ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ‘ಕೈ’–ಜೆಡಿಎಸ್‌ ಕೋಟೆಯಲ್ಲಿ ಗೆಲುವಿಗೆ ‘ಕಮಲ’ ತುಡಿತ

ಕ್ಷೇತ್ರದಲ್ಲಿ ಹಣದ ಹೊಳೆ: ಗುಟ್ಟು ಬಿಟ್ಟು ಕೊಡದ ಮತದಾರರು
Last Updated 6 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಭದ್ರಕೋಟೆ ಅವಿಭಜಿತ ಕೋಲಾರ ಜಿಲ್ಲಾ ವಿಧಾನ ಪರಿಷತ್‌ ಕ್ಷೇತ್ರದಲ್ಲಿ ಗೆಲುವಿಗೆ ‘ಕಮಲ’ದ ತುಡಿತ ಹೆಚ್ಚಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಇದ್ದು, ಕಮಲ ಪಾಳಯವು ಗೆಲುವಿನ ಮಾಯ ಜಿಂಕೆಯ ಬೆನ್ನಟ್ಟಿದೆ.

‘ಕೈ’ ಪಾಳಯದಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ಪರಾಭವಗೊಂಡಿದ್ದ ಎಂ.ಎಲ್‌.ಅನಿಲ್‌ಕುಮಾರ್‌ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದ್ದು, ಪಕ್ಷದೊಳಗಿನ ಆಂತರಿಕ ಕಚ್ಚಾಟವೇ ಪಕ್ಷಕ್ಕೆ ಮುಳುವಾಗುವ ಮುನ್ಸೂಚನೆ ಕಾಣುತ್ತಿದೆ.

ಹಿಂದಿನ ಸೋಲಿನ ಅನುಭವದಿಂದ ಪಾಠ ಕಲಿಯದ ‘ಕೈ’ ನಾಯಕರು ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿದರೂ ಪಕ್ಷದೊಳಗೆ ದೊಡ್ಡ ಅಂತರ್ಯುದ್ಧವೇ ನಡೆಯುತ್ತಿದೆ. ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಬಣಗಳ ಮೇಲಾಟವು ಮಗ್ಗಲು ಮುಳ್ಳಾಗಿ ‘ಕೈ’ ಚುಚ್ಚುತ್ತಿದೆ. ಅವಳಿ ಜಿಲ್ಲೆಯಿಂದ ದೂರವೇ ಉಳಿದಿರುವ ಮುನಿಯಪ್ಪ ಬೆಂಬಲಿಗರ ಮೂಲಕ ಭಿನ್ನಮತದ ದಾಳ ಉರುಳಿಸಿದ್ದಾರೆ.

ಬಣಗಳ ಗುದ್ದಾಟದ ಗಾಯಕ್ಕೆ ಮುಲಾಮು ಹಚ್ಚಲಾಗದೆ ಅಸಹಾಯಕವಾಗಿರುವ ಹೈಕಮಾಂಡ್‌ ಪಕ್ಷದ ಸ್ಥಳೀಯ ಶಾಸಕರಿಗೆ ಜವಾಬ್ದಾರಿ ನೀಡಿ ಕೈ ತೊಳೆದುಕೊಂಡಿದೆ. ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌ ಹಾಗೂ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಕಾಂಗ್ರೆಸ್‌ಗೆ ಜೈ ಎಂದಿದ್ದು, ‘ಕೈ’ಗೆ ಆನೆ ಬಲ ಬಂದಿದೆ.

ಜೆಡಿಎಸ್‌ಗೆ ಸವಾಲು: ಹಿಂದಿನ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಪಕ್ಷವು ವಿ.ಇ.ರಾಮಚಂದ್ರ (ವಕ್ಕಲೇರಿ ರಾಮು) ಅವರನ್ನು ಕಣಕ್ಕಿಳಿಸಿದೆ. ಅವಳಿ ಜಿಲ್ಲೆಯಲ್ಲಿ ಜೆಡಿಎಸ್‌ನ ಇಬ್ಬರು ಶಾಸಕರ ಪೈಕಿ ಕೋಲಾರ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿದ್ದು, ಪಕ್ಷಕ್ಕೆ ಕೊಂಚ ಹಿನ್ನಡೆಯಾಗಿದೆ.

ಪಕ್ಷದ ಕೆಲ ಹಿರಿಯ ಮುಖಂಡರು ವರಿಷ್ಠರ ವಿರುದ್ಧ ಮುನಿದಿದ್ದು, ಒಳ ಏಟಿನ ಭೀತಿ ಕಾಡುತ್ತಿದೆ. ರಮೇಶ್‌ಕುಮಾರ್‌ ಬಣದ ವಿರುದ್ಧ ಕುದಿಯುತ್ತಿರುವ ಮುನಿಯಪ್ಪ ಜತೆ ಕೈ ಕುಲುಕಲು ಜೆಡಿಎಸ್‌ ವರಿಷ್ಠರು ತೆರೆಮರೆಯಲ್ಲೇ ತಂತ್ರಗಾರಿಕೆ ರೂಪಿಸಿದ್ದಾರೆ.

ಆಪರೇಷನ್‌ ಕಮಲ: ಕೇಸರಿ ಪಡೆಯಿಂದ ಬಿಜೆಪಿ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ಕಣಕಿಳಿದಿದ್ದಾರೆ. ಬಿಜೆಪಿಯು ಕಾಂಗ್ರೆಸ್‌ನ ಒಳ ಜಗಳದ ಲಾಭ ಪಡೆದು ಜಯದ ಖಾತೆ ತೆರೆಯುವ ಕನಸು ಕಾಣುತ್ತಿದೆ. ಜೆಡಿಎಸ್‌ ಜತೆಗಿನ ಮೈತ್ರಿ ಮಾತುಕತೆ ಮುರಿದು ಬಿದ್ದಿದ್ದು,ಸಚಿವ ಡಾ.ಕೆ.ಸುಧಾಕರ್‌ ತಮ್ಮ ರಾಜಕೀಯ ಬದ್ಧವೈರಿ ರಮೇಶ್‌ಕುಮಾರ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಚುನಾವಣೆಯನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ಶತಾಯಗತಾಯ ಗೆಲ್ಲುವ ಹಟಕ್ಕೆ ಬಿದ್ದಿರುವ ಕೇಸರಿ ಕಲಿಗಳು ಆಪರೇಷನ್‌ ಕಮಲ ನಡೆಸಿದ್ದಾರೆ. ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು, ಗುಟ್ಟು ಬಿಟ್ಟು ಕೊಡದ ಮತದಾರರು ಕದನ ಕುತೂಹಲ ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT