ಗುರುವಾರ , ಮಾರ್ಚ್ 4, 2021
29 °C
ಜನಮಾನಸದಲ್ಲಿ ಅಚ್ಚಳಿಯದ ರಾಷ್ಟ್ರಪಿತನ ನೆನಪು

‘ಚಿನ್ನ’ದ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ಕೋಲಾರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಪಾದಸ್ಪರ್ಶದಿಂದ ಜಿಲ್ಲೆಯ ನೆಲ ಪುಳಕಗೊಂಡು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಚಳವಳಿಯ ಕಿಚ್ಚು ಹೊತ್ತಿಸಿದ ಅವಿಸ್ಮರಣೀಯ ಕ್ಷಣದ ನೆನಪು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಹರಿಜನೋದ್ಧಾರದ ಕನಸು ನನಸಾಗಿಸಲು ದೇಶದೆಲ್ಲೆಡೆ ಪ್ರವಾಸ ಮಾಡಿ ರಾಷ್ಟ್ರ ಭಕ್ತರನ್ನು ಒಗ್ಗೂಡಿಸುವ ಉದ್ದೇಶಕ್ಕಾಗಿ ರಾಷ್ಟ್ರಪಿತ ಜಿಲ್ಲೆಗೂ ಬಂದಿದ್ದರು. ಜಿಲ್ಲೆಯ ಕೆ.ಪಟ್ಟಾಭಿರಾಮನ್, ಚಿಕ್ಕಮುನಿಯಪ್ಪ, ಶ್ರೀನಿವಾಸಗೌಡ, ಕೆ.ಸಿ.ರೆಡ್ಡಿ, ಅಬ್ಬಣಿ ನಾಗಪ್ಪ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಗಾಂಧೀಜಿಯಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು.

ಚಿಕ್ಕಬಳ್ಳಾಪುರವು ಕೋಲಾರ ಜಿಲ್ಲೆಯಿಂದ ಪ್ರತ್ಯೇಕವಾಗುವುದಕ್ಕೂ ಮುನ್ನ ಜಿಲ್ಲೆಯ ಭಾಗವಾಗಿದ್ದ ನಂದಿ ಗಿರಿಧಾಮಕ್ಕೆ (ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ) ಗಾಂಧೀಜಿ 2 ಬಾರಿ ಭೇಟಿ ಕೊಟ್ಟಿದ್ದರು. ಅವರು ಅಸ್ತಮಾ ಪೀಡಿತರಾಗಿದ್ದ ವೇಳೆ 1927ರಲ್ಲಿ 45 ದಿನ ಹಾಗೂ 1936ರಲ್ಲಿ 20 ದಿನ ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು. 1936ರ ಮೇ 31ರಂದು ನಂದಿ ಬೆಟ್ಟದಿಂದ ಬೆಂಗಳೂರಿಗೆ ಹೊರಟ ಗಾಂಧೀಜಿ ಮಾರ್ಗ ಮಧ್ಯೆ ಬೌರಿಂಗ್‌ಪೇಟೆಗೆ (ಈಗಿನ ಬಂಗಾರಪೇಟೆ) ಭೇಟಿ ಕೊಟ್ಟಿದ್ದರು.

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ವ್ಯವಸ್ಥೆ ಮಾಡಿದ್ದ ರೋಲ್ಸ್‌ ರಾಯ್ಸ್‌ ಕಾರಿನಲ್ಲಿ ಬಂಗಾರಪೇಟೆಗೆ ಬಂದಿದ್ದ ಗಾಂಧೀಜಿ ಕಿಂಗ್‌ ಎಡ್ವರ್ಡ್‌ ಸಭಾಂಗಣದಲ್ಲಿ ಆಯೋಜನೆಯಾಗಿದ್ದ ಸಾರ್ವಜನಿಕ ಸಭೆಯಲ್ಲಿ ಸುಮಾರು 10 ನಿಮಿಷ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅವರ ಪತ್ನಿ ಕಸ್ತೂರಬಾ, ಸರ್ದಾರ್‌ ವಲ್ಲಭಾಬಾಯಿ ಪಟೇಲ್, ಸರೋಜಿನಿನಾಯ್ಡು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬೆಳ್ಳಿ ಲೋಟದ ನೆನಪು: ಬೌರಿಂಗ್‌ಪೇಟೆಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಆದಿನಾರಾಯಣಶೆಟ್ಟಿ ಅವರು ಗಾಂಧೀಜಿಯನ್ನು ಭೇಟಿಯಾಗಿ ದಲಿತರ ಉದ್ಧಾರಕ್ಕಾಗಿ ಪಟ್ಟಣದ ನಿವಾಸಿಗಳು ರೂಪಿಸಿದ ಯೋಜನೆಗಳನ್ನು ತಿಳಿಸಿದ್ದರು. ಪಟ್ಟಣದ ಜನರ ಸಾಮಾಜಿಕ ಕಾಳಜಿಗೆ ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಸಾರ್ವಜನಿಕ ಸಭೆ ಬಳಿಕ ತಂದೆಯು ಬೆಳ್ಳಿ ಲೋಟದಲ್ಲಿ ಗಾಂಧೀಜಿಗೆ ಗಂಗಾ ಜಲ ಕೊಟ್ಟಿದ್ದರು. ಗಂಗಾ ಜಲ ಕುಡಿದ ಗಾಂಧೀಜಿ ಬೆಳ್ಳಿ ಲೋಟವನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಹರಿಜನರ ಕಲ್ಯಾಣ ನಿಧಿಗೆ ಕೊಡುವಂತೆ ಹೇಳಿದ್ದರು’ ಎಂದು ಆ ಅಮೃತ ಘಳಿಗೆಗೆ ಸಾಕ್ಷಿಭೂತರಾಗಿದ್ದ ಆದಿನಾರಾಯಣಶೆಟ್ಟಿಯವರ ಮಗ ವೆಂಕಟಾಚಲಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂದೆಯು ಗಾಂಧೀಜಿಯನ್ನು ಭೇಟಿ ಮಾಡಿದ ಸವಿ ನೆನಪಿಗಾಗಿ ಬೆಳ್ಳಿ ಲೋಟವನ್ನು ಹರಾಜು ಹಾಕದೆ ತಮ್ಮ ಬಳಿಯೇ ಇಟ್ಟುಕೊಳ್ಳುವುದಾಗಿ ಮನವಿ ಮಾಡಿದ್ದರು. ಅದಕ್ಕೆ ಸಮ್ಮತಿಸಿದ ಗಾಂಧೀಜಿ ಸಂತಸದಿಂದಲೇ ತಂದೆಗೆ ಬೆಳ್ಳಿ ಲೋಟ ಹಿಂದಿರುಗಿಸಿದ್ದರು. ಆ ಬೆಳ್ಳಿ ಲೋಟವನ್ನು ಇಂದಿಗೂ ಮನೆಯಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.

‘ವರ್ತಕರಾಗಿದ್ದ ತಂದೆಯು ಗಾಂಧೀಜಿ ವಿಚಾರಧಾರೆಯಿಂದ ಪ್ರಭಾವಿತರಾಗಿ ವ್ಯಾಪಾರ ವೃತ್ತಿ ಬಿಟ್ಟು ಕಾಂಗ್ರೆಸ್ ಸೇರಿದರು. ಸಂಬಂಧಿಕರು ಹಾಗೂ ಸ್ನೇಹಿತರ ವಿರೋಧ ಲೆಕ್ಕಿಸದೆ ಗಾಂಧೀಜಿಯ ಒಡನಾಟ ಬೆಳೆಸಿಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದರು. ನಾನು 10ನೇ ವರ್ಷದವನಾಗಿದ್ದಾಗ ತಂದೆಯ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ’ ಎಂದು ಅನುಭವ ಹಂಚಿಕೊಂಡರು.

₹ 285 ದೇಣಿಗೆ: ಬಂಗಾರಪೇಟೆ ನಿವಾಸಿಗಳು ಹರಿಜನರ ಉದ್ಧಾರಕ್ಕೆ ಸಹಾಯಧನವಾಗಿ ₹ 285 ಸಂಗ್ರಹಿಸಿ
ಗಾಂಧೀಜಿಗೆ ದೇಣಿಗೆ ನೀಡಿದ್ದರು. ಅಲ್ಲದೇ, ಪಟ್ಟಣದ ದಲಿತರಿಗೆ ವಸತಿ ಸೌಕರ್ಯ ಕಲ್ಪಿಸಲು ₹ 1,600 ದೇಣಿಗೆ ಸಂಗ್ರಹಿಸಿದ್ದರು. ಪುರಸಭೆ ವತಿಯಿಂದ ದಲಿತರಿಗೆ ಉಚಿತವಾಗಿ ನಿವೇಶನ ನೀಡಲಾಗಿತ್ತು. ದಲಿತರ ಕಾಲೊನಿಯಲ್ಲಿ ಬಾವಿ, ವಿದ್ಯುತ್ ದೀಪ, ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಗಾಂಧೀಜಿ ಬಂಗಾರಪೇಟೆಗೆ ಭೇಟಿ ಕೊಟ್ಟಿದ್ದರು.

1915ರ ಮೇ 20ರಂದು ಬೆಂಗಳೂರಿನಿಂದ ಮದ್ರಾಸ್‌ಗೆ (ಈಗಿನ ಚೆನ್ನೈ) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಆಗ ವರ್ತಕರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ್ದರು.


ಮಹಾತ್ಮ ಗಾಂಧೀಜಿ 1936ರ ಮೇ ತಿಂಗಳಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆಗೆ ಬಂದಿದ್ದಾಗ ಗಂಗಾ ಜಲ ಕುಡಿಯಲು ಬಳಸಿದ್ದ ಬೆಳ್ಳಿ ಲೋಟವನ್ನು ವೆಂಕಟಾಚಲಪತಿ ಅವರು ತೋರಿಸುತ್ತಿರುವುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು