ಸೋಮವಾರ, ಏಪ್ರಿಲ್ 6, 2020
19 °C
ಕಾಯಕ ಯೋಜನೆಯಡಿ ಹಸುಗಳ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ

ಹಾಲು ಉತ್ಪಾದನೆ ಕುಸಿತ: ಶಾಸಕ ಕೆ.ವೈ.ನಂಜೇಗೌಡ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಥಮ ಬಾರಿಗೆ ಹಾಲು ಉತ್ಪಾದನೆ ತೀವ್ರವಾಗಿ ಕುಸಿದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದ ಹಾಲು ಒಕ್ಕೂಟ ಈಗ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಇಳಿದಿದೆ ಎಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಆತಂಕ ವ್ಯಕ್ತಪಡಿಸಿದರು.

ನಗರದ ಅಮರಜ್ಯೋತಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಕೋಚಿಮುಲ್ ಮತ್ತು ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆ ಮತ್ತು ಬಡ್ಡಿ ರಹಿತವಾಗಿ ಹಸುಗಳನ್ನು ನೀಡುವ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.

ಇಂತಹ ಆತಂಕಕಾರಿ ಘಟನೆಯಿಂದ ಚೇತರಿಸಿಕೊಳ್ಳಲು ಹಾಗೂ ಹಾಲು ಉತ್ಪಾದನೆ ಹೆಚ್ಚಿಸಲು ಕೋಚಿಮುಲ್ ಮತ್ತು ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ಒಡಂಬಡಿಕೆ ಮಾಡಿಕೊಂಡು ಹಾಲು ಉತ್ಪಾದಕರಿಗೆ ಸೀಮೆಹಸುಗಳನ್ನು ನೀಡಿ ಹಾಲು ಉತ್ಪಾದನೆ ಹೆಚ್ಚಿಸುವ ಕಾಯಕ ಯೋಜನೆಗೆ ಚಾಲನೆ ನೀಡುತ್ತಿದೆ. ಈ ಕುರಿತ ಮೊದಲ ಕಾರ್ಯಕ್ರಮವನ್ನು ಮುಳಬಾಗಿಲಿನಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಒಕ್ಕೂಟ ಹಾಲು ಉತ್ಪಾದಕರ ಪರವಾಗಿದ್ದು, ಲೀಟರ್‌ ಹಾಲಿಗೆ ₹ 28 ನೀಡುತ್ತಿದೆ. ಸರ್ಕಾರ ₹ 5 ನೀಡುತ್ತಿದೆ. ಮುಂದಿನ ದಿನಗಳಲ್ಲಿ ₹ 5 ಹೆಚ್ಚಿಸುವ ಯೋಜನೆ ಇದೆ. ಹಾಲು ಉತ್ಪಾದಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಬೆಂಗಳೂರು ಯಲಹಂಕ ಬಳಿ ಸರ್ಕಾರ ಜಮೀನು ಮಂಜೂರು ಮಾಡಿದ್ದು ಸುಮಾರು 350 ಮಂದಿ ಇಲ್ಲಿ ವಿದ್ಯಾಭ್ಯಾಸ ಮಾಡಬಹುದಾಗಿದೆ ಎಂದರು.

ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಜೀವನಾಡಿಯಾಗಿರುವ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನೀಡಲು ಜಿಲ್ಲೆಯ ಎರಡು ಪ್ರಮುಖ ಸಂಸ್ಥೆಗಳಾದ ಕೋಚಿಮುಲ್ ಮತ್ತು ಜಿಲ್ಲಾ ಡಿಸಿಸಿ ಬ್ಯಾಂಕ್ ಒಂದಾಗಿವೆ. ಗ್ರಾಮ ಮಟ್ಟದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳು ಪಕ್ಷಾತೀತವಾಗಿ ಸಭೆ ನಡೆಸಿ ಹಸುಗಳ ಅಗತ್ಯವಿರುವವರನ್ನು ಗುರುತಿಸಬೇಕು ಎಂದು ಹೇಳಿದರು.

ಹಸುಗಳನ್ನು ಕೊಳ್ಳಲು ಸರ್ಕಾರ ನೀಡುತ್ತಿದ್ದ ಸಾಲವನ್ನು ₹ 50 ಸಾವಿರದಿಂದ ₹ 80 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ನೆರೆಯ ಆಂಧ್ರಪ್ರದೇಶದಲ್ಲಿ ಹಸು ಪಡೆಯಬೇಕು. ನೇರವಾಗಿ ಹಸುವಿನ ಮಾಲೀಕರಿಗೆ ಹಣ ಸಂದಾಯವಾಗುವುದು. ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ನೀಡುವಂತೆ ಶೂನ್ಯ ಬಡ್ಡಿ ದರದಲ್ಲಿ ಹಸು ಕೊಳ್ಳಲು ಸಾಲ ನೀಡುತ್ತಿದ್ದು ಪಡೆದ ಸಾಲವನ್ನು ಮರುಪಾವತಿ ಮಾಡಿ ಸಹಕಾರಿ ಸಂಸ್ಥೆ ಉಳಿಸಬೇಕು ಎಂದರು.

ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ಕಳೆದ 27 ವರ್ಷದಿಂದ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಕೋಚಿಮುಲ್ ಈ ವರ್ಷ ಹಾಲು ಉತ್ಪಾದನೆ ಇಳಿಕೆಯಿಂದ ದೊಡ್ಡ ಪೆಟ್ಟು ಉಂಟಾಗಿದೆ. ಹನ್ನೊಂದುವರೆ ಲಕ್ಷ ಲೀಟರ್ ಹಾಲಿನ ಪ್ರಮಾಣ ಈಗ 7.62 ಲಕ್ಷ ಲೀಟರ್‌ಗೆ ಇಳಿದಿದೆ. ಇದು ಮೊದಲಬಾರಿಯದು ಎಂದು ತಿಳಿಸಿದರು.

20 ಗುಂಟೆ ಜಮೀನು ಇದ್ದಲ್ಲಿ ಅದನ್ನು ಬ್ಯಾಂಕ್ ಅಡಮಾನ ಮಾಡಿಕೊಂಡು ₹ 80 ಸಾವಿರ ಬೆಲೆ ಬಾಳುವ ಹಸುವನ್ನು ನೀಡುತ್ತಿದೆ. ಇದಕ್ಕೆ ಕೋಚಿಮುಲ್‌ನಿಂದ ಟ್ಯಾಗ್ ಹಾಕಲಾಗುತ್ತದೆ ಎಂದರು.

ಮಾರ್ಚ್‌ 31ರೊಳಗೆ 500 ಹಸುಗಳನ್ನು ಫಲಾನುಭವಿಗಳಿಗೆ ನೀಡಬೇಕಾಗಿದೆ. ಸಮಯಾವಧಿ ಕಡಿಮೆ ಇರುವುದರಿಂದ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿ ಕಾರ್ಯನಿರತರಾಗಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಬೇಕು ಎಂದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ತಿಪ್ಪಾರೆಡ್ಡಿ ಮಾತನಾಡಿದರು.

ಕೋಚಿಮುಲ್ ನಿರ್ದೇಶಕರಾದ ಹರೀಶ್, ದಳಸನೂರು ಹನುಮೇಶ್, ಅನಿಲ್‌ಕುಮಾರ್, ಆರ್.ನಾರಾಯಣರೆಡ್ಡಿ, ಮುನಿಶಾಮಿಗೌಡ, ಅನಿಲ್‌ಕುಮಾರ್, ರಘುಪತಿರೆಡ್ಡಿ, ವಿವೇಕನಂದ್, ಡಾ.ಶ್ರೀಧರಮೂರ್ತಿ, ಶ್ರೀರಾಮ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು