ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಸರ್ಕಾರದ್ದು ಆದರೆ ಶ್ರೇಯ ಕಾಂಗ್ರೆಸ್‌ ಶಾಸಕರದ್ದು: ಸಂಸದ ಎಸ್.ಮುನಿಸ್ವಾಮಿ

Last Updated 26 ಜನವರಿ 2020, 13:37 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೊಳಿಸಿದ್ದು, ಕಾಂಗ್ರೆಸ್ ಶಾಸಕರು ಇದರ ಶ್ರೇಯ ಪಡೆಯುತ್ತಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವನ್ನು ಯಾವ ಶಾಸಕರು ತಮ್ಮ ಮನೆಯಿಂದ ಕೊಟ್ಟಿಲ್ಲ. ಆ ಹಣ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಜೂರು ಮಾಡಿರುವುದು’ ಎಂದರು.

‘ಜಿಲ್ಲೆಯ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಅವರ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಆದರೆ, ಮಾಲೂರು ಶಾಸಕ ಕೆ.ವೈ.ನಂಜೇಗೌಡರು ತಾನೇ ಅನುದಾನ ತಂದಿರುವುದಾಗಿ ಹಾದಿಬೀದಿಯಲ್ಲಿ ಹೇಳುತ್ತಿದ್ದಾರೆ. ಬಿಟ್ಟಿ ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿರುವ ಅವರಿಗೆ ನಾಚಿಕೆಯಾಗಬೇಕು’ ಎಂದು ವ್ಯಂಗ್ಯವಾಡಿದರು.

‘ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾರೂ ತಾರತಮ್ಯ ಮಾಡಬಾರದು. ಈ ಹಿಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ನಂಜೇಗೌಡರು ಮಾಲೂರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬ ಲೆಕ್ಕ ಕೊಡಲಿ’ ಎಂದು ಸವಾಲು ಹಾಕಿದರು.

‘ಫೆಬ್ರುವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಜಿಲ್ಲೆಯನ್ನು ಅಟಲ್ ಭೂ ಯೋಜನೆ ವ್ಯಾಪ್ತಿಗೆ ಸೇರಿಸಲಾಗಿದೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೆಜಿಎಫ್‌ನಲ್ಲಿ ಚಿನ್ನದ ಗಣಿ ಪುನರಾರಂಭಿಸುವ ಸಂಬಂಧ ಕೇಂದ್ರ ಸಚಿವರ ಜತೆ ಚರ್ಚಿಸಿದ್ದು, ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಧಾನ ಮೋದಿಯವರ ಜತೆ ಚರ್ಚಿಸಿ ಸದ್ಯದಲ್ಲೇ ಗಣಿ ಪುನರಾರಂಭ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT