ಬುಧವಾರ, ನವೆಂಬರ್ 13, 2019
17 °C
ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲಗೌಡ ವಾಗ್ದಾಳಿ

ಮೋದಿ ಸರ್ಕಾರ ಬಂಡವಾಳಶಾಹಿಗಳ ಪರ

Published:
Updated:
Prajavani

ಕೋಲಾರ: ‘ಕೇಂದ್ರ ಸರ್ಕಾರ ಕಾರ್ಮಿಕರ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಕಾರ್ಮಿಕ ಕಾಯಿದೆ ರೂಪಿಸುವ ಬದಲು ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪರವಾದ ಕಾನೂನು ರೂಪಿಸುತ್ತಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲಗೌಡ ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ನಡೆದ ಸಿಐಟಿಯು 5ನೇ ತಾಲ್ಲೂಕು ಸಮ್ಮೇಳನದಲ್ಲಿ ಮಾತನಾಡಿ, ‘ಕಾರ್ಮಿಕರು ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರ ನಡೆಸಿದ ಹೋರಾಟದ ಫಲವಾಗಿ ದೇಶದಲ್ಲಿ 44 ಕಾರ್ಮಿಕ ಕಾನೂನು ಜಾರಿಯಲ್ಲಿವೆ. ಇದೀಗ ಕೇಂದ್ರವು ಈ ಕಾನೂನುಗಳಿಗೆ ತಿದ್ದುಪಡಿ ತಂದು 4 ಮಸೂದೆಯಾಗಿ ಬದಲಿಸಲು ಮುಂದಾಗಿದೆ. ಹೊಸ ಕಾಯಿದೆಗಳು ಕಾರ್ಮಿಕರ ಪರವಾಗಿ ಇರುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ತಿಂಗಳ ವೇತನ ₹ 21 ಸಾವಿರಕ್ಕಿಂತ ಕಡಿಮೆಯಿರುವ ನೌಕರರಿಗೆ ಇಎಸ್‍ಐ ಸೌಲಭ್ಯದಲ್ಲಿ ಕಾರ್ಮಿಕರ ವೇತನದಲ್ಲಿನ ಕಡಿತ ಶೇ 1.75ರಷ್ಟು ಹಾಗೂ ಮಾಲೀಕನ ಪಾಲು ಶೇ 4.75ರಷ್ಟಿತ್ತು. ಕೇಂದ್ರವು ಇದೀಗ ಕಾರ್ಮಿಕರ ವೇತನ ಪಾಲನ್ನು ಶೇ 1ಕ್ಕೆ ಹಾಗೂ ಮಾಲೀಕರ ಪಾಲನ್ನು ಶೇ 3ಕ್ಕೆ ಇಳಿಸಲು ಹೊರಡಿದೆ. ದೆಹಲಿಯಲ್ಲಿ ನಡೆದ ಇಎಸ್‍ಐ ಕಾರ್ಪೋರೇಷನ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಡ್ಡಾಯವಾಗಿದ್ದ ಇಎಸ್‍ಐ ಐಚ್ಛಿಕ ಹಾಗೂ 55 ವರ್ಷದ ಮಿತಿಯನ್ನು 45 ವರ್ಷಕ್ಕೆ ಸೀಮಿತಗೊಳಿಸಲಾಗುತ್ತಿದೆ. ಕೇಂದ್ರವು ಭವಿಷ್ಯದಲ್ಲಿ ಇಎಸ್‍ಐ ಸೌಲಭ್ಯವೇ ಇಲ್ಲದಂತೆ ಮಾಡಿ ಕಂಪನಿ ಮತ್ತು ಕಾರ್ಖಾನೆ ಮಾಲೀಕರಿಗೆ ಹಣ ಉಳಿಸಿಕೊಡುವ ಹುನ್ನಾರ ರೂಪಿಸಿದೆ’ ಎಂದು ಟೀಕಿಸಿದರು.

ಬೃಹತ್‌ ಪ್ರತಿಭಟನೆ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ, ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಪಾತಾಳಕ್ಕೆ ಹೋಗಿ ಆರ್ಥಿಕತೆ ಕುಸಿಯುತ್ತಿದೆ. ಆಟೊ ಮೊಬೈಲ್ ಕ್ಷೇತ್ರ ಮುಚ್ಚುವ ಸ್ಥಿತಿಗೆ ತಲುಪಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಬಡವರ ಪರ ಎನ್ನುವ ಮೋದಿ ಗುತ್ತಿಗೆ ಪದ್ಧತಿ ಯಾಕೆ ರದ್ದುಪಡಿಸಲಿಲ್ಲ? ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಬಡವರಿಗೆ ಸಿಕ್ಕಿಲ್ಲ. ದೇಶದಲ್ಲಿ ಎಡ ಪಕ್ಷಗಳ ಸರ್ಕಾರ ಇರುವೆಡೆ ಮಾತ್ರ ಕಾರ್ಮಿಕರು ಹಾಗೂ ರೈತರ ಪರವಾದ ಕಾನೂನು ಜಾರಿಯಲ್ಲಿವೆ. ಬಂಡವಾಳಶಾಹಿಗಳು, ಕಂಪನಿ ಮಾಲೀಕರ ಪರವಾದ ಸರ್ಕಾರವನ್ನು ಸಿಐಟಿಯು ಒಪ್ಪುವುದಿಲ್ಲ. ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ಎಡ ಪಕ್ಷಗಳ ನೇತೃತ್ವದಲ್ಲಿ ಸೆ.30ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ತಿಳಿಸಿದರು.

ಸಂಘಟಿತ ಹೋರಾಟ: ‘ಕೇಂದ್ರವು ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸುತ್ತಾ ಬ್ರಿಟೀಷರ ಕಾರ್ಮಿಕ ಕಲ್ಯಾಣ ಕಾಯಿದೆಯನ್ನು ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ. ಕಾಯಂ ನೇಮಕಾತಿ ಕೈಬಿಟ್ಟು ಗುತ್ತಿಗೆ ಪದ್ಧತಿ ಉತ್ತೇಜಿಸುತ್ತಾ ಕಾರ್ಮಿಕರಲ್ಲಿ ಅಭದ್ರತೆ ಸೃಷ್ಟಿಸುತ್ತಿದೆ. ಕೇಂದ್ರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಸಂಘಟನೆಯು ಸಂಘಟಿತ ಹೋರಾಟ ನಡೆಸುತ್ತದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಸಿಐಟಿಯು ಜಿಲ್ಲಾ ಘಟಕದ ಖಜಾಂಚಿ ಎಚ್.ಬಿ.ಕೃಷ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಕೇಶವರಾವ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)