ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟ ಭಾರತ

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಮಿಶ್ರ ತಂಡ ವಿಭಾಗದಲ್ಲಿ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಭಾರತ 3–0ರಿಂದ ಮಾರಿಷಸ್‌ ತಂಡವನ್ನು ಪರಾಭವಗೊಳಿಸಿತು.

ಹಿಂದಿನ ಮೂರೂ ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಭಾರತ ತಂಡ ಎಂಟರ ಘಟ್ಟದ ಹಣಾಹಣಿಯಲ್ಲೂ ಮೋಡಿ ಮಾಡಿತು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 21–12, 21–3ರ ನೇರ ಗೇಮ್‌ಗಳಿಂದ ಆತೀಶ್‌ ಲುಬಾ ಮತ್ತು ಕ್ರಿಸ್ಟೋಫರ್‌ ಜೀನ್‌ ಪಾಲ್‌ ಅವರ ಸವಾಲು ಮೀರಿದರು.

14ನೇ ನಿಮಿಷದಲ್ಲಿ ಮೊದಲ ಗೇಮ್‌ ಜಯಿಸಿದ ಸಾತ್ವಿಕ್‌ ಮತ್ತು ಚಿರಾಗ್‌ ಅವರು ಎರಡನೇ ಗೇಮ್‌ನಲ್ಲೂ ಎದುರಾಳಿಗಳ ಸದ್ದಡಗಿಸಿದರು. ಆಕರ್ಷಕ ಸರ್ವ್‌ ಮತ್ತು ಚುರುಕಿನ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿದ ಅವರು ಆತೀಶ್‌ ಮತ್ತು ಕ್ರಿಸ್ಟೋಫರ್‌ ಅವರಿಗೆ ಚೇತರಿಸಿಕೊಳ್ಳಲೂ ಅವಕಾಶ ನೀಡದೆ ಗೆಲುವಿನ ತೋರಣ ಕಟ್ಟಿದರು.

ಮಹಿಳೆಯರ ಡಬಲ್ಸ್‌ ವಿಭಾಗದ ಪೈಪೋಟಿಯಲ್ಲಿ ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಹೈದರಾಬಾದ್‌ನ ಎನ್‌.ಸಿಕ್ಕಿ ರೆಡ್ಡಿ  21–8, 21–7ರಲ್ಲಿ ಔರೆಲಿ ಮೇರಿ ಎಲಿಸಾ ಅಲೆಟ್‌ ಮತ್ತು ನಿಕಿ ಚಾನ್‌ ಲ್ಯಾಮ್‌ ಅವರನ್ನು ಸೋಲಿಸಿದರು.

ಹಿಂದಿನ ಪಂದ್ಯಗಳಲ್ಲಿ ಗುಣಮಟ್ಟದ ಆಟ ಆಡಿ ಗಮನ ಸೆಳೆದಿದ್ದ ಅಶ್ವಿನಿ ಮತ್ತು ಸಿಕ್ಕಿ ಜೋಡಿ ಮೊದಲ ಗೇಮ್‌ನಲ್ಲಿ ಮಿಂಚಿತು. ಬೇಸ್‌ಲೈನ್‌ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದ ಅವರು 11ನೇ ನಿಮಿಷದಲ್ಲಿ ಗೇಮ್‌ ಕೈವಶ ಮಾಡಿಕೊಂಡರು.

ಎರಡನೇ ಗೇಮ್‌ನ ಶುರುವಿನಿಂದಲೇ ಅಶ್ವಿನಿ ಮತ್ತು ಸಿಕ್ಕಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ತಾವು ಮಾಡಿದ ಸರ್ವ್‌ಗಳಲ್ಲಿ ಸುಲಭವಾಗಿ ಪಾಯಿಂಟ್ಸ್‌ ಗಳಿಸಿದ ಅವರು ಎದುರಾಳಿಗಳ ಸರ್ವ್‌ಗಳನ್ನೂ ಮುರಿದು ‍ಪಾಯಿಂಟ್ಸ್‌ ಹೆಚ್ಚಿಸಿಕೊಂಡರು.

ಮೊದಲರ್ಧದಲ್ಲಿ ಭಾರತದ ಜೋಡಿಗೆ ಅಲ್ಪ ಪ್ರತಿರೋಧ ಒಡ್ಡಿದ ಔರೆಲಿ ‌ಮತ್ತು ನಿಕಿ, ದ್ವಿತೀಯಾರ್ಧದಲ್ಲಿ ಮಂಕಾದರು. ಭಾರತದ ಆಟಗಾರ್ತಿಯರು ಬಾರಿಸುತ್ತಿದ್ದ ಷಟಲ್‌ ಹಿಂತಿರುಗಿಸಲು ಪ್ರಯಾಸಪಟ್ಟ ಮಾರಿಷಸ್‌ನ ಜೋಡಿ ಸುಲಭವಾಗಿ ಸೋಲೊಪ್ಪಿಕೊಂಡಿತು.

ಇದರೊಂದಿಗೆ ಭಾರತ ತಂಡ 2–0ರ ಮುನ್ನಡೆ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು.

ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಶ್ರೀಕಾಂತ್‌ ಕೂಡ ಅಮೋಘ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಅಗ್ರಶ್ರೇಯಾಂಕ ಹೊಂದಿರುವ ಶ್ರೀಕಾಂತ್‌ 21–12, 21–14ರಿಂದ ಜಾರ್ಜಸ್‌ ಜೂಲಿಯನ್‌ ಪಾಲ್‌ ಅವರನ್ನು ಸೋಲಿಸಿದರು.

ಮೊದಲ ಗೇಮ್‌ನ ಆರಂಭದಿಂದಲೇ ಚುರುಕಿನ ಆಟ ಆಡಿದ ಶ್ರೀಕಾಂತ್‌ 4–1ರ ಮುನ್ನಡೆ ಗಳಿಸಿದರು. ನಂತರವೂ ದಿಟ್ಟ ಹೋರಾಟ ನಡೆಸಿದ ಅವರು ಬಲಿಷ್ಠ ಕ್ರಾಸ್‌ಕೋರ್ಟ್‌ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಸಂಗ್ರಹಿಸಿ ಮುನ್ನಡೆ ಹೆಚ್ಚಿಸಿಕೊಂಡರು.

ದ್ವಿತೀಯಾರ್ಧದ ಶುರುವಿನಲ್ಲಿ ಲಯ ಕಂಡುಕೊಂಡ ಪಾಲ್‌, ಶ್ರೀಕಾಂತ್‌ಗೆ ಕಠಿಣ ಸವಾಲು ಒಡ್ಡಿದರು. ಇದರಿಂದ ಕಿಂಚಿತ್ತೂ ವಿಚಲಿತರಾಗದ ಭಾರತದ ಆಟಗಾರ ಕೆಚ್ಚೆದೆಯ ಆಟ ಆಡಿ ಎದುರಾಳಿಯ ಸವಾಲು ಮೀರಿದರು.

ಎರಡನೇ ಗೇಮ್‌ನಲ್ಲೂ ಶ್ರೀಕಾಂತ್‌ ಆಟ ರಂಗೇರಿತು. ದೀರ್ಘ ರ‍್ಯಾಲಿಗಳಿಗೆ ಒತ್ತು ನೀಡಿದ ಅವರು ನೆಟ್‌ನ ಸಮೀಪದಲ್ಲಿ ಷಟಲ್‌ ಡ್ರಾಪ್‌ ಮಾಡುವ ತಂತ್ರ ಅನುಸರಿಸಿ ಪಾಯಿಂಟ್ಸ್‌ ಕಲೆಹಾಕಿದರು. ನಂತರವೂ ಪ್ರಾಬಲ್ಯ ಮೆರೆದ ಅವರು 29ನೇ ನಿಮಿಷದಲ್ಲಿ ಗೆಲುವಿನ ಸಿಹಿ ಸವಿದರು.

ಭಾನುವಾರ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ ತಂಡ ಸಿಂಗಪುರ ವಿರುದ್ಧ ಸೆಣಸಲಿದೆ.

ದಿನದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಗಪುರ 3–0ರಿಂದ ಆಸ್ಟ್ರೇಲಿಯಾ ಎದುರು ಗೆದ್ದಿತು.

**

ಹಿಂದೆ ನಾವು ಮಾರಿಷಸ್‌ ವಿರುದ್ಧ ಆಡಿದ್ದೆವು.ಈ ಪಂದ್ಯದಲ್ಲಿ ಎದುರಾಳಿಗಳ ತಂತ್ರಗಳಿಗೆ ಪ್ರತಿತಂತ್ರ ಹೆಣೆದು ಆಡಿದೆವು. ಹೀಗಾಗಿ ಗೆಲುವು ಸುಲಭವಾಯಿತು
ಚಿರಾಗ್‌ ಶೆಟ್ಟಿ, ಭಾರತದ ಡಬಲ್ಸ್‌ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT