ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆ ನಿರ್ಬಂಧ ಸಡಿಲಿಸಲಿ: ಸಂಸದ ಮುನಿಸ್ವಾಮಿ ಮನವಿ

Last Updated 29 ಜನವರಿ 2020, 14:24 IST
ಅಕ್ಷರ ಗಾತ್ರ

ಕೋಲಾರ: ‘ಬೋವಿ ಸಮುದಾಯದ ಕುಲ ಕಸುಬಾದ ಕಲ್ಲು ಗಣಿಗಾರಿಕೆಗೆ ಸರ್ಕಾರ ವಿಧಿಸಿರುವ ಕಾನೂನಾತ್ಮಕ ನಿರ್ಬಂಧ ಸಡಿಲಿಸಬೇಕು’ ಎಂದು ಸಂಸದ ಎಸ್ ಮುನಿಸ್ವಾಮಿ ಮನವಿ ಮಾಡಿದರು.

ಜಿಲ್ಲಾಡಳಿತವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಮಾತನಾಡಿ, ‘ಕ್ರಷರ್‌ಗಳ ಆರಂಭಕ್ಕೂ ಮುನ್ನ ಕಲ್ಲು ಹೊಡೆಯುತ್ತಿದ್ದರಿಂದ ಬೋವಿ ಸಮುದಾಯಕ್ಕೆ ಹೆಚ್ಚಿನ ಕೆಲಸವಿತ್ತು. ಆದರೆ, ಕ್ರಮೇಣ ಸಮುದಾಯವರ ಕೆಲಸಕ್ಕೆ ಕುತ್ತು ಬಂದಿದೆ. ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

‘ಜಿಲ್ಲೆಯಲ್ಲಿ ಹೊರ ರಾಜ್ಯದವರು ನಡೆಸುತ್ತಿರುವ ಕಲ್ಲು ಗಣಿಗಾರಿಕೆಗೆ ಕಡ್ಡಾಯವಾಗಿ ತೆರಿಗೆ ವಿಧಿಸಬೇಕು. ಬಡವರು ಹಾಗೂ ಬೋವಿ ಸಮುದಾಯದವರು ಮಾಡುವ ಸಣ್ಣಪುಟ್ಟ ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳಿಗೆ ದಂಡ ಹಾಕುವುದನ್ನು ಬಿಡಬೇಕು. ಅಧಿಕಾರಿಗಳ ಕೆಲಸ ಸಮಾಜದಲ್ಲಿ ಶಾಶ್ವತವಾಗಿ ಉಳಿಯಬೇಕು ಮತ್ತು ಜನ ನೆನಪಿಸಿಕೊಳ್ಳುವಂತೆ ಇರಬೇಕು’ ಎಂದು ಸಲಹೆ ನೀಡಿದರು.

‘ಕಾಲಕಾಲಕ್ಕೆ ಅಭಿವೃದ್ಧಿ, ವಿಕಾಸದ ಹಾದಿಯಲ್ಲಿ ಕ್ರಾಂತಿ ನಡೆಯಬೇಕು. 12ನೇ ಶತಮಾನದ ಶರಣರ ಮಹಾಮನೆಯ ಕಲ್ಪನೆಯಲ್ಲಿ 800 ವರ್ಷಗಳ ಹಿಂದೆಯೇ ಸಮ ಸಮಾಜದ ಪೋಷಣೆಗೆ ಬೀಜಾಕ್ಷರ ಬಿತ್ತಲಾಯಿತು. ಸಾಮಾಜಿಕ ಅನಿಷ್ಠ ಪದ್ಧತಿ ವಿರುದ್ಧ ಸಮಾನತೆಗಾಗಿ ಪ್ರಾಮಾಣಿಕವಾಗಿ ಹೋರಾಡುವ ಸಂಕಲ್ಪ ಮಾಡಿ’ ಎಂದು ಚಿತ್ರದುರ್ಗದ ಬೋವಿ ಮಠದ ಪೀಠಾಧಿಪತಿ ಸಿದ್ಧರಾಮೇಶ್ವರ ಸ್ವಾಮೀಜಿ ಕಿವಿಮಾತು ಹೇಳಿದರು.

ಮಾನ್ಯತೆ ನೀಡಿ: ‘ಸಿದ್ಧರಾಮೇಶ್ವರರು ಯೋಗಿಗಳ ಯೋಗಿಯಾಗಿ ಅಲ್ಲಮ ಪ್ರಭುಗಳ ಸಂಪರ್ಕಕ್ಕೆ ಬಂದ ನಂತರ ಅನುಭಾವಿಯಾಗಿ ಕನ್ನಡ ಸಾರಸ್ವತ ಲೋಕ ಬೆಳಗಿಸಿದರು. ಜಡಗಟ್ಟಿದ ಸಮಾಜವನ್ನು ಕ್ರಿಯಾಶೀಲತೆಯೆಡೆಗೆ ಕೊಂಡೊಯ್ದು ಮಹಾ ದಾರ್ಶನಿಕರಾಗಿ ಹೊಡೆದ ಮನಸ್ಸು ಕಟ್ಟುವ ಕೆಲಸ ಮಾಡಿದರು. ಅವರ ವಿಚಾರಧಾರೆ, ಸಮುದಾಯದ ಕುಲಕಸುಬಿಗೆ ಆದ್ಯತೆ ಮತ್ತು ಮಾನ್ಯತೆ ನೀಡಬೇಕು’ ಎಂದರು.

‘ಸಿದ್ಧರಾಮೇಶ್ವರರು ವೈದಿಕ ಸಂಸ್ಕೃತಿ ವಿರುದ್ಧ ಶೈವ ಸಂಸ್ಕೃತಿ ಕಟ್ಟಿ ಬೆಳೆಸಿ ಶರಣರ ಕಾಯಕವನ್ನು ಗೌರವಿಸುತ್ತಲೇ ಸಾಮಾಜಿಕ ಚಳವಳಿಗೆ ಜೀವ ತುಂಬಿದರು. ಬೋವಿ ಸಮುದಾಯಕ್ಕೆ ಕಲ್ಲು ಹೊಡೆಯುವುದು ಬಿಟ್ಟು ಬೇರೆ ಉದ್ಯೋಗ ಬರುವುದಿಲ್ಲ. ಆದ್ದರಿಂದ ಸಮುದಾಯಕ್ಕೆ ಎಲ್ಲಾ ಭಾಗ್ಯಗಳ ಜತೆಗೆ ಉದ್ಯೋಗ ಭಾಗ್ಯ ನೀಡಬೇಕು’ ಎಂದು ಮನವಿ ಮಾಡಿದರು.

ಮುಖ್ಯವಾಹಿನಿಗೆ ಬನ್ನಿ: ‘ಬೋವಿ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ಜನಾಂಗದ ಮಕ್ಕಳ ಶಿಕ್ಷಣಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕರ ನೀಡುತ್ತದೆ. ಸಮುದಾಯವು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಆಶಿಸಿದರು.

‘ಸಮ ಸಮಾಜದ ಆಶಯ ಹೊಂದಿದ್ದ ವಚನ ಚಳವಳಿಯ ಕ್ರಾಂತೀಯ ಧಾತುಗಳು ನಾಮಾವಶೇಷವಾದವು ಎಂದು ತಿಳಿಯುವ ಅಗತ್ಯವಿಲ್ಲ. ಸಿದ್ಧರಾಮೇಶ್ವರರು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ 12ನೇ ಶತಮಾನದಲ್ಲೇ ದುಡಿದರು. ಎಲ್ಲಾ ವಚನಕಾರರು ಅವರ ಹಾದಿಯಲ್ಲೇ ಸಾಗಿದರು’ ಎಂದು ಉಪನ್ಯಾಸಕ ಎನ್‌.ಗೋಪಾಲ್ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಬೋವಿ ಜನಾಂಗದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವೆಂಕಟರಮಣ ಹಾಗೂ ಸಮುದಾಯದ ಮುಖಂಡರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT