ಕೋಲಾರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬುಧವಾರ 3 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎರಡನೇ ಬಾರಿಗೆ ಉದ್ಘಾಟನೆ ಮಾಡುವ ಮೂಲಕ ತಮ್ಮ ರಾಜಕೀಯ ಕಡುವೈರಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರಿಗೆ ಪ್ರತ್ಯುತ್ತರ ನೀಡಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುದುವಾಡಿ, ಲಕ್ಷ್ಮೀಸಾಗರ ಹಾಗೂ ಬೈರಗಾನಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭ ಆ.26ಕ್ಕೆ ನಿಗದಿಯಾಗಿತ್ತು. ಈ ಸಮಾರಂಭಕ್ಕೆ ಸಚಿವ ಸುಧಾಕರ್, ಕ್ಷೇತ್ರದ ಶಾಸಕ ರಮೇಶ್‌ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ ಅವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು.
ಆದರೆ, ಸಚಿವ ಸುಧಾಕರ್ ಕಾರ್ಯ ನಿಮಿತ್ತ ದೆಹಲಿಗೆ ತೆರಳಿದ್ದರಿಂದ ಆ.26ರ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಅದರಂತೆ ಅಧಿಕಾರಿಗಳು ಕೊನೆ ಕ್ಷಣದಲ್ಲಿ ಸಮಾರಂಭ ರದ್ದುಪಡಿಸಿದ್ದರು. ಸುಧಾಕರ್ ಜತೆಗೆ ಜಿದ್ದಿಗೆ ಬಿದ್ದ ರಮೇಶ್‌ಕುಮಾರ್ ಅವರು ಪೂರ್ವನಿಗದಿಯಂತೆ ಆ.26ರಂದು ಮೂರೂ ಆಸ್ಪತ್ರೆಗಳನ್ನು ಉದ್ಘಾಟಿಸಿದ್ದರು.
ಸಂಸದರು, ಉಸ್ತುವಾರಿ ಸಚಿವರು, ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಈ ಸಮಾರಂಭದಿಂದ ದೂರ ಉಳಿದಿದ್ದರು. ರಮೇಶ್‌ಕುಮಾರ್ ಜತೆಗೆ ರಾಜಕೀಯ ಪೈಪೋಟಿಗಿಳಿದ ಸುಧಾಕರ್ ಬುಧವಾರ ಮತ್ತೊಮ್ಮೆ ಇದೇ ಆಸ್ಪತ್ರೆಗಳನ್ನು ಲೋಕಾರ್ಪಣೆ ಮಾಡಿದರು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುಧಾಕರ್, ‘ಅಧಿಕೃತವಾಗಿ ಇದು ಮೊದಲನೇ ಬಾರಿಗೆ ಆಸ್ಪತ್ರೆಗಳನ್ನು ಉದ್ಘಾಟಿಸಲಾಗುತ್ತಿದೆ. ಉಸ್ತುವಾರಿ ಸಚಿವರು, ಸಂಸದರು, ಅಧಿಕಾರಿಗಳು ಸಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಮೊದಲು ಯಾರು ಆಸ್ಪತ್ರೆ ಉದ್ಘಾಟಿಸಿದ್ದರು ಎಂಬುದು ಗೊತ್ತಿಲ್ಲ’ ಎಂದು ಪರೋಕ್ಷವಾಗಿ ರಮೇಶ್‌ಕುಮಾರ್‌ರನ್ನು ಕುಟುಕಿದರು.
ಶೋಭೆ ಇರುತ್ತಿತ್ತು: ‘ರಮೇಶ್‌ಕುಮಾರ್ ಈ ಹಿಂದೆ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಕಾರ್ಯಕ್ರಮಕ್ಕೆ ಬಂದಿದ್ದರೆ ಶೋಭೆ ಇರುತ್ತಿತ್ತು. ಅವರನ್ನು ನಾನ್ಯಾಕೆ ಆಹ್ವಾನಿಸಲಿ. ನನಗೂ ಅವರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಕಾಂಗ್ರೆಸ್, ನಾನು ಬಿಜೆಪಿಯಷ್ಟೇ’ ಎಂದು ಅಸಮಾಧಾನ ಹೊರಹಾಕಿದರು.
‘ಇದು ಸರ್ಕಾರಿ ಕಾರ್ಯಕ್ರಮ. ನನ್ನ ಅಥವಾ ರಮೇಶ್‌ಕುಮಾರ್‌ರ ಸ್ವಂತ ಆಸ್ಪತ್ರೆಯಲ್ಲ. ಸರ್ಕಾರದಿಂದ ನೀಡಿರುವ ಕಾರ್ಯಕ್ರಮವನ್ನು ಶಿಷ್ಟಾಚಾರದ ಪ್ರಕಾರ ಉದ್ಘಾಟಿಸಿದ್ದೇವೆ. ಅನೇಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಭಾಗವಹಿಸಿದ್ದಾರೆ. ನಾನು ರಾಜ್ಯದ ಆರೋಗ್ಯ ಸಚಿವ, ಸಾಧ್ಯವಾದ ಕಡೆಗೆಲ್ಲಾ ಹೋಗಿದ್ದೇನೆ. ನನಗೆ ಕೋಲಾರ ಜಿಲ್ಲೆ ಮೇಲೆ ಹೆಚ್ಚಿನ ಪ್ರೀತಿಯಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.