ಮಂಗಳವಾರ, ಜೂನ್ 28, 2022
25 °C
ಅಂತರರಾಜ್ಯ ಗಡಿಯ ರಾಯಲ್ಪಾಡು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ವಸೂಲಿ ದಂಧೆ

ಬೀದಿಗಿಳಿದು ಶಾಸಕ ರಮೇಶ್‌ಕುಮಾರ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಡಿ ಭಾಗದ ರಾಯಲ್ಪಾಡು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಸೂಲಿ ದಂಧೆ ನಡೆಸುತ್ತಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್ ಬೆಂಬಲಿಗರೊಂದಿಗೆ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಪ್ರತಿಭಟನೆ ಮಾಡಿದರು.

‘ಅಂತರರಾಜ್ಯ ಗಡಿಗೆ ಹೊಂದಿಕೊಂಡಿರುವ ರಾಯಲ್ಪಾಡು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ನಿತ್ಯವೂ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಚೆಕ್‌ಪೋಸ್ಟ್‌ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಪೊಲೀಸರ ವಸೂಲಿ ದಂಧೆ ಮೇರೆ ಮೀರಿದೆ’ ಎಂದು ರಮೇಶ್‌ಕುಮಾರ್‌ ಕಿಡಿಕಾರಿದರು.

‘ಎಸ್‌ಐ ನರಸಿಂಹಮೂರ್ತಿ ಅವರಿಗೆ ಹಲವು ಬಾರಿ ಬುದ್ಧಿ ಹೇಳಿದರೂ ತಪ್ಪು ತಿದ್ದಿಕೊಳ್ಳುತ್ತಿಲ್ಲ. ಠಾಣೆ ಸಿಬ್ಬಂದಿಯನ್ನು ಬಿಟ್ಟು ಚೆಕ್‌ಪೋಸ್ಟ್‌ನಲ್ಲಿ ವಾಹನ ಸವಾರರಿಂದ ಹಣ ವಸೂಲಿ ಮಾಡಿಸುತ್ತಿದ್ದಾರೆ. ಅಲ್ಲದೇ, ಸಾರ್ವಜನಿಕರ ಬಳಿ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿಲ್ಲ. ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

‘ಪೊಲೀಸರು ಮತ್ತು ಇಲಾಖೆ ಮೇಲೆ ನನಗೆ ಅಪಾರ ಗೌರವವಿದೆ. ನನ್ನ ಈ ಹೋರಾಟ ವಸೂಲಿ ಮಾಡುವ ಭ್ರಷ್ಟ ಅಧಿಕಾರಿ ವಿರುದ್ಧ ಮಾತ್ರ. ವಾಹನಗಳಲ್ಲಿ ತರಕಾರಿ ಸಾಗಿಸುವ ರೈತರು ಚೆಕ್‌ಪೋಸ್ಟ್‌ ಮಾರ್ಗವಾಗಿ ಓಡಾಡುತ್ತಾರೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದು, ಪೊಲೀಸರು ಹಣ ಕೊಡುವಂತೆ ಅವರನ್ನು ಪೀಡಿಸುತ್ತಾರೆ. ಹಣ ಕೊಡದಿದ್ದರೆ ದೌರ್ಜನ್ಯ ನಡೆಸುತ್ತಾರೆ’ ಎಂದು ಆರೋಪಿಸಿದರು.

‘ರೋಗಿಗಳನ್ನು ಆಸ್ಪತ್ರೆ ಕರೆದೊಯ್ಯುವ ವಾಹನ ಚಾಲಕರೂ ಸಹ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಗೆ ಹಣ ಕೊಡಬೇಕಾದ ದುಸ್ಥಿತಿ ಇದೆ. ಇದನ್ನು ಸಹಿಸುವುದು ಹೇಗೆ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಗೌರವವಿದೆ: ‘ಪೊಲೀಸ್‌ ವ್ಯವಸ್ಥೆ ಮೇಲೆ ಅಪಾರ ಗೌರವವಿದೆ. ಕೋವಿಡ್ ಸಂಕಷ್ಟದಲ್ಲಿ ಮನೆ ಮಠ ಬಿಟ್ಟು ಕರ್ತವ್ಯನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕಷ್ಟು ಮಂದಿ ಇದ್ದಾರೆ. ಕರ್ತವ್ಯವೇ ದೇವರೆಂದು ಭಾವಿಸಿ ಕೆಲಸದ ವೇಳೆ ಕೊರೊನಾ ಸೋಂಕು ತಗುಲಿ ಮೃತಪಟ್ಟವರೂ ಇದ್ದಾರೆ. ಅವರಿಗೆಲ್ಲಾ ಅಗೌರವ ತೋರುವ ಕೆಲಸ ಎಂದಿಗೂ ಮಾಡುವುದಿಲ್ಲ. ಆದರೆ, ಜನರನ್ನು ಸುಲಿಗೆ ಮಾಡುವವರನ್ನು ಬಿಡುವುದಿಲ್ಲ. ನರಸಿಂಹಮೂರ್ತಿ ಅವರಂತಹ ಭ್ರಷ್ಟ ಅಧಿಕಾರಿಗಳ ದೌರ್ಜನ್ಯ ಅಂತ್ಯವಾಗಬೇಕು’ ಎಂದು ಗುಡುಗಿದರು.

‘ರಾಯಲ್ಪಾಡು ಸುತ್ತಮುತ್ತ ಜೂಜು ಅಡ್ಡೆಗಳು ನಡೆಯುತ್ತಿರುವ ಬಗ್ಗೆ ದೂರು ಬಂದಿವೆ. ನರಸಿಂಹಮೂರ್ತಿ ಅವರ ಸ್ಥಾನಕ್ಕೆ ಬೇರೆ ಎಸ್‌ಐ ಬಂದ ನಂತರ ಎಲ್ಲವನ್ನೂ ಸರಿಪಡಿಸುತ್ತೇವೆ. ತಾಡಿಗೋಳ್ ಬಳಿಯೂ ಪೊಲೀಸ್‌ ಸಿಬ್ಬಂದಿಯೊಬ್ಬರೂ ಇದೇ ರೀತಿ ನಡೆದುಕೊಳ್ಳುತ್ತಿದ್ದು, ಅವರ ವಿರುದ್ಧವ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಎಚ್ಚರಿಕೆ ನೀಡಿದ್ದೆ: ‘ನರಸಿಂಹಮೂರ್ತಿ ವರ್ತನೆ ಸಂಬಂಧ ಜನರಿಂದ ಸಾಕಷ್ಟು ದೂರು ಬಂದಿದ್ದವು. ಮಾನ ಮರ್ಯಾದೆ ಅಮಾನವೀಯವಾಗಿ ವರ್ತಿಸುತ್ತಿದ್ದ ಕಾರಣ ಅವರಿಗೆ ಬಿಸಿ ಮುಟ್ಟಿಸುವ ಉದ್ದೇಶಕ್ಕೆ ಪ್ರತಿಭಟನೆ ಮಾಡಬೇಕಾಯಿತು. ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದೆ. ಆದರೆ, ಅತಿಯಾಗಿ ವರ್ತಿಸುತ್ತಿದ್ದ ಆತ ತನ್ನ ತಪ್ಪು ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಆತನನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಿರುವುದರಿಂದ ಸದ್ಯಕ್ಕೆ ಹೋರಾಟ ಕೈಬಿಡುತ್ತಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.