ಮೈಕ್ರೊ ವೀಕ್ಷಕರು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಿ: ತಿಲಗಾರ್ ಕಿವಿಮಾತು

ಶನಿವಾರ, ಏಪ್ರಿಲ್ 20, 2019
28 °C
ಕಾರ್ಯಾಗಾರ

ಮೈಕ್ರೊ ವೀಕ್ಷಕರು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಿ: ತಿಲಗಾರ್ ಕಿವಿಮಾತು

Published:
Updated:
Prajavani

ಕೋಲಾರ: ‘ಮೈಕ್ರೊ ವೀಕ್ಷಕರು ಚುನಾವಣೆ ವೇಳೆ ಅತಿ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಬೇಕು. ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು’ ಎಂದು ಚುನಾವಣಾ ಪ್ರಧಾನ ತರಬೇತುದಾರ ಎಚ್.ಕೆ.ತಿಲಗಾರ್ ಕಿವಿಮಾತು ಹೇಳಿದರು.

ಜಿಲ್ಲಾ ಚುನಾವಣಾ ಶಾಖೆಯು ಮೈಕ್ರೊ ವೀಕ್ಷಕರಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮತಗಟ್ಟೆಗಳಲ್ಲಿನ ಇಡೀ ಚುನಾವಣಾ ಪ್ರಕ್ರಿಯೆ ಕುರಿತು ಮೈಕ್ರೋ ವೀಕ್ಷಕರು ಮಾಹಿತಿ ಸಂಗ್ರಹಿಸಿ ಜಿಲ್ಲಾ ಚುನಾವಣಾಧಿಕಾರಿಗೆ ವರದಿ ನೀಡಬೇಕು’ ಎಂದು ಹೇಳಿದರು.

‘ಏ.18ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಏ.17ರಂದು ಆಯಾ ತಾಲ್ಲೂಕುಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಶ್ರೀನಿವಾಸಪುರದಲ್ಲಿ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು, ಕೆಜಿಎಫ್‌ನಲ್ಲಿ ಸ್ಕೂಲ್ ಆಫ್ ಮೈನ್ಸ್, ಬಂಗಾರಪೇಟೆಯಲ್ಲಿ ದೇಶಿಹಳ್ಳಿಯ ಆದರ್ಶ ಶಾಲೆ, ಕೋಲಾರದಲ್ಲಿ ಬಾಲಕರ ಜೂನಿಯರ್ ಕಾಲೇಜು, ಮಾಲೂರಿನಲ್ಲಿ ಬಾಲಕರ ಜೂನಿಯರ್ ಕಾಲೇಜು, ಮುಳಬಾಗಿಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯಾ ಕ್ಷೇತ್ರದ ಮೈಕ್ರೊ ವೀಕ್ಷಕರು ವರದಿ ಮಾಡಿಕೊಳ್ಳಬೇಕು’ ಎಂದರು.

‘ಯಾವುದೇ ಮತಗಟ್ಟೆ ಸಂಬಂಧ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಚುನಾವಣೆ ಆರಂಭದಿಂದ ಮುಕ್ತಾಯದ ಅವಧಿವರೆಗಿನ ಅಂಶಗಳ ಬಗ್ಗೆ ಮೈಕ್ರೊ ವೀಕ್ಷಕರು ನೀಡಿರುವ ವರದಿಯನ್ನು ಮೊದಲು ಹೇಳುತ್ತಾರೆ. ಹೀಗಾಗಿ ಮೈಕ್ರೊ ವೀಕ್ಷಕರು ಹೆಚ್ಚು ಜವಾಬ್ದಾರಿಯುತವಾಗಿ ಚುನಾವಣಾ ಪ್ರಕ್ರಿಯೆ ಗಮನಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ಅಣಕು ಮತದಾನ ಗಮನಿಸಿ: ‘ಏ.18ರಂದು ಮೈಕ್ರೊ ವೀಕ್ಷಕರು ಬೆಳಿಗ್ಗೆ 6 ಗಂಟೆಗೂ ಮುನ್ನ ಮತಗಟ್ಟೆಗಳಲ್ಲಿ ಹಾಜರಿದ್ದು, ಏಜೆಂಟರ ಸಮ್ಮುಖದಲ್ಲಿ ನಡೆಯುವ ಅಣಕು ಮತದಾನ ಪ್ರಕ್ರಿಯೆ ಗಮನಿಸಬೇಕು’ ಎಂದು ಚುನಾವಣಾ ತರಬೇತುದಾರ ಎಸ್.ವೆಂಕಟಸ್ವಾಮಿ ಸಲಹೆ ನೀಡಿದರು.

‘ಮತಗಟ್ಟೆಗಳಲ್ಲಿ ಮತದಾರರು ಗೋಪ್ಯತೆ ಕಾಯ್ದಕೊಳ್ಳುವರೇ ಎಂಬುದನ್ನು ಗಮನಿಸಿ. ಚುನಾವಣಾ ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದರೆ ತಕ್ಷಣವೇ ಸಾಮಾನ್ಯ ವೀಕ್ಷಕರಿಗೆ ತಿಳಿಸಬೇಕು. ಜತೆಗೆ ಮತದಾನ ಮುಗಿದ ನಂತರ ವೀಕ್ಷಕರಿಗೆ ಭರ್ತಿ ಮಾಡಿದ ನಮೂನೆ ಸಲ್ಲಿಸಬೇಕು’ ಎಂದು ಸೂಚಿಸಿದರು.

ಚುನಾವಣಾ ವೀಕ್ಷಕರಾದ ವಿಕಾಸ್ ಗರ್ಗ್, ಇಕ್ಬಾಲ್ ಅನ್ಸಾರಿ, ಸಹಾಯಕ ಚುನಾವಣಾಧಿಕಾರಿ ವಿಠಲ್, ಸಾಮಾನ್ಯ ವೀಕ್ಷಕರ ಸಂಪರ್ಕಾಧಿಕಾರಿ ಎನ್.ರವಿಚಂದ್ರ, ತರಬೇತುದಾರ ಕೃಷ್ಣಮೂರ್ತಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್, ತರಬೇತಿ ನೋಡಲ್ ಅಧಿಕಾರಿ ಮಂಜುನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !