ಸಚಿವ ರೇವಣ್ಣ ಪ್ರತಿಕೃತಿ ದಹಿಸಿ ಆಕ್ರೋಶ

7
ಯುಎಚ್‌ಟಿ ಹಾಲು ಬೇಡಿಕೆ ಹಂಚಿಕೆಯಲ್ಲಿ ಜಿಲ್ಲೆಗೆ ಅನ್ಯಾಯ: ಕರವೇ ಧರಣಿ

ಸಚಿವ ರೇವಣ್ಣ ಪ್ರತಿಕೃತಿ ದಹಿಸಿ ಆಕ್ರೋಶ

Published:
Updated:
Deccan Herald

ಕೋಲಾರ: ಭಾರತೀಯ ಸೇನಾಪಡೆಗೆ ಯುಎಚ್‌ಟಿ ಹಾಲು ಪೂರೈಕೆ ಪ್ರಕ್ರಿಯೆಯಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ (ಕೋಚಿಮುಲ್‌) ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಸದಸ್ಯರು ನಗರದಲ್ಲಿ ಶನಿವಾರ ಧರಣಿ ನಡೆಸಿದರು.

ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಸಚಿವ ಎಚ್‌.ಡಿ.ರೇವಣ್ಣರ ಪ್ರತಿಕೃತಿ ದಹಿಸಿದ ಧರಣಿನಿರತರು, ‘ಕೋಚಿಮುಲ್‌ ಹಲವು ವರ್ಷಗಳಿಂದ ಸೇನಾಪಡೆಗೆ ಯುಎಚ್‌ಟಿ ಹಾಲು ಪೂರೈಸುತ್ತಿತ್ತು. ಆದರೆ, ಸಚಿವ ರೇವಣ್ಣ ಕೋಚಿಮುಲ್‌ ಪಾಲಿನ ಹಾಲು ಮಾರಾಟ ಕಸಿದುಕೊಂಡು ಜಿಲ್ಲೆಯ ಹೈನೋದ್ಯಮಕ್ಕೆ ಮರಣ ಶಾಸನ ಬರೆದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯ ಹಾಲು ಮಹಾಮಂಡಳವು (ಕೆಎಂಎಫ್‌) ಸೇನಾಪಡೆಗೆ ವರ್ಷಕ್ಕೆ 80 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಪೂರೈಸುವ ಟೆಂಡರ್ ಪಡೆದಿದೆ. ರೇವಣ್ಣ ಅವರ ಒತ್ತಡಕ್ಕೆ ಮಣಿದ ಕೆಎಂಎಫ್‌ ಆಡಳಿತ ಮಂಡಳಿಯು ಹಾಸನ ಜಿಲ್ಲಾ ಹಾಲು ಒಕ್ಕೂಟದಿಂದ ಸೇನಾಪಡೆಗೆ 40 ಲಕ್ಷ ಲೀಟರ್‌ ಯುಎಚ್‌ಟಿ ಹಾಲು ಪೂರೈಸಲು ಅವಕಾಶ ಕಲ್ಪಿಸಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ದೂರಿದರು.

‘ಹೈನೋದ್ಯಮವು ಜಿಲ್ಲೆಯ ರೈತರ ಜೀವನಾಡಿ. ಇದರಿಂದಲೇ ರೈತರು ಬದುಕು ಸಾಗಿಸುತ್ತಿದ್ದಾರೆ. ಆದರೆ, ರೇವಣ್ಣ ತಮ್ಮ ಪ್ರಭಾವ ಬಳಸಿ ಜಿಲ್ಲೆಯ ಪಾಲಿನ ಹಾಲು ಮಾರಾಟ ಕಸಿದುಕೊಂಡು ರೈತರ ಜೀವನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಕೆಎಂಎಫ್‌ ಆಡಳಿತ ಮಂಡಳಿಯು ರೇವಣ್ಣರ ಕೈಗೊಂಬೆಯಾಗಿದೆ’ ಎಂದು ಕಿಡಿಕಾರಿದರು.

₹ 70 ಕೋಟಿ ನಷ್ಟ: ‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ, ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯಿಲ್ಲ. ಹೀಗಾಗಿ ನಿತ್ಯವೂ ಸುಮಾರು 3.30 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತಿ ಲೀಟರ್‌ಗೆ ₹ 10 ನಷ್ಟವಾಗುತ್ತಿದೆ. ಕೆಎಂಎಫ್‌ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರದಿಂದ ಕೋಚಿಮುಲ್‌ಗೆ ವರ್ಷಕ್ಕೆ ₹ 70 ಕೋಟಿ ನಷ್ಟವಾಗಲಿದೆ’ ಎಂದು ಧರಣಿನಿರತರು ಆತಂಕ ವ್ಯಕ್ತಪಡಿಸಿದರು.

‘ಯುಎಚ್‌ಟಿ ಹಾಲಿನ ಬೇಡಿಕೆ ಹಂಚಿಕೆಯಲ್ಲಿ ಕೋಚಿಮುಲ್‌ಗೆ ಅನ್ಯಾಯವಾಗಿದ್ದರೂ ಅವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿರುವುದು ನಾಚಿಕೆಗೇಡು. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ರೇವಣ್ಣ ಅವರಿಗೆ ಜಿಲ್ಲೆಯ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಹಾಲಿನ ಬೇಡಿಕೆ ಹಂಚಿಕೆ ಸಂಬಂಧ ಮತ್ತೊಮ್ಮೆ ಪರಾಮರ್ಶೆ ನಡೆಸಿ ಜಿಲ್ಲೆಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಶೇಖರ್, ಮಧುಕೃಷ್ಣರೆಡ್ಡಿ, ಸಂಚಾಲಕರಾದ ಲೋಕೇಶ್, ಮೆಹಬೂಬ್, ಸದಸ್ಯರಾದ ಡಿ.ಕೆ.ಪ್ರಭಾಕರ್‌ಗೌಡ, ಸುನಿಲ್‌ಕುಮಾರ್, ವೆಂಕಟೇಶ್, ಗಣೇಶ್ ಪಾಲ್ಗೊಂಡಿದ್ದರು.

* 80 ಲಕ್ಷ ಲೀಟರ್‌ ಯುಎಚ್‌ಟಿ ಹಾಲಿನ ಟೆಂಡರ್
* 40 ಲಕ್ಷ ಲೀಟರ್‌ ಪಾಲು ಹಾಸನ ಒಕ್ಕೂಟಕ್ಕೆ
* ನಿತ್ಯ 3.30 ಲಕ್ಷ ಲೀಟರ್ ಹಾಲು ಪುಡಿಯಾಗಿ ಪರಿವರ್ತನೆ
* ಕೋಚಿಮುಲ್‌ಗೆ ₹ 70 ಕೋಟಿ ವಾರ್ಷಿಕ ನಷ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !