ಬುಧವಾರ, ಜನವರಿ 20, 2021
17 °C
ನಷ್ಟದ ನೆಪ: ಹಾಲು ಉತ್ಪಾದಕರಿಗೆ ಬರೆ– ಗ್ರಾಹಕರಿಗೆ ಹೊರೆ

ಕೋಲಾರ: ಹಾಲು ಖರೀದಿ ದರ ಪರಿಷ್ಕರಣೆಗೆ ಮೀನಮೇಷ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂಕಷ್ಟದ ಕಾರ್ಮೋಡ ಕರಗಿದರೂ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಕೋಚಿಮುಲ್‌) ಹಾಲು ಖರೀದಿ ದರ ಪರಿಷ್ಕರಣೆಗೆ ಮೀನಮೇಷ ಎಣಿಸುತ್ತಿದೆ.

ಒಕ್ಕೂಟವು ನಷ್ಟದ ನೆಪ ಹೇಳಿ ಹಾಲು ಉತ್ಪಾದಕರ ಮೇಲೆ ದರ ಇಳಿಕೆಯ ಅಸ್ತ್ರ ಪ್ರಯೋಗಿಸಿತ್ತು. ಆದರೆ, ಹಾಲು ಖರೀದಿ ದರ ಇಳಿಕೆಗೆ ಅನುಗುಣವಾಗಿ ರಾಜ್ಯ ಹಾಲು ಮಹಾಮಂಡಳವು (ಕೆಎಂಎಫ್‌) ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ದರ ಕಡಿತಗೊಳಿಸದೆ ಗ್ರಾಹಕರ ಹಿತ ಕಡೆಗಣಿಸಿದೆ.

ಕೋಚಿಮುಲ್‌ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,870 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಅವಳಿ ಜಿಲ್ಲೆಗಳಿಂದ ದಿನಕ್ಕೆ ಸುಮಾರು 10 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದ್ದು, ಕೋಚಿಮುಲ್‌ ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ.

ಕೋವಿಡ್‌–19 ಮತ್ತು ಲಾಕ್‌ಡೌನ್‌ ಹೊಡೆತಕ್ಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಲಾಕ್‌ಡೌನ್‌ನಿಂದ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಗೆ ಹಾಲು ಪೂರೈಕೆ ಸ್ಥಗಿತಗೊಂಡಿತ್ತು.

ಜಾಗತಿಕವಾಗಿ ಹಾಲಿನ ಪುಡಿ, ಬೆಣ್ಣೆ ಬೆಲೆಯು ದಾಖಲೆ ಪ್ರಮಾಣದಲ್ಲಿ ಕುಸಿದು ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾಗಿತ್ತು. ಹಾಲಿನ ಪುಡಿ ಮತ್ತು ಬೆಣ್ಣೆಯು ಗೋದಾಮುಗಳಲ್ಲೇ ಉಳಿದು ಒಕ್ಕೂಟಕ್ಕೆ ನಷ್ಟದ ಭೀತಿ ಎದುರಾಗಿತ್ತು. ನಷ್ಟದಿಂದ ಪಾರಾಗಲು ಕೋಚಿಮುಲ್‌ ಆಡಳಿತ ಮಂಡಳಿಯು ಹಾಲು ಖರೀದಿ ದರ ಇಳಿಕೆ ಮಾಡಿತ್ತು. ಆದರೆ, ದರ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ.

ಮಾರಾಟ ಚೇತರಿಕೆ: ಲಾಕ್‌ಡೌನ್‌ ಸಡಿಲಿಕೆ ಬಳಿಕ ಸರಕು ಸಾಗಣೆ ಸೇವೆ ಸಹಜ ಸ್ಥಿತಿಗೆ ಮರಳಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಚೇತರಿಸಿಕೊಂಡಿದೆ. ಒಕ್ಕೂಟದಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹಾಲು ಪೂರೈಕೆಯಾಗುತ್ತಿದೆ.

ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 25 ಸಾವಿರ ಲೀಟರ್‌, ಆಂಧ್ರಪ್ರದೇಶಕ್ಕೆ 1.30 ಲಕ್ಷ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 3 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 4 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 40 ಸಾವಿರ ಲೀಟರ್‌ ಹಾಲು ಮೊಸರು ಉತ್ಪಾದನೆಗೆ, 26 ಸಾವಿರ ಲೀಟರ್‌ ಫ್ಲೆಕ್ಸಿ ಫ್ಯಾಕ್‌ಗೆ, ಹಾಲಿನ ಪುಡಿ ತಯಾರಿಕೆಗೆ 80 ಸಾವಿರ ಲೀಟರ್‌ ಹಾಲು ಬಳಸಲಾಗುತ್ತಿದೆ.

ಒಕ್ಕೂಟದಲ್ಲಿ ಸದ್ಯ 1,300 ಟನ್‌ ಹಾಲಿನ ಪುಡಿ ದಾಸ್ತಾನಿದೆ. ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಒಕ್ಕೂಟದಿಂದ ಹಾಲಿನ ಪುಡಿ ವಿತರಿಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿನ ಅಂಗನವಾಡಿ ಮಕ್ಕಳಿಗೆ ವಿತರಿಸಲು ಒಕ್ಕೂಟದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಪುಡಿ ಪೂರೈಸುವಂತೆ ಬೇಡಿಕೆಯಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ಹಾಲು ಖರೀದಿ ದರ ಹೆಚ್ಚಿಸಬೇಕೆಂಬ ಕೂಗು ರೈತರಿಂದ ಬಲವಾಗಿ ಕೇಳಿಬರುತ್ತಿದೆ. ಖರೀದಿ ದರ ಇಳಿಕೆಗೆ ಅನುಗುಣವಾಗಿ ಹಾಲಿನ ಮಾರಾಟ ದರ ಇಳಿಸಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ. ಆದರೆ, ಒಕ್ಕೂಟವು ಹಾಲು ಉತ್ಪಾದಕರ ಮತ್ತು ಗ್ರಾಹಕರ ಬೇಡಿಕೆಗೆ ಸ್ಪಂದಿಸದೆ ಮೌನಕ್ಕೆ ಶರಣಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.