ಕೋಲಾರ: ‘ದಲಿತರು ಪ್ರಜ್ಞಾವಂತರಾಗಿದ್ದು ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರಂಥ ಐಕಾನ್ ಇದ್ದಾರೆ. ಹಿಂದುಳಿದ ವರ್ಗದವರಿಗೆ ಅಂಥ ಯಾವ ಐಕಾನ್ ಇಲ್ಲದೇ ತ್ರಿಶಂಕು ಸ್ಥಿತಿಗೆ ಸಿಲುಕಿದ್ದೇವೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ನಡೆದ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ನನಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯಲ್ಲಿ ಅನ್ಯಾಯ ಆಗಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯ ಸ್ಥಾನಕ್ಕಿಂತ ದೊಡ್ಡ ಹುದ್ದೆ ಬೇಕೇ’ ಎಂದು ಅವರು ಪ್ರಶ್ನಿಸಿದರು.
‘ಇದು ಪಕ್ಷ ವಿರೋಧಿ ಸಭೆಯಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ತೀರ್ಮಾನದಂತೆಯೇ ಈ ಸಭೆ ಮಾಡುತ್ತಿದ್ದೇವೆ. ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದು ತಪ್ಪೇ? ನಾವು ಆಯೋಜಿಸುತ್ತಿರುವುದು ಪ್ರತ್ಯೇಕ ಸಭೆಯಲ್ಲ. ಪಕ್ಷಾತೀತವಾಗಿ ಕರೆದಿರುವ ಸಭೆ. ಜನಜಾಗೃತಿಗಾಗಿ ಈ ಸಭೆ ನಡೆಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
‘ಕೆಲ ಸರ್ಕಾರಗಳ ಅವಧಿಯಲ್ಲಿ ದೊಡ್ಡ ಜಾತಿಗಳಿಗೆ ಸಾವಿರಾರು ಕೋಟಿ ಅನುದಾನ ಸಿಕ್ಕಿದೆ. ಬಡವರಿಗೆ ಒಂದೆರಡು ಕೋಟಿ ಅನುದಾನ ನೀಡಲಾಗುತ್ತಿದೆ. ಏಕೆ ಎಂದು ಪ್ರಶ್ನಿಸಲು ಹಿಂದುಳಿದ ವರ್ಗದವರು (ಓಬಿಸಿ) ಸಂಘಟಿತರಾಗಿಲ್ಲ’ ಎಂದರು.
‘ಶೇ 50ರಷ್ಟು ಇರುವ ತಳ ಸಮುದಾಯ ಶೇ 64ರಷ್ಟು ಜಿಎಸ್‌ಟಿ ಪಾವತಿ ಮಾಡುತ್ತಿದೆ. ಶೇ 12ರಷ್ಟು ಇರುವ ಮೇಲ್ವರ್ಗ ಶೇ 4ರಷ್ಟು ಜಿಎಸ್‌ಟಿ ಪಾವತಿಸುತ್ತಿದೆ. ದುಡಿದು ಖಜಾನೆ ತುಂಬಿಸುವ ಶ್ರಮಜೀವಿಗಳ ಸಮುದಾಯಕ್ಕೆ ಜಿಎಸ್‌ಟಿ ಹಣ ಸರಿಯಾದ ರೀತಿಯಲ್ಲಿ ಹಂಚಿಕೆ ಆಗಬೇಕು. ಸಾಮಾಜಿಕ ನ್ಯಾಯ ಸಿಗಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಸಮಾನ ಅವಕಾಶ ಸಿಗಬೇಕು’ ಎಂದು ಹರಿಪ್ರಸಾದ್ ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.