ಭಾನುವಾರ, ಜುಲೈ 25, 2021
25 °C
ಹೊರ ರಾಜ್ಯಗಳಿಂದ ಬರುವ ಲಾರಿ ಚಾಲಕರಿಗೆ ಆರೋಗ್ಯ ತಪಾಸಣೆ ಇಲ್ಲ

ಮಾರುಕಟ್ಟೆ ನಿಯಮ ಗಾಳಿಗೆ ತೂರಿದ ವರ್ತಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಎಪಿಎಂಸಿ ಮಾರುಕಟ್ಟೆಯಲ್ಲಿನ ಮಾವಿನಕಾಯಿ ಮಂಡಿ ಮಾಲೀಕರು ಹಾಗೂ ವರ್ತಕರು ಕೊರೊನಾ ಸೋಂಕು ಹರಡಂತೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರ ಪ್ರಸಾದ್‌ ದೂರಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ಶನಿವಾರ ಮಂಡಿ ಮಾಲೀಕರು ಹಾಗೂ ವರ್ತಕರು ಅನುಸರಿಸಬೇಕಾದ ನಿಯಮಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದರು.

ಹಿಂದಿನ ಸಭೆಗಳಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಮಿಕರಿಗೆ ಗುರುತಿನ ಚೀಟಿ ನೀಡುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಮಾಸ್ಕ್‌ ಅಥವಾ ಸ್ಯಾನಿಟೈಸರ್‌ ಬಳಸುತ್ತಿಲ್ಲ. ಹೊರ ರಾಜ್ಯಗಳಿಂದ ಬರುವ ಲಾರಿ ಚಾಲಕರಿಗೆ ಅಗತ್ಯವಾದ ಆರೋಗ್ಯ ತಪಾಸಣೆ ನಡೆಸುತ್ತಿಲ್ಲ. ಲಾರಿಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿಲ್ಲ. ಇಲ್ಲಿನ ಅವ್ಯವಸ್ಥೆ ಕೊರೊನಾ ಸೊಂಕು ಹರಡಲು ಪೂರಕವಾಗಿದೆ ಎಂದು ದೂರಿದರು.

ವರ್ತಕರು ಎಪಿಎಂಸಿಗೆ ಸಲ್ಲಿಸಬೇಕಾಗಿದ್ದ ಶೇ 1ರಷ್ಟು ಬಳಕೆದಾರರ ಶುಲ್ಕವನ್ನು ಸರ್ಕಾರ ರದ್ದುಪಡಿಸಿದೆ. ಆದರೆ ಇಲ್ಲಿ ವರ್ತಕರು ಕಾನೂನು ಬಾಹಿರವಾಗಿ ಮಾವು ಬೆಳೆಗಾರರಿಂದ ಶೇ 10ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ. ಮಾರುಕಟ್ಟೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 10ಮಂದಿ ಗುತ್ತಿಗೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಮಾರುಕಟ್ಟೆಯ 19.6ಎಕರೆ ಜಮೀನಿನಲ್ಲಿ ಮೂವರು ಪ್ರಭಾವಿ ವರ್ತಕರು ತಲಾ 1 ಎಕರೆಯಂತೆ, 3 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಮೀನಿನ ಖಾತೆ ಮಾಡಿಸಿ, ಅಳತೆ ಮಾಡಿಸಲು ಹೋದಾಗ ದಾಖಲೆಗಳನ್ನು ಒದಗಿಸುವುದಾಗಿ ಹೇಳಿದ್ದರು. ಆದರೆ ಈವರೆಗೆ ದಾಖಲೆ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು
ಆಪಾದಿಸಿದರು.

ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ 400 ವ್ಯಾಪಾರಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಸ್ಥಳದ ಅಭಾವ ಇರುವುದರಿಂದ 104 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒತ್ತುವರಿ ತೆರವುಗೊಳಿಸಿದರೆ ಇನ್ನಷ್ಟು ವರ್ತಕರಿಗೆ ವಹಿವಾಟು ನಡೆಸಲು ಅವಕಾಶವಾಗುತ್ತದೆ
ಎಂದರು.

ಎಪಿಎಂಸಿ ಸದಸ್ಯ ಎಸ್‌.ಎಚ್‌.ಮಂಜುನಾಥ ರೆಡ್ಡಿ, ಯೋಗೇಂದ್ರ ಗೌಡ, ಮಾಜಿ ಉಪಾಧ್ಯಕ್ಷ ಟೈಲರ್‌ ನಾರಾಯಣಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.