ಶನಿವಾರ, ಅಕ್ಟೋಬರ್ 23, 2021
24 °C

ಕೆಜಿಎಫ್‌ನ ಗಣಿ ಕಾರ್ಮಿಕರ ಪ್ರದೇಶದ ಅಭಿವೃದ್ಧಿ: ವಿಶೇಷ ಅನುದಾನಕ್ಕೆ ರೂಪಕಲಾ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಕೆಜಿಎಫ್ ನಗರದಲ್ಲಿನ ಬಿಜಿಎಂಎಲ್ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಶಾಸಕಿ ಎಂ.ರೂಪಕಲಾ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ಬುಧವಾರ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾದ ಶಾಸಕಿ, ‘ಕೆಜಿಎಫ್ ನಗರಸಭೆ ವ್ಯಾಪ್ತಿಯ 18 ವಾರ್ಡ್‌ಗಳಲ್ಲಿ ಗಣಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಆ ವಾರ್ಡ್‌ಗಳಲ್ಲಿ ಶೌಚಾಲಯ, ಕುಡಿಯುವ ನೀರು, ಚರಂಡಿ, ರಸ್ತೆ, ಉದ್ಯಾನ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ಗಂಭೀರವಾಗಿದೆ’ ಎಂದು ತಿಳಿಸಿದರು.

‘ಕೆಜಿಎಫ್‌ ಜಗತ್ತಿಗೆ ಚಿನ್ನ ನೀಡಿದ ಮತ್ತು ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಹೈನುಗಾರಿಕೆಯ ಹರಿಕಾರ ಎಂ.ವಿ.ಕೃಷ್ಣಪ್ಪ ಅವರು ಪ್ರತಿನಿಧಿಸಿದ ಕ್ಷೇತ್ರವಾಗಿ ಇಡೀ ವಿಶ್ವದ ಗಮನ ಸೆಳೆದಿದೆ. 1864ರಲ್ಲಿ ಆರಂಭವಾದ ಚಿನ್ನದ ಗಣಿ 1972ರಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿತ್ತು. 2001ರಲ್ಲಿ ಗಣಿ ಮುಚ್ಚಿದ ಕಾರಣ ಕೆಜಿಎಫ್ ತನ್ನ ಮಹತ್ವ ಕಳೆದುಕೊಂಡಿದೆ’ ಎಂದು ವಿಷಾದಿಸಿದರು.

‘ಸಾವಿರಾರು ಅಡಿ ಆಳದಿಂದ ಚಿನ್ನ ತೆಗೆದು ನೀಡಿದ ಕಾರ್ಮಿಕರು ಇಂದು ನಿರ್ಗತಿಕರಾಗಿದ್ದಾರೆ. ಅವರ ಕುಟುಂಬಗಳು ಗಣಿ ವ್ಯಾಪ್ತಿಯ ಶೆಡ್‌ಗಳಲ್ಲೇ ಉಳಿದಿವೆ. ಈ ಜಾಗ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಸ್ಥಳೀಯ ಆಡಳಿತದಿಂದ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ’ ಎಂದು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದರು.

ಮೂಲಸೌಕರ್ಯ ಮರೀಚಿಕೆ: ‘ಕೆಜಿಎಫ್‌ ನಗರಸಭೆಯ 35 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳಲ್ಲಿ ಗಣಿ ಕಾರ್ಮಿಕರಿದ್ದು, ಈ ಭಾಗದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿವೆ. ಶೆಡ್‌ಗಳಲ್ಲೇ ವಾಸಿಸುತ್ತಿರುವ ಗಣಿ ಕಾರ್ಮಿಕರ ಪೈಕಿ ಶೇ 95ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಈ ಭಾಗದ ಅಭಿವೃದ್ಧಿಗೆ ಒತ್ತು ಕೊಡಬೇಕು’ ಎಂದು ಕೋರಿದರು.

‘ಗಣಿ ಕಾರ್ಮಿಕರ ಕುಟುಂಬಗಳ ಸದಸ್ಯರ ಸಂಖ್ಯೆ ಹೆಚ್ಚಿದ್ದರೂ, ಸಣ್ಣ ಶೆಡ್‌ನಲ್ಲೇ ವಾಸಿಸುವ ಸಂಕಷ್ಟ ಎದುರಾಗಿದೆ. ಅವರು ಬದುಕು ಸರಿಹೋಗಲು ಸರ್ಕಾರ ಕೆಜಿಎಫ್‌ನ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಮೀನು, ಬಿಜಿಎಂಎಲ್ ಒಡೆತನದಲ್ಲಿರುವ ಖಾಲಿ ಜಮೀನಿನಲ್ಲಿ ನಿವೇಶನಗಳನ್ನು ವಿಂಗಡಿಸಿ ನಿಯಮಾನುಸಾರ ವಸತಿಹೀನರಿಗೆ ಹಂಚಿಕೆ ಮಾಡಲು ವಿಶೇಷ ಕಾನೂನು ರೂಪಿಸಬೇಕು’ ಎಂದು ಮನವಿ ಮಾಡಿದರು.

‘ಚಿನ್ನದ ಗಣಿ ಸ್ಥಗಿತಗೊಂಡ ನಂತರ ಕಾರ್ಮಿಕರ ಬದುಕು ಬರ್ಬರವಾಗಿದೆ. ಕುಟುಂಬ ಪೋಷಣೆಗಾಗಿ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಪ್ರತಿನಿತ್ಯ ಕೆಲಸಕ್ಕಾಗಿ ಸಾವಿರಾರು ಮಂದಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಚಿನ್ನದ ಗಣಿ ಕಾರ್ಮಿಕರ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಒದಗಿಸಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು