಜನೆಯ ಲಾಭ ಪಡೆಯಬಹುದು. ಅರ್ಜಿದಾರರ ಕುಟುಂಬ ಯಾವುದೇ ವಸತಿ-ಸಂಬಂಧಿತ ಯೋಜನೆಗಳ ಪ್ರಯೋಜನವನ್ನು ಹೊಂದಿರಬಾರದು. ಇದೆಲ್ಲದರೊಂದಿಗೆ ಗೃಹಸಾಲಕ್ಕೆ ಒದಗಿಸುವ ಎಲ್ಲಾ ಮೂಲ ದಾಖಲೆಪತ್ರಗಳನ್ನು ನೀಡಬೇಕು.

ಆರ್ಥಿಕವಾಗಿ ದುರ್ಬಲ ವರ್ಗ ಹಾಗೂ ಕಡಿಮೆ ಆದಾಯವಿರುವ ವರ್ಗದಲ್ಲಿ ಮನೆ ವಿಸ್ತೀರ್ಣ ಬಹಳ ಕಡಿಮೆ ಇರುತ್ತದೆ. ಆದ್ದರಿಂದ ಈ ಎರಡೂ ಗುಂಪುಗಳ ವಿಸ್ತೀರ್ಣದಲ್ಲಿ ಸ್ವಲ್ಪ ಹೆಚ್ಚೂ–ಕಡಿಮೆ ಆದರೂ ವಿನಾಯಿತಿ ನೀಡಲಾಗುತ್ತದೆ. ಆದರೆ ಎಂಐಜಿ–1 ಮತ್ತು ಎಂಐಜಿ–2ರ ವರ್ಗದಲ್ಲಿ ಈ ವಿನಾಯಿತಿ ಇರುವುದಿಲ್ಲ.
ವಿವೇಕಾನಂದ ಮಠದ್‌,
ಎಜಿಎಂ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

*
2017ರ ಅಂತ್ಯದ ವೇಳೆಗೆ ನಗರ ಪ್ರದೇಶದಲ್ಲಿ ಕೇವಲ 30.76 ಲಕ್ಷ ಮನೆಗಳಿಗೆ ಅನುಮೋದನೆ ನೀಡಲಾಗಿದೆ ಎನ್ನುವುದು ಸರ್ಕಾರದ ಲೆಕ್ಕದಲ್ಲಿ ಮಾತ್ರ. ಆದರೆ ವಾಸ್ತವದಲ್ಲಿ ಕೇವಲ 4.13 ಲಕ್ಷ ಮನೆಗಳು ಪೂರ್ಣಗೊಂಡಿವೆ. ನಮ್ಮ ರಾಜ್ಯದಲ್ಲಿ 20,500 ಜನರು ಇದರ ಲಾಭ ಪಡೆದಿದ್ದಾರೆ.
–ಎಂ. ಮುರಳಿ, ವ್ಯವಸ್ಥಾಪಕ ನಿರ್ದೇಶಕರು, ಶ್ರೀರಾಂ ಪ್ರಾಪರ್ಟೀಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT