ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ: ಸಂಸದ ಮುನಿಯಪ್ಪ

7
ಕೆ.ಸಿ ವ್ಯಾಲಿ ನೀರು ಮೂರನೇ ಹಂತದ ಸಂಸ್ಕರಣೆ ಉತ್ತಮ

ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ: ಸಂಸದ ಮುನಿಯಪ್ಪ

Published:
Updated:

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಗೆ ಹರಿಸುವುದು ಉತ್ತಮ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಯೋಜನೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಬೇಕೆಂದು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ತೀರ್ಮಾನವಾಗಿತ್ತು’ ಎಂದು ಹೇಳಿದರು.

‘3ನೇ ಹಂತದಲ್ಲಿ ನೀರು ಸಂಸ್ಕರಿಸಬೇಕೆಂದು ನಾನು ಮತ್ತು ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ ಅವರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆವು. ಕೆರೆಗೆ ಹರಿಸುವ ನೀರು ಶುದ್ಧವಾಗಿರಬೇಕೆಂಬ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಶೀಘ್ರವೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ನೀರಿನ 3ನೇ ಹಂತದ ಸಂಸ್ಕರಣೆಗೆ ಮನವಿ ಮಾಡುತ್ತೇವೆ’ ಎಂದರು.

‘ಬೆಂಗಳೂರು ನಗರದ ತ್ಯಾಜ್ಯ ನೀರು ಯಾವುದೇ ಹಂತದಲ್ಲಿ ಸಂಸ್ಕರಣೆಯಾಗದೆ ವರ್ತೂರು ಕೆರೆ ಕೋಡಿ ಮೂಲಕ ಪಕ್ಕದ ಹೊಸೂರು, ಕೃಷ್ಣಗಿರಿ, ಸೇಲಂ ಭಾಗಕ್ಕೆ ಹರಿಯುತ್ತಿದೆ. ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ಜನ ಶುದ್ಧ ನೀರು ಪಡೆಯುತ್ತಿದ್ದಾರೆ. ಕೆ.ಸಿ ವ್ಯಾಲಿ ನೀರಿನ ಶುದ್ಧತೆ ಬಗ್ಗೆ ತಕರಾರು ಎತ್ತಿರುವವರು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಲಿ. ರಾಜ್ಯ ಸರ್ಕಾರದಿಂದಲೂ ತಜ್ಞರ ತಂಡ ಕಳುಹಿಸಿ ಪರಿಶೀಲನೆ ಮಾಡಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ಶಾಸಕರ ಪರಿಶ್ರಮ: ‘ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಪರಿಶ್ರಮವಿದೆ. ಯೋಜನೆ ವಿಚಾರದಲ್ಲಿ ಯಾರೋ ಒಬ್ಬರು ಯಶಸ್ಸಿನ ರೂವಾರಿಯಲ್ಲ. ಯೋಜನೆ ಯಶಸ್ಸಿನಲ್ಲಿ ಎಲ್ಲಾ ಜನಪ್ರತಿನಿಧಿಗಳು ಭಾಗಿದಾರರು’ ಎಂದು ಪರೋಕ್ಷವಾಗಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !