ಶನಿವಾರ, ಜನವರಿ 22, 2022
16 °C
ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ್ದ ಗಡುವು ಅಂತ್ಯ

ವಿಧಾನ ಪರಿಷತ್‌ ಚುನಾವಣೆ: ಕಣದಲ್ಲಿ 4 ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ವಿಧಾನ ಪರಿಷತ್‌ ಚುನಾವಣೆ ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ್ದ ಗಡುವು ಶುಕ್ರವಾರ ಕೊನೆಗೊಂಡಿದ್ದು, ಅಂತಿಮವಾಗಿ 4 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಎಂ.ಎಲ್‌.ಅನಿಲ್‌ಕುಮಾರ್‌, ಬಿಜೆಪಿಯ ಡಾ.ಕೆ.ಎನ್‌.ವೇಣುಗೋಪಾಲ್‌, ಜೆಡಿಎಸ್‌ನ ವಿ.ಇ.ರಾಮಚಂದ್ರ (ವಕ್ಕಲೇರಿ ರಾಮು) ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಪಿ.ಅನಿಲ್‌ಕುಮಾರ್‌ ಪೈಕಿ ಯಾರೊಬ್ಬರೂ ಉಮೇದುವಾರಿಕೆ ಹಿಂಪಡೆಯಲಿಲ್ಲ.

ಈ ನಾಲ್ಕೂ ಮಂದಿ ನ.23ರಂದು ನಾಮಪತ್ರ ಸಲ್ಲಿಸಿದ್ದರು. ಬಳಿಕ ನ.24ರಂದು ನಾಮಪತ್ರಗಳನ್ನು ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿಯು ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಘೋಷಿಸಿ ಸಿಂಧುಗೊಳಿಸಿದ್ದರು. ಬಳಿಕ ಉಮೇದುವಾರಿಕೆ ಹಿಂಪಡೆಯಲು 2 ದಿನಗಳ ಕಾಲಾವಕಾಶ ನೀಡಲಾಗಿತ್ತು.
ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿಯಾಗಿ ಜೆಡಿಎಸ್‌ ಅಭ್ಯರ್ಥಿ ವಕ್ಕಲೇರಿ ರಾಮು ಅವರು ನಾಮಪತ್ರ ಹಿಂಪಡೆಯುತ್ತಾರೆ ಎಂಬ ಗುಸುಗುಸು ಕೇಳಿಬಂದಿತ್ತು.

ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿ ಮುಳಬಾಗಿಲು ತಾಲ್ಲೂಕಿನ ಎಂ.ಪಿ.ಅನಿಲ್‌ಕುಮಾರ್‌ ಅವರು ಉಮೇದುವಾರಿಕೆ ವಾಪಸ್‌ ಪಡೆದು ಕಣದಿಂದ ಹಿಂದೆ ಸರಿಯುತ್ತಾರೆ ಎಂದು ಚರ್ಚೆ ನಡೆದಿತ್ತು. ಅಂತಿಮವಾಗಿ ಈ ಊಹಾಪೋಹಗಳೆಲ್ಲಾ ಹುಸಿಯಾದವು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ‘ನಾಮಪತ್ರ ಹಿಂಡೆಯಲು ನೀಡಿದ್ದ ಗಡುವು ಮುಗಿದಿದ್ದು, ಅಂತಿಮವಾಗಿ 4 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ’ ಎಂದು ತಿಳಿಸಿದರು.

‘ಡಿ.10ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯುತ್ತದೆ. ಅವಿಭಜಿತ ಕೋಲಾರ ಜಿಲ್ಲೆಯ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ಸದಸ್ಯರು ಮತದಾರರಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 2,925 ಮಂದಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2,675 ಮಂದಿ ಮತದಾರರಿದ್ದಾರೆ. ಈ ಪೈಕಿ 2,675 ಮಂದಿ ಪುರುಷ ಹಾಗೂ 2,925 ಮಹಿಳಾ ಮತದಾರರಿದ್ದರೆ’ ಎಂದು ಮಾಹಿತಿ ನೀಡಿದರು.

‘ಎರಡೂ ಜಿಲ್ಲೆಯಿಂದ 321 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 73 ಅತಿ ಸೂಕ್ಷ್ಮ ಮತ್ತು 105 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನದ ದಿನದ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಮಾಡಲಾಗುತ್ತದೆ. ಡಿ.14ರಂದು ಕೋಲಾರ ಜಿಲ್ಲಾ ಕೇಂದ್ರದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಮತ ಎಣಿಕೆ ಮಾಡಿ ಫಲಿತಾಂಶ ಘೋಷಿಸಲಾಗುತ್ತದೆ’ ಎಂದು ವಿವರಿಸಿದರು.

ಏಡ್ಸ್‌ ದಿನಾಚರಣೆ: ‘ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಿ.1ರಂದು ಬೆಳಿಗ್ಗೆ 11.30ಕ್ಕೆ ವಿಶ್ವ ಏಡ್ಸ್ ದಿನಾಚಾರಣೆ ಹಮ್ಮಿಕೊಳ್ಳಲಾಗಿದೆ. ‘ಅಸಮಾನತೆ ಕೊನೆಗೊಳಿಸಿ. ಏಡ್ಸ್ ಕೊನೆಗೊಳಿಸಿ. ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ’ ಎಂಬುದು ಈ ವರ್ಷದ ಘೋಷಣೆಯಾಗಿದೆ. ಸಮುದಾಯದಲ್ಲಿ ಏಡ್ಸ್ ನಿರ್ಮೂಲನೆ ಮಾಡಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಎಚ್‌ಐವಿ ಸೋಂಕು ಕೇವಲ ಅಸುರಕ್ಷಿತ ಲೈಂಗಿಕ ಸಂಪರ್ಕ, ತಪಾಸಣೆಗೊಳಿಸದ ರಕ್ತ ಮತ್ತು ರಕ್ತದ ಉಪ ಪದಾರ್ಥಗಳಿಂದ, ಸೋಂಕಿತ ತಾಯಿಯಿಂದ ಮಗುವಿಗೆ ಹಾಗೂ ಸೋಂಕಿತ ಸೂಜಿ, ಸಿರಿಂಜ್ ಮತ್ತು ಶಸ್ತ್ರಕ್ರಿಯೆ ಸಾಧನಗಳಿಂದ ಮಾತ್ರ ಹರಡುತ್ತದೆ’ ಎಂದು ತಿಳಿಸಿದರು.

ಚುನಾವಣಾ ಶಾಖೆ ತಹಶೀಲ್ದಾರ್‌ ನಾಗವೇಣಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಮಲಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು